ಬಿಬಿಎಂಪಿ: ಹೈಕೋರ್ಟ್ ತೀರ್ಮಾನ ಅಂತಿಮ?
ಬೆಂಗಳೂರು, ಏ. 12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಚಾರ ಹೈ ಕೋರ್ಟ್ ಮೆಟ್ಟಿಲೇರಿದೆ. ವಿಭಜನೆ ಮತ್ತು ಚುನಾವಣೆ ನಡೆಸುವ ಸಂಬಂಧ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಏಪ್ರಿಲ್ 13 ರಂದು ನಡೆಯಲಿದ್ದು ಸರ್ಕಾರ ನ್ಯಾಯಾಲಯದ ಆದೇಶದ ಅನ್ವಯ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ.
ಬಿಬಿಎಂಪಿಯನ್ನು ಮೂರು ಭಾಗವಾಗಿ ವಿಭಜನೆ ಮಾಡಬೇಕು ಎಂದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಿಕೊಟ್ಟಿತ್ತು. ಆದರೆ ರಾಜ್ಯಪಾಲರು ಇದನ್ನು ತಿರಸ್ಕರಿಸಿ ಸ್ಪಷ್ಟನೆ ಕೇಳಿದ್ದರು.[ಬಿಬಿಎಂಪಿ ಚುನಾವಣೆ ಮುಂದೂಡುವಂತಿಲ್ಲ : ಹೈಕೋರ್ಟ್]

ಈ ಬಗ್ಗೆ ಭಾನುವಾರ ಮುಖ್ಯಮಂತ್ರಿ ಸಿದ್ರಾಮಯ್ಯ ಗೃಹ ಕಚೇರಿಯಲ್ಲಿ ಸಚಿವರು ಮತ್ತು ಮಾಜಿ ಮೇಯರ್ ಗಳ ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಮುಖ್ಯಮಂತ್ರಿಗಳು ನಮ್ಮೊಂದಿಗೆ ಚರ್ಚಿಸಿ ಕೆಲವು ಅಭಿಪ್ರಾಯಗಳನ್ನು ಕೇಳಿದ್ದಾರೆ. ವಿಭಜನೆಯ ಕುರಿತಾಗಿ ಕಾನೂನು ಸಚಿವ ಜಯಚಂದ್ರ ಅವರೊಂದಿಗೆ ಸಿಎಂ ಪ್ರತ್ಯೇಕ ಸಭೆ ನಡೆಸಿ ಆ ನಂತರ ಸೂಕ್ತ ನಿರ್ಧಾರಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.[ಬಿಬಿಎಂಪಿ ವಿಭಜನೆ ಹೇಗೆ?, ಸಂಕ್ಷಿಪ್ತ ಮಾಹಿತಿ]
ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ, ಸ್ಥಳೀಯ ಸಂಸ್ಥೆಗಳಿಗೆ ಅವಧಿ ಮುಗಿಯುವ ಮುನ್ನ ಚುನಾವಣೆ ನಡೆಸಬೇಕು. ಈಗ ಚುನಾವಣೆ ಮುಂದೂಡುವುದು ಸಂವಿಧಾನ ವಿರೋಧಿ ಯಾಗುತ್ತದೆ. ಹೈಕೋರ್ಟ್ ಆದೇಶ ಪ್ರಕಾರ ಮೇ 30ರೊಳಗೆ ಚುನಾವಣೆ ನಡೆಸಬೇಕು. ಈ ಹಿಂದೆ ಬಿಎಂಪಿ ಇದ್ದದ್ದನ್ನು ಬಿಬಿಎಂಪಿ ಮಾಡಿ ಮತ್ತೆ ಬಿಎಂಪಿ ಮಾಡಲು ಹೊರಟಿರುವುದು ಯಾಕೆ? ಇಲ್ಲಿಯೂ ಸಹ ಸ್ವರೂಪ ಮತ್ತು ವ್ಯಾಪ್ತಿಯ ಸ್ಪಷ್ಟ ಮಾಹಿತಿ ಕೊಡಲಾಗಿಲ್ಲ ಎಂದು ರಾಜ್ಯಪಾಲ ವಜುಭಾಯಿ ವಾಲಾ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ತಿಳಿಸಿದ್ದರು.
ಬಿಬಿಎಂಪಿಯನ್ನು ಒಡೆಯುವ ನೆಪದಲ್ಲಿ ಸರ್ಕಾರ ಚುನಾವಣೆಯನ್ನು ವಿನಾಕಾರಣ ಮುಂದೆ ಹಾಕುತ್ತಿದೆ. ಈಗ ಪ್ರಕಟ ಮಾಡಿರುವ ಮೀಸಲು ಪಟ್ಟಿ ವೈಜ್ಞಾನಿಕವಾಗಿಲ್ಲ ಎಂಬುದು ವಿರೋಧ ಪಕ್ಷಗಳ ಆರೋಪ. ಒಟ್ಟಿನಲ್ಲಿ ನ್ಯಾಯಾಲಯದ ತೀರ್ಮಾನದ ನಂತರ ಬಿಬಿಎಂಪಿ ವಿಭಜನೆಯೋ ಅಥವಾ ಚುನಾವಣೆಯೋ ಎನ್ನುವುದು ಗೊತ್ತಾಗಲಿದೆ.












Click it and Unblock the Notifications