ಬಿಡಿಎ: ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂ ಸ್ವಾಧೀನ: ಭೂ ಮಾಲೀಕರ ಆಕ್ಷೇಪ, ಪ್ರತಿಭಟನೆ
ಬೆಂಗಳೂರು, ಸೆಪ್ಟಂಬರ್ 30: ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನದ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ನಿರ್ಧಾರವನ್ನು ಯಶವಂತಪುರ ಹೋಬಳಿ ಗಾಣಿಗರಹಳ್ಳಿಯ ಸುಮಾರು ನಿವಾಸಿಗಳು ಆಕ್ಷೇಪಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನ ವಿರೋಧಿಸಿ ಬುಧವಾರ ಬಿಡಿಎ ಕಚೇರಿ ಮುಂದೆ ಗಾಣಿಗರಹಳ್ಳಿಯ ಸುಮಾರು 200ಮಂದಿ ಪ್ರತಿಭಟಿಸಿದರು. ತಾವು ಖರೀದಿಸಿದ ಹಾಗೂ ನಿರ್ಮಿಸಿದ ನಿವೇಶನ ಕುರಿತು ದಾಖಲೆಗಳನ್ನು ಪ್ರದರ್ಶಿಸಿದರು.
ಈ ಹಿಂದೆ ಪ್ರಾಧಿಕಾರವು ತಮ್ಮ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂಬ ಸುದ್ದಿ ಈ ಯಶವಂತಪುರ ಹೋಬಳಿ ಗಾಣಿಗರಹಳ್ಳಿಯ ಸುಮಾರು 200 ನಿವೇಶನಗಳ ಮಾಲೀಕರನ್ನು ದಂಗಾಗಿಸಿತ್ತು. ಕಾರಂತ ಬಡಾವಣೆ ನಿರ್ಮಾಣಕ್ಕಾಗಿ 2008ರಲ್ಲಿ ಹೊರಡಿಸಲಾದ ಅಂತಿಮ ಅಧಿಸೂಚನೆಯಲ್ಲಿ ಅವರ ಭೂಮಿ ಸ್ವಾಧೀನವನ್ನು ಪಟ್ಟಿಯಿಂದ ಕೈ ಬಿಟ್ಟಿದ್ದರಿಂದ ಮನೆ ಮಾಲೀಕರು ತಮ್ಮ ಭೂಮಿ ಸುರಕ್ಷಿತ ಎಂದು ನಿಟ್ಟುಸಿರುವ ಬಿಟ್ಟಿದ್ದರು. ಅದರ ಬೆನ್ನಲ್ಲೆ ತಾವು ಖರೀದಿಸಿದ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರು.

70 ಭೂ ಮಾಲೀಕರಿಂದ ಆಕ್ಷೇಪ
ಇದೀಗ ದಶಕಗಳ ನಂತರ ಮತ್ತೆ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ನೋಟಿಸ್ ನೀಡಲಾಗಿದೆ. ಗಾಣಿಗರಹಳ್ಳಿ ಸರ್ವೇ ನಂ.72 ರಲ್ಲಿರುವ ನಿವೇಶನ ಮತ್ತದರ ಮಾಲೀಕತ್ವ ಸಂಬಂಧ ನಾಗರಿಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ಸುಮಾರು 70 ಭೂ ಮಾಲೀಕರು ವಿವಿಧ ಹಂತಗಳಲ್ಲಿ ವರ್ಷಗಳ ಹಿಂದೆಯೆ ಕಂದಾಯ ನಿವೇಶನ ಖರೀದಿಸಿದ್ದರು.

ದಾಖಲೆಪತ್ರ ನಮ್ಮ ಹೆಸರಲ್ಲಿವೆ
1977ರಲ್ಲಿ ಎಸ್‌ಸಿ, ಎಸ್‌ಟಿ ಕೆಟಗರಿ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ಹಂಚಿಕೆಯಾದ ಈ ಭೂಮಿಯ ಮೌಲ್ಯದ ಬಗ್ಗೆ ಖಚಿತತೆ ಇಲ್ಲ. ಎನ್.ಸಿ. ಮುನಿರತ್ನ ಎಂಬುವವರ ಹೆಸರಿನಲ್ಲಿ ಭೂಮಿ ಖರೀದಿಸಲಾಗಿತ್ತು. ನಂತರ ಇಲ್ಲಿನ ಜಾಗವನ್ನು ಪ್ರತಿಯೊಬ್ಬರು 30 ಗುಂಟೆಯಂತೆ ಹಂಚಿಕೊಂಡಿದ್ದೇವು. ಅಂದಿನ ಮಾರಾಟ ಹಾಗೂ ಖರೀದಿ ಎಲ್ಲವೂ ನಮ್ಮ ಹೆಸರಿನಲ್ಲೇ ಇದೆ. ಆದರೆ, ಖಾತಾ ಮಾತ್ರ ಈಗಲೂ ಮೂಲ ಹಂಚಿಕೆದಾರರು ಹೆಸರಿನಲ್ಲೇ ಇದೆ ಪ್ರತಿಭಟನಾನಿರತ ನಿವೇಶನ ಮಾಲೀಕ ಚಂದ್ರಶೇಖರ್ ತಿಳಿಸಿದರು.

5 ದಶಕದ ನಂತರ ಬಿಡಿಎ ನೋಟಿಸ್
ಸುಮಾರು ಐದು ದಶಕಗಳ ಹಿಂದೆ ಹಂಚಿಕೆ, ಖರೀದಿ ಪ್ರಕ್ರಿಯೆ ಆಗಿರುವ ಭೂಮಿಗೆ ಬಿಡಿಎ ಇದೀಗ ನೋಟಿಸ್ ನೀಡಿದೆ. ಪರ್ಯಾಯ ಆಯ್ಕೆ ಇಲ್ಲದೇಯೆ ನಮ್ಮ ಭೂಮಿಯನ್ನು ಶಿವರಾಮ ಕಾರಂತ ಲೇಔಟ್ ನಿರ್ಮಾಣಕ್ಕೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡುವುದಿಲ್ಲ. ಒಂದು ವೇಳೆ ಕೊಡುವುದೇ ಆದರೆ ನಿರ್ಮಾಣವಾದ ನಂತರ ಶಿವರಾಮ ಕಾರಂತ ಬಡಾವಣೆಯಲ್ಲಿ ನಮಗೆಲ್ಲ ಕಡ್ಡಾಯವಾಗಿ ನಿವೇಶನ ಕೊಡಬೇಕು ಎಂಬುದು ನಮ್ಮ ಬೇಡಿಕೆ ಆಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಅಂದಾಜು 14 ವರ್ಷಗಳ ಹಿಂದೆ ಬಿಡಿಎ ಕೆಲವು ಜಾಗಗಳನ್ನು ಕೈ ಬಿಟ್ಟು ಅಧಿಸೂಚನೆ ಹೊರಡಿಸಿತ್ತು. ಇದೀಗ ಆ ಜಾಗಗಳನ್ನು ವಶಪಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ಬಗ್ಗೆ ಗಮನಹರಿಸಲಾಗುವುದು ಎಂದು ಬೆಂಗಳೂರು ಅಭಿವದ್ಧಿ ಪ್ರಾಧಿಕಾರ (ಬಿಡಿಎ)ದ ಭೂ ಸ್ವಾಧೀನ ವಿಭಾಗದ ಉಪ ಆಯುಕ್ತೆ ಡಾ.ಎ. ಸೌಜನ್ಯ ಅವರು ತಿಳಿಸಿದ್ದಾರೆ.

ಬಿಡಿಎ ಕೇಂದ್ರ ಸರ್ಕಾರದ ಅಂಗ ಅಲ್ಲ
ಈ ಹಿಂದೆ ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಟೆಂಡರ್ ವಿವಾದ ಉಂಟಾಗಿತ್ತು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಹತ್ವದ ಆದೇಶ ಹೊರಡಿಸಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ರಾಜ್ಯ ಸರ್ಕಾರದ ಒಂದು ಅಂಗವಲ್ಲ. ಹೀಗಾಗಿ ಬಿಡಿಎ ಶಿವರಾಮ ಕಾರಂತ ಬಡಾವಣೆಯ ಟೆಂಡರ್ ಕರೆಯುವಾಗಿ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯುವ ಅಗತ್ಯವಿಲ್ಲ ಎಂದು ಹೇಳಿತ್ತು. ಅಲ್ಲದೇ ಬಡಾವಣೆ ನಿರ್ಮಾಣಕ್ಕೆಂದು ಸ್ವಾಧೀನಪಡಿಸಿಕೊಂಡ ಸಂಪೂರ್ಣ ಭೂಮಿಗೆ ಆರು ವಾರಗಳ ಒಳಗೆ ಅರ್ಹತಾ ಪ್ರಮಾಣ ಪತ್ರ ನೀಡುವಂತೆ ಬಿಡಿಎಗೆ ನಿರ್ದೇಶನ ನೀಡಿತ್ತು.












Click it and Unblock the Notifications