ಆಗಸ್ಟ್ 31ರೊಳಗೆ ಎಲ್ಲಾ ಸಂಸ್ಥೆಗಳ ಸಿಬ್ಬಂದಿಗೆ ಲಸಿಕೆ ಕಡ್ಡಾಯಗೊಳಿಸಿ ಬಿಬಿಎಂಪಿ ಸೂಚನೆ
ಬೆಂಗಳೂರು, ಆಗಸ್ಟ್ 27: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸುವ ಪ್ರಯತ್ನವಾಗಿ, ಬಿಬಿಎಂಪಿ ಗುರುವಾರ ಸುತ್ತೋಲೆ ಹೊರಡಿಸಿದೆ. ಎಲ್ಲಾ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಕಚೇರಿಗಳು, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳು ತಮ್ಮ ಸಿಬ್ಬಂದಿಗೆ ಸಂಸ್ಥೆಯ ವೆಚ್ಚದಲ್ಲಿ ಕಡ್ಡಾಯವಾಗಿ ಲಸಿಕೆ ನೀಡಬೇಕೆಂದು ಸೂಚಿಸಿದೆ.
ಆಗಸ್ಟ್ 31ರ ಒಳಗೆ ಒಂದು ಡೋಸ್ ಕೊರೊನಾ ಲಸಿಕೆಯನ್ನಾದರೂ ಸಿಬ್ಬಂದಿ ಕಡ್ಡಾಯವಾಗಿ ಪಡೆದಿರಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಕೊರೊನಾ ನಿಯಮಗಳನ್ನು ಪಾಲಿಸುವ ಷರತ್ತಿನ ಮೇಲೆ ವಾಣಿಜ್ಯ ಸಂಸ್ಥೆಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಬಿಬಿಎಂಪಿ ಸುತ್ತೋಲೆಯಲ್ಲಿ ತಿಳಿಸಿದೆ. 'ನಗರದಲ್ಲಿ ಕೊರೊನಾ ಹರಡುವಿಕೆ ತಡೆಯಲು ಹಾಗೂ ಪ್ರಕರಣಗಳನ್ನು ನಿಯಂತ್ರಿಸಲು ಕೊರೊನಾ ಲಸಿಕೆಯನ್ನು ಕಡ್ಡಾಯಗೊಳಿಸಿದ್ದೇವೆ. ಇದು ನೌಕರರಿಗಷ್ಟೇ ಅಲ್ಲ, ಅವರ ಸಂಪರ್ಕಕ್ಕೆ ಬರುವ ಜನರಿಗೂ ಸುರಕ್ಷಿತವಾಗಿದೆ' ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

'ವಾಣಿಜ್ಯ ಕೇಂದ್ರಗಳು ಮತ್ತು ಇತರ ಸ್ಥಳಗಳು ಹೆಚ್ಚಿನ ಜನದಟ್ಟಣೆ ಹೊಂದಿರುತ್ತವೆ. ಆದ್ದರಿಂದ, ತಮ್ಮ ಸಿಬ್ಬಂದಿಯಿಂದ ಗ್ರಾಹಕರಿಗೆ ಸೋಂಕು ಹರಡದಂತೆ ನೋಡಿಕೊಳ್ಳುವುದು ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಸಿಬ್ಬಂದಿ ಲಸಿಕೆ ಪಡೆದಿದ್ದರೆ ಸಾರ್ವಜನಿಕರಲ್ಲೂ ಆತ್ಮವಿಶ್ವಾಸವಿರುತ್ತದೆ' ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ರಣದೀಪ್ ಹೇಳಿದ್ದಾರೆ.
'ಉದ್ಯೋಗದಾತರು, ಸಂಸ್ಥೆಗಳು ತಮ್ಮ 100% ಸಿಬ್ಬಂದಿ ಲಸಿಕೆ ಪಡೆದಿರುವಂತೆ ನೋಡಿಕೊಳ್ಳಬೇಕು. ಸಂಸ್ಥೆ ಖರ್ಚಿನಲ್ಲಿಯೇ ಲಸಿಕೆ ನೀಡಬೇಕು. ಬಿಬಿಎಂಪಿ ಅಥವಾ ಸರ್ಕಾರದ ಲಸಿಕೆ ಕೇಂದ್ರಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಕಂಪನಿಯ ವೆಚ್ಚದಲ್ಲಿ ಲಸಿಕೆ ಕೊಡಿಸಬೇಕು. ಆಗಸ್ಟ್ 31ರ ಒಳಗೆ ಸಿಬ್ಬಂದಿಗೆ ಕನಿಷ್ಠ ಒಂದು ಡೋಸ್ ಕೊರೊನಾ ಲಸಿಕೆಯನ್ನಾದರೂ ಕೊಡಿಸಬೇಕು. ಈ ನಿಯಮವನ್ನು ಎಲ್ಲಾ ಸಂಸ್ಥೆಗಳು ಅನುಸರಿಸಬೇಕು' ಎಂದು ಸೂಚಿಸಿದೆ.
ಉದ್ಯೋಗಿಗಳು ಲಸಿಕೆ ಪಡೆದುಕೊಂಡಿರುವ ವರದಿಯನ್ನು ಸಂಸ್ಥೆಗೆ ನೀಡಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

ಗುರುವಾರವಷ್ಟೇ ಈ ಕುರಿತು ಬಿಬಿಎಂಪಿ ಪ್ರಸ್ತಾಪ ಮಾಡಿತ್ತು. ವಾಣಿಜ್ಯ ಸ್ಥಳಗಳಲ್ಲಿ ಕೆಲಸ ಮಾಡುವ, ಲಸಿಕೆ ಪಡೆಯದ ಸಿಬ್ಬಂದಿ ಕೊರೊನಾ ಸೋಂಕು ಹರಡುವಿಕೆಯ 'ಸೂಪರ್ ಸ್ಪ್ರೆಡರ್' ಆಗಬಹುದಾದ ಸಾಧ್ಯತೆ ಹೆಚ್ಚಿದೆ. ಅವರು ಲಸಿಕೆ ಪಡೆಯುವುದು ಇತರೆ ಸಿಬ್ಬಂದಿ ಸುರಕ್ಷತೆಯನ್ನು ಖಾತ್ರಿಪಡಿಸುವುದಲ್ಲದೇ ಗ್ರಾಹಕರಿಗೆ ಹಾಗೂ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಗೂ ಅವರಿಂದ ಸೋಂಕು ಹರಡುವ ಸಾಧ್ಯತೆಯನ್ನು ತಡೆದಂತಾಗುತ್ತದೆ' ಎಂದು ರಣದೀಪ್ ಹೇಳಿದ್ದರು.
'ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗೂ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ನೌಕರರು ಲಸಿಕೆ ಪಡೆದಿಲ್ಲವೆಂದರೆ ಅದು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ' ಎಂದು ಗೌರವ್ ಗುಪ್ತಾ ಕೂಡ ತಿಳಿಸಿದ್ದರು.
ಬೆಂಗಳೂರು ನಗರಕ್ಕೆ ಹೆಚ್ಚಿನ ಲಸಿಕೆ ಪೂರೈಕೆ:
ಬೆಂಗಳೂರು ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ಪೂರೈಕೆಯಾಗಿರುವುದಾಗಿ ಬಿಬಿಎಂಪಿ ತಿಳಿಸಿದೆ. ಬೆಂಗಳೂರಿಗೆ ಪ್ರತಿದಿನ ಕನಿಷ್ಠ 75 ಸಾವಿರ ಡೋಸ್‌ಗಳನ್ನು ವಿತರಿಸಬೇಕೆಂದು ವಿನಂತಿಸಿದ್ದೆವು ಮತ್ತು ಕಳೆದ ಕೆಲವು ದಿನಗಳಿಂದ ಪೂರೈಕೆ ಗಣನೀಯವಾಗಿ ಸುಧಾರಿಸಿದೆ ಎಂದು ಗುಪ್ತಾ ಹೇಳಿದ್ದಾರೆ.
ಲಸಿಕೆ ಪೂರೈಕೆ ಹೆಚ್ಚುತ್ತಿದ್ದಂತೆ ಸಜ್ಜಾಗಿರುವ ಬಿಬಿಎಂಪಿ, ಮೊಬೈಲ್ ಲಸಿಕಾ ಶಿಬಿರಗಳನ್ನು ಪುನರಾರಂಭಿಸಲು ಹಾಗೂ ಮಿನಿ ವ್ಯಾಕ್ಸಿನೇಷನ್ ಶಿಬಿರಗಳನ್ನು ತೆರೆದು ಹಿಂದುಳಿದ ಪ್ರದೇಶಗಳಿಗೆ ಲಸಿಕೆ ತಲುಪಿಸುವ ಕಾರ್ಯಕ್ಕೆ ಯೋಜನೆ ಹಾಕಿಕೊಂಡಿದೆ.
ಇದರೊಂದಿಗೆ, ರಾಜ್ಯಕ್ಕೆ ಪ್ರತಿ ದಿನ 5 ಲಕ್ಷ ಡೋಸ್ ಕೋವಿಡ್ ಲಸಿಕೆ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.












Click it and Unblock the Notifications