207 ಕೆರೆಗಳಿಗೆ ಸಿಸಿಟಿವಿ ಅಳವಡಿಸಲಿದೆ ಬಿಬಿಎಂಪಿ
ಬೆಂಗಳೂರು, ಜನವರಿ 25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ಎಲ್ಲಾ ಕೆರೆಗಳಿಗೆ ಸಿಸಿಟಿವಿ ಕಣ್ಗಾವಲು ಒದಗಿಸಲಿದೆ. ಸುಮಾರು 5 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಡಿಪಿಆರ್ ಸಿದ್ಧವಾಗಿದೆ. ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ.
ನಗರದ ಕೆರೆಗಳಿಗೆ ಎಷ್ಟು ಸಿಸಿಟಿವಿ ಅಳವಡಿಸಬೇಕು?. ತಾಂತ್ರಿಕ ಸಹಾಯ ಏನು ಬೇಕು?, ಯಾವ ತಂತ್ರಜ್ಞಾನ ಅವಳಡಿಸಬೇಕು? ಎಂಬ ಬಗ್ಗೆ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಸಮೀಕ್ಷೆ ವರದಿ ಬಂದ ಬಳಿಕ ಟೆಂಡರ್ ಕರೆಯಲಾಗುತ್ತದೆ.
ನಗರದಲ್ಲಿರುವ 207 ಕೆರೆಗಳಿಗೆ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತದೆ. ಜನವರಿ ಅಂತ್ಯಕ್ಕೆ ಸಮೀಕ್ಷೆಗಳನ್ನು ಪೂರ್ಣಗೊಳಿಸಲಾಗುತ್ತದೆ. ಯಾವ ಮಾದರಿ ಕ್ಯಾಮರಾ ಅಳವಡಿಕೆ ಮಾಡಬೇಕು?, ಅಲ್ಲಿನ ದೃಶ್ಯಗಳನ್ನು ಹೇಗೆ ಸ್ಟೋರ್ ಮಾಡಬೇಕು ಎಂದು ವಿಸ್ತ್ರತ ಯೋಜನಾ ವರದಿಯಲ್ಲಿ ವಿವರಿಸಲಾಗುತ್ತದೆ.

207 ಕೆರೆಗಳಿಗೆ ಸಿಸಿಟಿವಿ ಅಳವಡಿಕೆ ಮಾಡಲು 5 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಸಮೀಕ್ಷೆಗಳ ಮೂಲಕ ಖರ್ಚಿನ ಅಂದಾಜು ವೆಚ್ಚ ಸಿಗಲಿದೆ. 5 ಕೋಟಿಗಿಂತ ಹೆಚ್ಚಿನ ಅನುದಾನವನ್ನು ಖರ್ಚು ಮಾಡದಿರಲು ತೀರ್ಮಾನಿಸಲಾಗಿದೆ.
ಕೆರೆಗಳ ಆವರಣದಲ್ಲಿ ಸಿಸಿಟಿವಿ ಆಳವಡಿಕೆ ಮಾಡುವುದರಿಂದ ಕೆರೆಗೆ ತ್ಯಾಜ್ಯ ತಂದು ಸುರಿಯುವವರ ಬಗ್ಗೆ ಮಾಹಿತಿ ಸಿಗಲಿದೆ. ಕೆರೆ ಆವಣರದಲ್ಲಿ ವಾಯುವಿಹಾರ ಮಾಡುವವರ ಸರಗಳ್ಳತನ ನಡೆದರೆ ದೃಶ್ಯಾವಳಿಗಳು ಸಿಗಲಿವೆ.












Click it and Unblock the Notifications