ಮೂಲೆ ನಿವೇಶನ ಮಾರಾಟ ಮಾಡಲಿದೆ ಬಿಡಿಎ: ಯಾವ-ಯಾವ ಬಡಾವಣೆ?
ಬೆಂಗಳೂರು, ಮಾರ್ಚ್ 27: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೂಲೆ ನಿವೇಶನ (Corner Site)ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ಸೈಟುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಆಸಕ್ತರು ಖರೀದಿ ಮಾಡಬಹುದು.
ಇ-ಹರಾಜು ಮೂಲಕ ಬಿಡಿಎ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ 68 ಮೂಲೆ ಮತ್ತು ಮಧ್ಯಂತರ ನಿವೇಶನಗಳನ್ನು ಮಾರಾಟ ಮಾಡಲಿದೆ. ನಿಯಮಾನುಸಾರ ಹರಾಜು ನಡೆಸಲಾಗುತ್ತದೆ ಎಂದು ಬಿಡಿಎ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ನಿವೇಶನಗಳನ್ನು ಆಯಾ ಬಡಾವಣೆಗಳಲ್ಲಿರುವ ಸ್ಥಿತಿಯಲ್ಲಿಯೇ ಹರಾಜು ಹಾಕಲಾಗುತ್ತದೆ. ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಜನರು ಮಾರ್ಚ್ 30ರ ಸಂಜೆ 5 ಗಂಟೆಯೊಳಗೆ ಹೆಸರು ನೋಂದಾಯಿಸಬೇಕು ಎಂದು ಬಿಡಿಎ ತಿಳಿಸಿದೆ.
ಯಾವ-ಯಾವ ಬಡಾವಣೆ?; ಬನಶಂಕರಿ 6ನೇ ಹಂತ 1ನೇ ಬ್ಲಾಕ್‌ನಲ್ಲಿ 5 ನಿವೇಶನ. 2ನೇ ಬ್ಲಾಕ್‌ನಲ್ಲಿ 14 ನಿವೇಶನ. ಕುಮಾರಸ್ವಾಮಿ ಲೇಔಟ್ 1ನೇ ಹಂತದಲ್ಲಿ 2 ನಿವೇಶನ. ಅಂಜನಾಪುರ 11ನೇ ಬ್ಲಾಕ್‌ನಲ್ಲಿ 17 ಸೈಟು.
ಬನಶಂಕರಿ 6ನೇ ಹಂತ 4ನೇ ಬ್ಲಾಕ್‌ನಲ್ಲಿ 14 ಮತ್ತು 4ನೇ ಹೆಚ್ ಬ್ಲಾಕ್‌ನಲ್ಲಿ 1 ನಿವೇಶನ. ಅಂಜನಾಪುರ 7ನೇ ಬ್ಲಾಕ್ 1, ಮುಂದುವರೆದ ಸರ್‌ಎಂವಿ ಬಡಾವಣೆಯ 7ನೇ ಬ್ಲಾಕ್‌ನಲ್ಲಿ 1 ನಿವೇಶನ ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ.
ಉಳಿದಂತೆ ಸರ್. ಎಂ. ವಿಶ್ವೇಶ್ವರಯ್ಯ 9ನೇ ಬ್ಲಾಕ್‌ನಲ್ಲಿ 3, 1ನೇ ಬ್ಲಾಕ್‌ನಲ್ಲಿ 1. 4 ಮತ್ತು 5ನೇ ಬ್ಲಾಕ್‌ನಲ್ಲಿ ತಲಾ 4. 8ನೇ ಬ್ಲಾಕ್‌ನಲ್ಲಿ 1 ಸೈಟು ಸೇರಿದಂತೆ ಒಟ್ಟು 68 ನಿವೇಶಗಳನ್ನು ಮಾರಾಟ ಮಾಡಲು ಬಿಡಿಎ ತೀರ್ಮಾನಿಸಿದೆ.
ಈ ನಿವೇಶನಗಳ ಮಾರಾಟಕ್ಕೆ ಏಪ್ರಿಲ್ 1ರಂದು ಬೆಳಗ್ಗೆ 10 ಗಂಟೆಗೆ ಇ-ಹರಾಜು ಆರಂಭವಾಗಲಿದೆ. ಏಪ್ರಿಲ್ 2ರಂದು ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ. ಆರಂಭಿಕ ಬಿಡ್ ದರ ಚದರ ಮೀಟರ್‌ಗೆ 60 ಸಾವಿರ ರೂ.ಗಳಿಂದ ಆರಂಭಗೊಂಡು ಗರಿಷ್ಠ 1.27 ಲಕ್ಷ ರೂ.ಗಳ ತನಕ ನಿಗದಿ ಮಾಡಲಾಗಿದೆ.
ಕೆಲವು ಬಡಾವಣೆಗಳಲ್ಲಿ 1, ಕೆಲವು ಬಡಾವಣೆಗಳಲ್ಲಿ 14 ಸೈಟುಗಳು ಮಾರಾಟಕ್ಕಿವೆ. ಪ್ರತಿ ನಿವೇಶನಕ್ಕೆ ಇಎಂಡಿ 4 ಲಕ್ಷಗಳನ್ನು ನಿಗದಿ ಮಾಡಲಾಗಿದೆ. ಈ ಮೊತ್ತ ಹಾಗೂ ಈ ಹರಾಜಿನ ಶುಲ್ಕವನ್ನು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿರುವಂತೆ ಪಾವತಿಸಬೇಕಿದೆ.
ಲಭ್ಯವಿರುವ ಮೂಲೆ, ಮಧ್ಯಂತರ ನಿವೇಶನವನ್ನು ಹರಾಜಿನ ಮೂಲಕ ಯಥಾಸ್ಥಿತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದ ಬಂದ ಹಣದಲ್ಲಿ ಇತರ ಬಡಾವಣೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ಬಿಡಿಎ ಹೇಳಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಬಿಡಿಎ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಹೊಸ ವೆಬ್‌ಸೈಟ್: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕೃತ ಅಂತರ್ಜಾಲ bda.karnataka.gov.in ಹಾಗೂ Resolve your issues ಎಂಬ ನೂತನ ತಂತ್ರಾಂಶವನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿದೆ. ಬಿಡಿಎಗೆ ಭೇಟಿ ನೀಡುವ ನಾಗರೀಕರ ಸಮಸ್ಯೆಗಳನ್ನು ಆನ್‌ಲೈನ್‌ನಲ್ಲಿಯೇ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ನೂತನ ತಂತ್ರಾಂಶವನ್ನು ಸಿದ್ದಪಡಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಧ್ಯವರ್ತಿಗಳ ಹಾವಳಿಗೆ ತಡೆ ಹಾಕಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿಯೇ ಸಾರ್ವಜನಿಕರಿಗೆ ಅನುಕೂಲವಾಗಲು ಈ ತಂತ್ರಾಂಶವನ್ನು ಸಿದ್ದಪಡಿಸಲಾಗಿದೆ. ಜನರು ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ಸಮಸ್ಯೆಗಳನ್ನು ನಮೂದಿಸಿ, ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ನೀಡುವ ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಅವರನ್ನು ಭೇಟಿ ಮಾಡಬಹುದಾಗಿದೆ.
ಬಿಡಿಎ ಅಧ್ಯಕ್ಷ ಎನ್. ಎ. ಹ್ಯಾರಿಸ್ ಮಾತನಾಡಿ, "ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಂತರ್ಜಾಲ ಹಾಗೂ ನೂತನ ತಂತ್ರಾಂಶ ನಿಗದಿತ ವಿಭಾಗದ ಅಧಿಕಾರಿಯನ್ನು ಜನರು ನೇರವಾಗಿ ಭೇಟಿ ಮಾಡಲು ಅನುಕೂಲ ಕಲ್ಪಿಸುತ್ತದೆ. ನಾಗರೀಕರ ಸಮಯವನ್ನು ವ್ಯರ್ಥ ಮಾಡದೇ ಸಮಸ್ಯೆಗಳನ್ನು ಬಗೆಹರಿಸಲು ಈ ತಂತ್ರಾಂಶವು ಸಹಕಾರಿಯಾಗಿದೆ" ಎಂದರು.
"ಈ ತಂತ್ರಾಂಶದಿಂದ ಜನರು ಕೆಲವು ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಬಗೆಹರಿಸಿಕೊಳ್ಳಬಹುದು. ಈ ತಂತ್ರಾಂಶದಲ್ಲಿ ಸಮಸ್ಯೆಗಳನ್ನು ನಮೂದಿಸಿ ಸಲ್ಲಿಸಿದ ನಂತರ ಪ್ರಾಧಿಕಾರದ ನಿಗದಿತ ವಿಭಾಗದ ಅಧಿಕಾರಿಯವರಿಗೆ ರವಾನೆಯಾಗುತ್ತದೆ. ಅಧಿಕಾರಿಯು ತಮ್ಮ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡುತ್ತಾರೆ. ನಂತರ ಮೊಬೈಕಲ್‌ಗೆ ಲಿಂಕ್ ಕಳುಹಿಸಲಾಗುವುದು. ನಿಗದಿ ಮಾಡಿದ ದಿನಾಂಕದಂದು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು" ಎಂದು ಹೇಳಿದರು.












Click it and Unblock the Notifications