ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ವೇಳೆ ಬಸ್ ಟರ್ಮಿನಲ್ ಬಂದ್: ದೂರು ದಾಖಲಿಸಿದ ಬಿಬಿಪಿವಿ
ಬೆಂಗಳೂರು, ಮೇ. 08: ರಾಜಧಾನಿಯಲ್ಲಿ ಬಿಜೆಪಿ ಪರ ಮತಯಾಚನೆಗಾಗಿ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋ ನಡೆಸಿದ್ದರು. ಈ ವೇಳೆ ಜಯನಗರ ಬಸ್ ಟರ್ಮಿನಲ್ ಮುಚ್ಚಿದ್ದರಿಂದ ಅನೇಕ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ. ಹಲವು ಮಂದಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಸಂಕಷ್ಟಕ್ಕೆ ಒಳಗಾಗಿದ್ದನ್ನು ವರದಿಗಳು ಬಹಿರಂಗಪಡಿಸಿವೆ.
ಇದರ ಬೆನ್ನಲ್ಲೇ ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ (ಬಿಬಿಪಿವಿ) ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ದೂರು ಸಲ್ಲಿಸಿದೆ. ಪ್ರಧಾನಿ ರೋಡ್ ಶೋ ವೇಳೆ ಬಸ್ ಟರ್ಮಿನಲ್ ಮುಚ್ಚಿರುವುದು ಕಾನೂನುಬಾಹಿರ ಎಂದು ಕಿಡಿಕಾರಿದೆ.

ಬಸ್ ಪ್ರಯಾಣಿಕರ ಹಕ್ಕುಗಳ ವೇದಿಕೆಯು ಮೇ 7 ರಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದೆ. ದೂರಿನಲ್ಲಿ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿಯ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಉಲ್ಲೇಖಿಸಿ, ಬಸ್ ಟರ್ಮಿನಲ್ ಮುಚ್ಚಿದ್ದರಿಂದ ಜನರಿಗಾದ ಕಷ್ಟದ ಬಗ್ಗೆ ಒತ್ತಿ ಹೇಳಿದೆ.
"ಈ ರೋಡ್‌ಶೋ ನಿಮಿತ್ತ ಯಾವುದೇ ಅಧಿಕೃತ ರಜೆ ಘೋಷಿಸದ ಕಾರಣ ಬಸ್ ನಿಲ್ದಾಣ ಮುಚ್ಚುವಿಕೆಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದೆ. ಬಿಎಂಟಿಸಿಯಲ್ಲಿ ಪ್ರಯಾಣಿಸುವ ಜನರು ಕಾರ್ಮಿಕರು. ಶ್ರೀಮಂತ ಹಿನ್ನೆಲೆಯಿಂದ ಬಂದವರಲ್ಲ. ಈ ಕಾರಣದಿಂದ ಹೀಗೆ ಬಸ್ ಟರ್ಮಿನಲ್ ಮುಚ್ಚುವಿಕೆಯು ಸಾರ್ವಜನಿಕರಿಗೆ ಅನಾನುಕೂಲತೆ ಉಂಟುಮಾಡಿದೆ. ಒಂದು ದಿನ ಅಥವಾ ಅರ್ಧ ದಿನದ ವೇತನ/ವ್ಯಾಪಾರ/ಸಂಬಳವನ್ನು ಕಳೆದುಕೊಳ್ಳುವುದು ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದು ದೂರಿನಲ್ಲಿ ತಿಳಿಸಲಾಗಿದೆ. ಟರ್ಮಿನಲ್ ಮುಚ್ಚಲು ಅನುಮತಿ ನೀಡಿದವರ ಬಗ್ಗೆ ತನಿಖೆ ನಡೆಸಬೇಕು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ ಒತ್ತಾಯಿಸಿದೆ.

ಇನ್ನು, ಮೇ 9 ಮತ್ತು 10 ರಂದು ಚುನಾವಣಾ ಕರ್ತವ್ಯಕ್ಕೆ ಶೇಕಡಾ 40 ಕ್ಕಿಂತ ಹೆಚ್ಚು ವಾಹನಗಳನ್ನು ಮೀಸಲಿಡುವ ಸಾರಿಗೆ ನಿಗಮಗಳ ಕ್ರಮಕ್ಕೆ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಯಾಣಿಕರು ತೊಂದರೆ ಅನುಭವಿಸುವ ಬದಲು ಚುನಾವಣಾ ಕರ್ತವ್ಯಕ್ಕೆ ಖಾಸಗಿ ಬಸ್‌ಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದೆ.
ಚುನಾವಣೆ ಹಿನ್ನೆಲೆ, ಮೇ 6 ರ ಹೊತ್ತಿಗೆ, ಕೆಎಸ್‌ಆರ್‌ಟಿಸಿ 3,700 ಬಸ್‌ಗಳನ್ನು (ಸುಮಾರು 46%) ನಿಯೋಜಿಸಲು ವಾಗ್ದಾನ ನೀಡಿದ್ದರೆ, ಬಿಎಂಟಿಸಿ 1,868 ಬಸ್‌ಗಳನ್ನು (ಸುಮಾರು 28%) ಚುನಾವಣಾ ಕರ್ತವ್ಯಗಳಿಗೆ ನೀಡಲು ಬದ್ಧವಾಗಿದೆ. ಈ ಕ್ರಮವು ಮೇ 10 ರಂದು ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ಬಸ್‌ಗಳನ್ನು ನೀಡಲಿದೆ.
ಎರಡು ನಿಗಮಗಳು ನೀಡಿರುವ ಪ್ರತ್ಯೇಕ ಹೇಳಿಕೆಗಳ ಪ್ರಕಾರ, ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಾಕಷ್ಟು ಸಂಖ್ಯೆಯ ಬಸ್‌ಗಳನ್ನು ಒದಗಿಸಲಾಗುವುದು. ಇದರಿಂದಾಗಿ ಆ ಎರಡು ದಿನಗಳಲ್ಲಿ ಬಸ್‌ಗಳ ಕೊರತೆ ಉಂಟಾಗುತ್ತದೆ. ಕಾರ್ಯಾಚರಣೆಯಲ್ಲಿನ ಅಡಚಣೆಯ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಕೆಎಸ್‌ಆರ್‌ಟಿಸಿ, ಜನರು ತಮ್ಮ ಪ್ರಯಾಣವನ್ನು ಸೂಚನೆಗೆ ಅನುಗುಣವಾಗಿ ಪ್ಲ್ಯಾನ್ ಮಾಡಿಕೊಳ್ಳಲು ಕೇಳಿಕೊಂಡಿದ್ದಾರೆ.












Click it and Unblock the Notifications