ಮತ್ತೆ 101 ನಿವೇಶನಗಳ ಮಾರಾಟಕ್ಕೆ ಬಿಡಿಎ ನಿರ್ಧಾರ, ಎಲ್ಲೆಲ್ಲಿ ಹಾಗೂ ಆದಾಯ ನಿರೀಕ್ಷೆ ಎಷ್ಟು ಕೋಟಿ?-ಮಾಹಿತಿ ತಿಳಿಯಿರಿ
ಬೆಂಗಳೂರು, ಫೆಬ್ರವರಿ, 08: ಬೆಂಗಳೂರಿನಲ್ಲಿ ಬಿಡಿಎ ಆಗಾಗ ನಿವೇಶನಗಳನ್ನು ಹಾರಾಜು ಹಾಕುತ್ತಿರುತ್ತದೆ. ಇತ್ತೀಚೆಗಷ್ಟೇ ನಿವೇಶನಗಳನ್ನು ಹರಾಜು ಮಾಡಿದ್ದ ಬಿಡಿಎ ಇದೀಗ ಮತ್ತೆ ಅಭಿವೃದ್ಧಿಪಡಿಸಿದ 101 ಸೈಟುಗಳ ಮಾರಾಟಕ್ಕೆ ಮುಂದಾಗಿದೆ. ಈ ಮೂಲಕ ಸುಮಾರು 300 ಕೋಟಿ ರೂಪಾಯಿ ಆದಾಯ ಸಂಗ್ರಹಿಸಲು ಪ್ರಾಧಿಕಾರ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಲ್ಲೆಲ್ಲಿ ನಿವೇಶನಗಳ ಮಾರಾಟ ಎಂದು ಇಲ್ಲಿ ತಿಳಿಯಿರಿ.
ಎಲ್ಲೆಲ್ಲಿ ನಿವೇಶನ ಮಾರಾಟ?
* ಬನಶಂಕರಿ 6ನೇ ಹಂತ
* ಅಂಜನಾಪುರ 9ನೇ ಬ್ಲಾಕ್
* ಎಚ್‌ಎಎಲ್ ಲೇಔಟ್
* ಎಚ್‌ಬಿಆರ್ 1ನೇ ಹಂತ
* ಎಚ್‌ಎಸ್‌ಆರ್ ಲೇಔಟ್
* ಕೋರಮಂಗಲ 8ನೇ ಬ್ಲಾಕ್
* ಆರ್‌ಪಿಸಿ ಲೇಔಟ್
* ಸರ್.ಎಂ ವಿಶ್ವೇಶ್ವರಯ್ಯ ಲೇಔಟ್
* ಜೆಪಿ ನಗರ 8ನೇ ಹಂತದಲ್ಲಿ

ಇಲ್ಲಿರುವ ನಿವೇಶನಗಳ ಮಾರಾಟಕ್ಕೆ ಮುಂದಾಗಿದ್ದು, ಇಲ್ಲಿನ 101 ನಿವೇಶನಗಳ ಮಾಹಿತಿಯನ್ನು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಫೆಬ್ರವರಿ 16ರಂದು ಲೈವ್ ಬಿಡ್ಡಿಂಗ್ ಆರಂಭಿಸಲು ನಿಗದಿಪಡಿಸಲಾಗಿದೆ. ಪ್ರತಿ ಚದರ ಮೀಟರ್‌ಗೆ 60,000 ರೂಪಾಯಿ ಮತ್ತು ಚದರ ಮೀಟರ್‌ಗೆ 2.02 ಲಕ್ಷ ರೂಪಾಯಿವರೆಗೆ ಮೂಲ ಬೆಲೆ ನಿಗದಿ ಮಾಡಲಾಗಿದೆ. ಇ-ಹರಾಜಿನಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಪ್ರತಿ ನಿವೇಶನಕ್ಕೆ 4 ಲಕ್ಷ ರೂಪಾಯಿ ಮುಂಗಡವಾಗಿ ಪಾವತಿ ಮಾಬೇಕಿದೆ.
ಇ -ಹರಾಜು ಮುಗಿದ 72 ಗಂಟೆಗಳಲ್ಲಿ ಯಶಸ್ವಿ ಬಿಡ್‌ದಾರರು ಮೌಲ್ಯದ ಶೇಕರಾ 25 ಅನ್ನು ಪಾವತಿ ಮಾಡಬೇಕಿದೆ. ಬಿಡಿಎಯಿಂದ ಹಂಚಿಕೆ ಪತ್ರ ಸ್ವೀಕೃತಿಯಾದ 45 ದಿನಗಳಲ್ಲಿ ಉಳಿದ ಶೇಕಡಾ 75ರಷ್ಟು ಮೊತ್ತವನ್ನು ಪಾವತಿಸಬೇಕಿದೆ. ವಿಫಲ ಬಿಡ್‌ದಾರರಿಂದ ಸಂಗ್ರಹಿಸಿದ್ದ ಆರಂಭಿಕ ಠೇವಣಿ 4 ಲಕ್ಷ ರೂಪಾಯಿಗಳನ್ನು ಬಿಡಿಎ ಒಂದು ತಿಂಗಳಿನಲ್ಲಿ ಅವರ ಖಾತೆಗಳಿಗೆ ಜಮಾ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳನ್ನು ಬಿಡಿಎ ತೆರವುಗೊಳಿಸುತ್ತಿದೆ. ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ ಅಂದಾಜು 35 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ. ಬಿಡಿಎ ಆಯುಕ್ತ ಎನ್.ಜಯರಾಮ್ ನಿರ್ದೇಶನದಲ್ಲಿ ಹಾಗೂ ಆರಕ್ಷಕ ಅಧೀಕ್ಷಕ ಕೆ.ನಂಜುಂಡೇಗೌಡ ನೇತೃತ್ವದಲ್ಲಿ ಬೆಂಗಳೂರು ಉತ್ತರ ತಾಲೂಕು, ಯಶವಂತಪುರ ಹೋಬಳಿ, ಹೇರೋಹಳ್ಳಿ ಗ್ರಾಮದ ಸರ್ವೆ ನಂಬರ್ 64ರಲ್ಲಿ ಪ್ರಾಧಿಕಾರದ 32.45 ಗುಂಟೆ ಜಮೀನಿನಲ್ಲಿ ಸ್ಥಳೀಯರು ಅನಧಿಕೃತ ನಿರ್ಮಿಸಿಕೊಂಡಿದ್ದ ಶೆಡ್ಗಳು, ಕಟ್ಟಡಗಳನ್ನು ತೆರವು ಮಾಡಲಾಯಿತು.












Click it and Unblock the Notifications