ಸುಪ್ರೀಂ ಚಾಟಿ ಬೆನ್ನಲ್ಲೇ ಬಿಡಿಎ ಆಯುಕ್ತ ರಾಜೇಶ್ ಗೌಡ ಎಂ.ಬಿ ವರ್ಗಾವಣೆ
ಬೆಂಗಳೂರು, ಆಗಸ್ಟ್ 26: ಬಿಡಿಎ ಆಯುಕ್ತ ರಾಜೇಶ್ ಗೌಡ ಎಂ. ಬಿಯನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ. ಬಿಡಿಎ ನೂತನ ಆಯುಕ್ತರನ್ನಾಗಿ 1990 ಬ್ಯಾಚ್‌ನ ಐಎಎಸ್ ಅಧಿಕಾರಿ ಕುಮಾರ್ ನಾಯ್ಕ. ಜಿ ರನ್ನು ನೇಮಿಸಿದೆ. ಸುಪ್ರೀಂ ಕೋರ್ಟ್ ಬಿಡಿಎ ಆಯುಕ್ತರನ್ನು ವರ್ಗಾಯಿಸುವಂತೆ ಮೌಖಿಕವಾಗಿ ಆದೇಶಿಸಿದ್ದರಿಂದ ರಾಜ್ಯ ಸರ್ಕಾರ ಈ ಆದೇಶವನ್ನು ಹೊರಡಿಸಿದೆ.
ಬಿಡಿಎ ಆಯುಕ್ತ ರಾಜೇಶ್ ಗೌಡ ಎಂ. ಬಿ ವಿರುದ್ದ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ಸೂಚನೆಯನ್ನು ನೀಡಿತ್ತು. ಸುಮಾರು 50 ಕೋಟಿ ಮೌಲ್ಯದ ಜಿ ಕೇಟಗರಿ ಸೈಟುಗಳನ್ನು ಅಧಿಕಾರಿಗಳು ಸಚಿವರುಗಳೊಂದಿದೆ ಶಾಮೀಲಾಗಿ ಅಕ್ರಮವಾಗಿ ಹಂಚಿಕೆ ಮಾಡಿ ಭ್ರಷ್ಟಾಚರ ಎಸಗಿರುವ ಆರೋಪ ಆಯುಕ್ತರಾಗಿ ರಾಜೇಶ್ ಗೌಡ ಎಂ. ಬಿ ವಿರುದ್ದ ಕೇಳಿ ಬಂದಿತ್ತು.
ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ನ್ಯಾ. ಎವಿ ಚಂದ್ರಶೇಖರ್ ತನಿಖೆಯನ್ನು ನಡೆಸಿದ್ದರು. ಈ ಸಮಿತಿಯು ಬಡಾವಣೆಯಲ್ಲಿ ನಡೆದ ವಿವಿಧ ಅಕ್ರಮದ ಬಗ್ಗೆ ವಿಸ್ತೃತ ವರದಿಯನ್ನು ಸಹ ಸುಪ್ರೀಂ ನ್ಯಾಯಾಲಯಕ್ಕೆ ಸಲ್ಲಿಕೆಯನ್ನು ಮಾಡಿತ್ತು. ನಿವೇಶನಗಳನ್ನು ಅಕ್ರಮ ನೀಡಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆಯುಕ್ತರಾದ ರಾಜೇಶ್ ಗೌಡ ಎಂ.ಬಿ ಮತ್ತು ಇತರೆ ಅಧಿಕಾರಿಗಳನ್ನು ಎತ್ತಂಗಡಿ ಸುಪ್ರೀಂ ಚಾಟಿ ಬೀಸಿದ ಬೆನ್ನಲ್ಲೆ ಆಯುಕ್ತರನ್ನು ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.

ಗೃಹ ಸಚಿವರ ವಿರುದ್ದವೇ ಲೋಕಾಯುಕ್ತದಲ್ಲಿ ದೂರು ದಾಖಲು
ಗೃಹ ಸಚಿವರು ಅಂದರೆ ಇಡೀ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಹೊತ್ತವರು. ಆದರೆ ಗೃಹ ಸಚಿವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಬಿಡಿಎಯಿಂದ ಜಿ.ಕೆಟಗಿರಿ ಸೈಟ್ ಬದಲಿಸಿಕೊಂಡಿರುವುದು ಈಗ ಬೆಳಕಿಗೆ ಬಂದಿದೆ. ಈ ಜಿ ಕೆಟಗಿರಿ ಸೈಟ್ ಹಂಚಿಕೆ 2010 ರಲ್ಲಿಯೇ ಸುಪ್ರೀಂಕೋರ್ಟ್ ರದ್ದು ಗೊಳಿಸಿದೆ. ಆದರೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಜಿ ಕೆಟಗಿರಿ ಸೈಟ್ ಬದಲಿಸಿಕೊಂಡಿದ್ದಾರೆ. ಜಿ.ಕೆಟಗಿರಿಯ ಬದಲಿ ಸೈಟ್ ಹಂಚಿಕೆ ಮಾಡುವ ಅಧಿಕಾರ ಬಿಡಿಎ ಆಯುಕ್ತರಿಗೂ ಕೂಡಾ ಇಲ್ಲ. ಆದರೂ ಕೂಡಾ ತಮ್ಮ ವ್ಯಾಪ್ತಿಯನ್ನು ಮೀರಿ ಗೃಹ ಸಚಿವ ಸೇರಿದಂತೆ ಒಟ್ಟು ನಾಲ್ಕು ಜನರಿಗೆ ಜಿ.ಕೆಟಗಿರಿ ಸೈಟ್ ಹಂಚಿಕೆ ಮಾಡಿದ್ದಾರೆ. ಇದರಿಂದ ಕೆಂಡಾಮಂಡಲವಾದ ಸುಪ್ರೀಂಕೋರ್ಟ್ ಬಿಡಿಎ ಆಯುಕ್ತ ರಾಜೇಸ್ ಗೌಡರನ್ನು ಕೂಡಲೇ ಅಮಾನತು ಮಾಡಬೇಕು. ಇಂದಿನಿಂದ ಯಾವುದೇ ಸಹಿ ಹಾಕುವಂತಿಲ್ಲ. ಅದರ ಜೊತೆ ಈ ಅಕ್ರಮಕ್ಕೆ ಸಹಕರಿಸಿದ ಎಲ್ಲಾ ಅಧಿಕಾರಿಗಳನ್ನೂ ಕೂಡಲೇ ವರ್ಗಾವಣೆ ಮಾಡಿ ಅಂತ ಆದೇಶ ನೀಡಿತ್ತು

ಆರಗ ಜ್ಞಾನೇಂದ್ರ ಸಚಿವ ಸ್ಥಾನದಿಂದ ವಜಾಕ್ಕೆ ಆಗ್ರಹ
ಆಪ್ ಮುಖಂಡ ಹಾಗೂ ನಿವೃತ್ತ ಕೆ.ಎ.ಎಸ್ ಅಧಿಕಾರಿ ಕೆ. ಮಥಾಯಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಡಿಎ ಆಯುಕ್ತ ರಾಜೇಶ್ ಗೌಡ ವಿರುದ್ಧ ದೂರು ಸಲ್ಲಿಸಿದ್ದಾರೆ. ಸದ್ಯ ದೂರು ದಾಖಲಿಸಿದ ಬಳಿಕ ಕೆ. ಮಥಾಯಿ ಮಾತನಾಡಿದ್ದು. ಸುಪ್ರೀಂ ಕೋಟ್೯ ಆದೇಶದಂತೆ ಸದ್ಯ ಜಿ. ಕೆಟಗರಿ ಸೈಟ್ ಯಾರಿಗೂ ನೀಡಬಾರದು, ಪಬ್ಲಿಕ್ ಆಕ್ಷನ್ ಮೂಲಕ ನೀಡಬೇಕು. ಪರ್ಯಾಯ ಸೈಟ್ ಕೊಡುವಾಗ ಹೆಚ್ಚು ಬೆಲೆ ಬಾಳುವ ಸೈಟ್ ನೀಡಬಾರದು. ಆರಗ ಜ್ಞಾನೇಂದ್ರ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ. RMV. ಎಕ್ಸ್‌ಟೆಂಷನ್ ಲೇಔಟ್‌ನಲ್ಲಿ ಕಾನೂನು ಬಾಹಿರ ಸೈಟ್ ಪಡೆದಿದ್ದಾರೆ. ಇದೇ ವಿಚಾರ ಸುಪ್ರೀಂಕೋರ್ಟ್ ಬಿಡಿಎ ಆಯುಕ್ತರ ವರ್ಗಾವಣೆಗೆ ಸೂಚಿಸಿದೆ. ಕಾನೂನು ವಿರುದ್ಧದ ಸೈಟ್ ಪಡೆದಿರುವ ಆರಗ ಜ್ಞಾನೇಂದ್ರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಈ ನಿಟ್ಟಿನಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೇವೆ. ಸರ್ಕಾರದಲ್ಲಿ ಸಂಪೂರ್ಣ ಕಮಿಷನ್ ದಂಧೆ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹಸಚಿವ ಕಾನೂನಿಗೆ ವಿರುದ್ಧವಾಗಿ ಸೈಟ್ ಪಡೆದಿದ್ದಾರೆ . ಕ್ಯಾಬಿನೆಟ್‌ನಲ್ಲೂ ಆರಗರನ್ನು ಸಿಎಂ ವಜಾ ಮಾಡಬೇಕು ಅಂತ ಸಿ.ಎಂ ಬೊಮ್ಮಾಯಿ ಯನ್ನು ಕೆ. ಮಥಾಯಿ ಒತ್ತಾಯಿಸಿದ್ದಾರೆ.

ಆರಗ ಜ್ಞಾನೇಂದ್ರ ಬಳಿಯ ಸೈಟ್ ವಾಪಸ್ ಪಡೆಯುತ್ತೇವೆ
ಬಿಡಿಎ ಕಮಿಷನರ್ ರಾಜೇಶ್ ಗೌಡರಿಗೆ ಸುಪ್ರೀಂ ತರಾಟೆ ತೆಗೆದು ಕೊಳ್ಳುತ್ತಿದ್ದಂತೆ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಪ್ರತಿಕ್ರಿಯಿಸಿದ್ದು. ಸುಪ್ರೀಂಕೋರ್ಟ್ ಹೇಳಿರೋದು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದು ಕೇವಲ ಆರಗ ಜ್ಞಾನೇಂದ್ರ ಅವರಿಗೆ ಮಾತ್ರ ಅಲ್ಲ, ಸಾಮಾನ್ಯರಿಗೂ ಕೊಡುವಾಗಲೂ ಆಗಿದೆ. ನಮ್ಮ ಬಿಡಿಎ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಸುಪ್ರೀಂಕೋರ್ಟ್ ಅದನ್ನು ಗುರುತಿಸಿ ಹೇಳಿದೆ. ನಾನು ಈಗಾಗಲೇ ಆರಗ ಜ್ಞಾನೇಂದ್ರ ಅವರಿಗೆ ಮಾತನಾಡಿದ್ದೇನೆ. ಅವರಿಗೆ ಕೊಟ್ಟಿರುವ ನಿವೇಶನವನ್ನು ವಾಪಸ್ ಪಡೆಯುತ್ತೇವೆ. ಅವರ ನಿವೇಶನದ ಕೆಟಗರಿ ತಕ್ಕಂತೆ ಅವರಿಗೆ ನಿವೇಶನ ಕೊಡ್ತೇವೆ. ರಾಜೇಶ್ ಗೌಡ ಅವರನ್ನು ಕಮಿಷನರ್ ಸ್ಥಾನದಿಂದ ವರ್ಗಾವಣೆ ಮಾಡಿ ಅಂತ ಕೋರ್ಟ್ ಹೇಳಿದೆ. ಈ ಬಗ್ಗೆ ನಾನು ಸಿಎಂ ಬೊಮ್ಮಾಯಿ ಜೊತೆ ಮಾತನಾಡಿ ಕ್ರಮ ತೆಗೆದು ಕೊಳ್ತೇನೆ ಎಂದಿದ್ದರು

ಸುಪ್ರೀಂ ಮೌಖಿಕ ಹೇಳಿಕೆಗೆ ಆಯುಕ್ತರು ಎತ್ತಂಗಡಿ
ಗಣ್ಯರಿಗೆ ಅಭಿವೃದ್ಧಿ ಹೊಂದಿದ ನಿವೇಶನ ಪಡೆಯಲು ಹೋಗಿ ಗೃಹ ಸಚಿವರು ತಲೆ ತಗ್ಗಿಸುವಂತಾಗಿದ್ದರೆ. ಇತ್ತಾ ತಮ್ಮ ಕರ್ತವ್ಯ ವ್ಯಾಪ್ತಿಯನ್ನೇ ಮರೆತ ಭ್ರಷ್ಟ ಅಧಿಕಾರಿಗಳು ಈಗ ತಲೆ ತಲೆ ತಗ್ಗಿಸುವಂತಾಗಿದೆ. ಸದ್ಯ ಬೆಳಕಿಗೆ ಬಂದಿರೋದು. ಕೇವಲ ನಾಲ್ಕು ನಿವೇಶನಗಳು ಮಾತ್ರ ಆದರೆ ಕಣ್ಣಿಗೆ ಕಾಣದೆ ಅದೆಷ್ಟು ಸೈಟ್‌ಗಳು ಭೂಗಳ್ಳರ ಪಾಲಾಗಿದೆ ಅನ್ನೋದು ಭ್ರಷ್ಟ ತಿಮಿಂಗಿಲಗಳಿಗೆ ಮಾತ್ರ ಗೊತ್ತಿರುತ್ತೆ. ಇನ್ನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ಆಯುಕ್ತರನ್ನು ಎತ್ತಂಗಡಿ ಮಾಡುವಂತೆ ಸೂಚಿಸಿತ್ತು. ಇದೀಗ ರಾಜ್ಯ ಸರ್ಕಾರ ಆಯುಕ್ತರನ್ನು ಎತ್ತಂಗಡಿ ಮಾಡಿ ಆದೇಶವನ್ನು ಹೊರಡಿಸಿದೆ. ಇನ್ನು ಅಧಿಕಾರಿಗಳಿಗೆ ಮಾತ್ರ ಶಿಕ್ಷೆಯೋ ಗೃಹಸಚಿವರಿಗೂ ಶಿಕ್ಷೆಯಾಗುತ್ತದೆಯೇ ಎನ್ನುವುದಕ್ಕೆ ಕೆಲದಿನಗಳಲ್ಲೇ ಉತ್ತರ ಸಿಗಲಿದೆ.












Click it and Unblock the Notifications