ಹೆಬ್ಬಾಳ ಟ್ರಾಫಿಕ್‌ನಲ್ಲಿ ಇನ್ನು ಗಂಟೆಗಟ್ಟಲೆ ಕಾಯಬೇಕಿಲ್ಲ, ಸರ್ಕಾರ ಕೊಡ್ತು ಗುಡ್‌ನ್ಯೂಸ್
ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ಸ್ಥಳಗಳಲ್ಲಿ ಒಂದಾಗಿದೆ. ಪೀಕ್ ಅವರ್‌ಗಳಲ್ಲಿ ಈ ಫ್ಲೈಓವರ್ ದಾಟುವಷ್ಟರಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಹೆಚ್ಚುತ್ತಲೇ ಇದೆ. ಈ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಲೂ ಟ್ರಾಫಿಕ್ ಹೆಚ್ಚಾಗಿದ್ದು, ಇದಕ್ಕೆ ಶೀಘ್ರದಲ್ಲೇ ಮುಕ್ತಿ ನೀಡಲು ಸರ್ಕಾರ ಗಡುವು ನೀಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕೆ.ಆರ್.ಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಎರಡು ಮೀಸಲು ಲೇನ್‌ಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿದ್ದು, ಇದನ್ನು ಮುಂದಿನ ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಗಡುವು ನೀಡಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಮತ್ತು ಐಟಿ ಹಬ್ ಎಂದು ಕರೆಸಿಕೊಂಡಿರುವ ಹೆಬ್ಬಾಳದಲ್ಲಿ ಭಾರೀ ವಾಹನಗಳ ದಟ್ಟಣೆ ಜೊತೆಗೆ ಈ ಕಾಮಗಾರಿಗಳಿಂದ ಕಿರಿಕಿರಿ ಉಂಟಾಗುತ್ತಲೇ ಇದೆ. ಈ ಮಾರ್ಗಗಳಲ್ಲಿ ಸಂಚರಿಸುವ ವಾಹನಗಳು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿಯೂ ಇದೆ.
ಈ ಹೆಚ್ಚು ದಟ್ಟಣೆಯ ಜಂಕ್ಷನ್‌ನಲ್ಲಿ ಟ್ರಾಫಿಕ್ ಜೊತೆಗೆ ಕಾಮಗಾರಿ ನಡೆಸುವುದು ಪ್ರಗತಿಯನ್ನು ನಿಧಾನಗೊಳಿಸಿದೆ. ಆದರೆ ಮುಂದಿನ ನಾಲ್ಕು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಯೋಜನೆಯು ವಿಮಾನ ನಿಲ್ದಾಣದ ಕಡೆಗೆ ಎದುರಾಗುವ ದಟ್ಟಣೆಯನ್ನು ಪ್ರತ್ಯೇಕಿಸಲಿದೆ. ಏರ್‌ಪೋರ್ಟ್ ಹೊರತುಪಡಿಸಿ, ಇತರ ವಾಹನಗಳಿಗಾಗಿ ಎರಡು ವಿಶೇಷ ಲೇನ್‌ಗಳನ್ನು ನಿರ್ಮಿಸಲಾಗುತ್ತಿದೆ. ಪ್ರಮುಖವಾಗಿ ಹೆಬ್ಬಾಳ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಡಿಮೆ ಮಾಡುತ್ತದೆ. ಈ ಕಾಮಗಾರಿಯಿಂದ ಬೆಂಗಳೂರಿನ ಪ್ರಮುಖ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಸುಲಭವಾಗಲಿದೆ. ಜೊತೆಗೆ ಹೊರ ವರ್ತುಲ ರಸ್ತೆ ಮತ್ತು ಕೆ.ಆರ್.ಪುರದ ಐಟಿ ಕಾರಿಡಾರ್‌ಗಳಿಗೆ ಸಂಪರ್ಕ ಕೊಂಡಿಯಾಗಿಯೂ ಕಾರ್ಯನಿರ್ವಹಿಸುತ್ತದೆ.
ಯೋಜನೆಯ ಭಾಗವಾಗಿ ಕೆ.ಆರ್.ಪುರದಿಂದ ಹೆಬ್ಬಾಳಕ್ಕೆ ಸಂಪರ್ಕಿಸುವ ಲೂಪ್‌ನ ಎರಡು ಸ್ಪ್ಯಾನ್‌ಗಳನ್ನು ಕಿತ್ತುಹಾಕಲಾಗುತ್ತಿದ್ದು, ತಾತ್ಕಾಲಿಕವಾಗಿ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಸಮಸ್ಯೆ ಉಂಟು ಮಾಡಲಿದೆ. ಇದರಿಂದಾಗಿ ನಾಗವಾರ, ತುಮಕೂರು ರಸ್ತೆ ಮತ್ತು ಓಆರ್‌ಆರ್ ಸರ್ವೀಸ್ ರಸ್ತೆಯ ವಾಹನಗಳು ಫ್ಲೈಓವರ್ ಕೆಳಗೆ ಬಂದು ಒಗ್ಗೂಡುವುದರಿಂದ ಟ್ರಾಫಿಕ್ ಅವಧಿ ಕೂಡ ಹೆಚ್ಚಾಗತೊಡಗಿದೆ. ಈ ಹಿನ್ನೆಲೆ ವಾಹನ ಸವಾರರು ಪೀಕ್ ಅವರ್‌ಗಳಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಈ ಜಂಕ್ಷನ್‌ನಲ್ಲೇ ಕಾಯುವ ಸ್ಥಿತಿ ಇದೆ.
ಈ ಯೋಜನೆಯು ಸ್ಟೀಲ್-ಗಿರ್ಡರ್ ಸೇತುವೆಯ ನಿರ್ಮಾಣವನ್ನು ಕೂಡ ಒಳಗೊಂಡಿದೆ. ಇದು ಇತ್ತೀಚೆಗೆ ರೈಲ್ವೇ ಭೂಮಿಯ ಮೇಲಿನ ಸ್ಪ್ಯಾನ್ ಪ್ಲೇಸ್‌ಮೆಂಟ್‌ಗಾಗಿ ರೈಲ್ವೆಯಿಂದ ಅನುಮತಿಯನ್ನು ಪಡೆದಿದೆ. ನೈಋತ್ಯ ರೈಲ್ವೆ ಮತ್ತು ಇತರ ಏಜೆನ್ಸಿಗಳು ಯೋಜಿಸಿರುವ ಭವಿಷ್ಯದ ರೈಲ್ವೆ ಮಾರ್ಗ ವಿಸ್ತರಣೆಗೆ ಅವಕಾಶ ಕಲ್ಪಿಸಲು ತಲಾ 20 ಮೀಟರ್ ಮತ್ತು 38 ಮೀಟರ್ ಅಳತೆಯ ಎರಡು ಉಕ್ಕಿನ ಗರ್ಡರ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಬಿಡಿಎ ಹೇಳಿದೆ.
ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ನಿರ್ಮಾಣ ಹಂತದಲ್ಲಿರುವ ರ್ಯಾಂಪ್ ಅನ್ನು ಭಾಗಶಃ ಕಿತ್ತುಹಾಕಿರುವ ಕೆ.ಆರ್.ಪುರ ಲೂಪ್‌ನೊಂದಿಗೆ ತ್ವರಿತವಾಗಿ ಸಂಯೋಜಿಸಲು ಗುತ್ತಿಗೆದಾರರಿಗೆ ಸರ್ಕಾರ ಸೂಚನೆ ನೀಡಿದೆ.












Click it and Unblock the Notifications