• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ ವಿಭಜನೆ : ವಿಶೇಷ ಅಧಿವೇಶನದಲ್ಲಿ ಕೋಲಾಹಲ

|

ಬೆಂಗಳೂರು, ಏ.20 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ವಿಭಜಿಸಬೇಕು ಎಂದು ಹಠ ಹಿಡಿದಿರುವ ಸರ್ಕಾರ ಸೋಮವಾರ ವಿಶೇಷ ವಿಧಾನಸಭೆ ಅಧಿವೇಶನ ಕರೆದಿದೆ. ಆದರೆ, ಪ್ರತಿಪಕ್ಷಗಳು ಬಿಬಿಎಂಪಿಯನ್ನು ವಿಭಜನೆ ಮಾಡಬಾರದು ಎಂದು ಪಟ್ಟು ಹಿಡಿದಿವೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನ ಸಭೆಯಲ್ಲಿ ಕಲಾಪ ಆರಂಭವಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು 'ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015'ವನ್ನು ಸದನಲ್ಲಿ ಮಂಡಿಸಿದ್ದಾರೆ. [ಪಾಲಿಕೆ ವಿಭಜನೆ ಹೇಗೆ?, ಇಲ್ಲಿದೆ ಮಾಹಿತಿ]

ಸಂಜೆ 5.30 : ಪ್ರತಿಪಕ್ಷಗಳ ವಿರೋಧದ ನಡುವೆಯೇ 'ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015' ಸದನದಲ್ಲಿ ಅಂಗೀಕಾರವಾಗಿದೆ. ಪ್ರತಿಪಕ್ಷಗಳ ಸದಸ್ಯರು ವಿಧೇಯಕದ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಸಮಯ 4.30 : ಬಿಬಿಎಂಪಿ ಅವ್ಯವಹಾರದ ಬಗ್ಗೆ ವರದಿ ನೀಡಿದ ಐಎಎಸ್ ಅಧಿಕಾರಿ ರಾಜೇಂದ್ರ ಕಠಾರಿಯಾ ದೇವಲೋಕದಿಂದ ಬಂದ್ರೋ, ಇಂದ್ರ ಲೋಕದಿಂದ ಬಂದ್ರೋ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಅಶೋಕ್ ಲೇವಡಿ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳ 22 ವಾರ್ಡ್‍ಗಳ ತನಿಖೆ ಮಾಡಲು ರಾಜ್ಯದ 150 ಸಿಐಡಿ ಅಧಿಕಾರಿಗಳು 2 ವರ್ಷ ತಗೆದುಕೊಂಡರು. ಆದರೆ, ರಾಜೇಂದ್ರ ಕಠಾರಿಯಾ ಮಾತ್ರ 198 ವಾರ್ಡ್‍ಗಳ ವರದಿಯನ್ನು ಕೇವಲ 15 ದಿನದಲ್ಲಿ ನೀಡಿದರು. ಇದು ಹೇಗೆ ಸಾಧ್ಯ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಸಮಯ 3.30 : ಬಿಬಿಎಂಪಿ ವಿಭಜನೆ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಪಾಲಿಕೆ ಸೂಪರ್‌ ಸೀಡ್‌ಗೆ ನಿಖರ ಕಾರಣವೇನು?, ಕಸದ ಸಮಸ್ಯೆ ಬಗೆಹರಿಸಲು ಸರ್ಕಾರ ಕೈಗೊಂಡ ಕ್ರಮಗಳೇನು? ಮುಂತಾದ ಪ್ರಶ್ನೆಗಳನ್ನು ಕೇಳಿದರು.

ಸಮಯ 2.30 : ಬಿಬಿಎಂಪಿ ವಿಭಜನೆ ವಿಧೇಯಕದ ಮಂಡನೆ ವೇಳೆ ಅರಣ್ಯ ಸಚಿವ ರಮಾನಾಥ ರೈ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆಯಿತು. ವಿಧೇಯಕದ ಕುರಿತು ಅಶೋಕ್ ಮಾತನಾಡುತ್ತಿದ್ದರು. ಈ ವೇಳೆ ರಮಾನಾಥ ರೈ ಆಗಾಗ ಮಧ್ಯ ಪ್ರವೇಶ ಮಾಡುತ್ತಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಲ್ಲೇಶ್ವರಂ ಶಾಸಕ ಅಶ್ವತ್ಥನಾರಾಯಣ ಮಂಗಳೂರಿನವರಿಗೇನು ಗೊತ್ತು? ಎಂದು ಕೇಳಿದರು. ಇದರಿಂದ ತಾಳ್ಮೆ ಕಳೆದುಕೊಂಡ ಸಚಿವರನ್ನು ಯು.ಟಿ.ಖಾದರ್ ಸಮಾಧಾನ ಪಡಿಸಿದರು.

ಸಮಯ 1.40 : ಬಿಬಿಎಂಪಿ ವಿಭಜನೆ ಖಂಡಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಆನಂದ್‌ ರಾವ್ ವೃತ್ತದ ಸಮೀಪ ಬಂಧಿಸಿದರು.

ಸಮಯ 1.30 : ಸಕಾಲಕ್ಕೆ ಬಿಬಿಎಂಪಿ ಚುನಾವಣೆಯನ್ನು ನಡೆಸಬೇಕು. ಚುನಾವಣೆಯನ್ನು ಮುಂದೂಡಲು ಅವಕಾಶ ನೀಡಬಾರದು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ಈ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಸಮಯ 1 ಗಂಟೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಘೋಷಣೆಗೆ ಏ.22ರವರೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್. [ಚುನಾವಣೆಗೆ ತಡೆಯಾಜ್ಞೆ, ವಿವರ ಇಲ್ಲಿದೆ]

ಸಮಯ 12.30 : 'ಬಿಬಿಎಂಪಿ ವಿಭಜನೆ ಅನಿವಾರ್ಯವಾದ್ದರಿಂದ ವಿಧೇಯಕ ಮಂಡನೆ ಮಾಡಿದ್ದೇವೆ. ಬೆಂಗಳೂರು ಆಡಳಿತದ ದೃಷ್ಟಿಯಿಂದ ಮಾತ್ರ 3 ಭಾಗಗಳಾಗುತ್ತಿದೆ. ಆದರೆ, ಬೆಂಗಳೂರು ಎಂಬ ಬ್ರಾಂಡ್ ಹಾಗೆಯೇ ಉಳಿಯಲಿದೆ' ಎಂದು ಸಚಿವ ಟಿ.ಬಿ.ಜಯಚಂದ್ರ ಸದನಕ್ಕೆ ಸ್ಪಷ್ಟನೆ ನೀಡಿದರು.

ಸಮಯ 12.20 : ವಿಧೇಯಕದ ಕುರಿತು ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ 'ತೂಕಕ್ಕೆ ಹಾಕಲು ಈ ವಿಧೇಯಕ ಯೋಗ್ಯವಲ್ಲ. ಸರ್ಕಾರಕ್ಕೆ ದೂರದೃಷ್ಟಿ ಇದೆಯಾ?' ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಗಳು ತುರ್ತು ಅಗತ್ಯ ಇರುವುದರಿಂದಲೇ ವಿಧೇಯಕ ಮಂಡಿಸಿದ್ದೇವೆ. ಬಿಬಿಎಂಪಿ ವಿಭಜನೆಯಾಗಬೇಕು ಎಂದು ಬಿಜೆಪಿಯವರು ಹೇಳಿದ್ದರು. ಚುನಾವಣಾ ಪ್ರಣಾಳಿಕೆಯಲ್ಲಿಯೂ ಈ ವಿಷಯ ಪ್ರಸ್ತಾಪಿಸಿದ್ದರು ಎಂದು ಉತ್ತರ ಕೊಟ್ಟರು.

ಸಮಯ 12.05 : 'ಸರ್ಕಾರದ ಇಚ್ಛೆಯಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮೂರು ಭಾಗಗಳಾಗಿ ವಿಂಗಡನೆ ಮಾಡಿದರೆ ಬೆಂಗಳೂರು ಸಿಂಗಾಪುರ ವಾಗುತ್ತದೆಯೇ?' ಎಂದು ಸರ್ಕಾರವನ್ನು ಪ್ರಶ್ನಿಸಿದ ಬಿಜೆಪಿ ಶಾಸಕ ಆರ್.ಅಶೋಕ್.

ಸಮಯ 11.55 : ವಿಧೇಯಕದ ಕುರಿತು ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ ಅವರು 'ಪಾಲಿಕೆ ವಿಭಜನೆ ಕುರಿತು ವರದಿ ನೀಡಲು ಸರ್ಕಾರ ಸಮಿತಿ ರಚನೆ ಮಾಡಿತ್ತು. ಮಧ್ಯಂತರ ವರದಿಯಲ್ಲಿ ಪಾಲಿಕೆಯನ್ನು ವಿಭಜಿಸುವುದು ಉತ್ತಮ ಎಂದು ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಅದರ ಅನ್ವಯ ವಿಭಜನೆ ಮಾಡಲಾಗುತ್ತಿದೆ' ಎಂದು ಸದನದಲ್ಲಿ ಹೇಳಿದರು.

ಸಮಯ 11.45 : 'ಸರ್ಕಾರ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ವಿಷಯದಲ್ಲಿ ಕಡೆಗಣಿಸುತ್ತಿದೆ. ಗೋವಾ ಕನ್ನಡಿಗರ ಸಮಸ್ಯೆ ಪರಿಹರಿಸಲು ಸಚಿವರೂ ಮುಂದೆ ಬಂದಿಲ್ಲ. ಕರ್ನಾಟಕಕ್ಕಿಂತ ಬೆಂಗಳೂರು ದೊಡ್ಡದೇ?. ಬಿಬಿಎಂಪಿ ವಿಭಜನೆಗೆ ವಿಶೇಷ ಅಧಿವೇಶನ ಕರೆಯಬೇಕಿತ್ತೇ? ಎಂದು ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಯ 11.40 : ವಿಧೇಯಕದ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಬೆಂಗಳೂರಿನ ಜನಸಂಖ್ಯೆ 80 ಲಕ್ಷವನ್ನು ದಾಟಿದೆ. ಯೋಜನೆಗಳ ಜಾರಿಯ ಮೇಲ್ವಿಚಾರಣೆ ಕಷ್ಟವಾಗಿದೆ. ಸುಗಮವಾದ ಆಡಳಿತ ನಡೆಸಲು ಪಾಲಿಕೆ ವಿಭಜನೆ ಅನಿವಾರ್ಯವಾಗಿದೆ' ಎಂದು ಸದನಕ್ಕೆ ವಿವರಣೆ ನೀಡಿದರು.

ಸಮಯ 11.30 : ಪ್ರತಿಪಕ್ಷ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ 'ಬಿಜೆಪಿ ಅಧಿಕಾರದಲ್ಲಿದ್ದಾಗ ಪಾಲಿಕೆ ವಿಭಜನೆ ಪರವಾಗಿದ್ರು. ಈಗ ರಾಜಕೀಯ ಕಾರಣಕ್ಕಾಗಿ ವಿಧೇಯಕ ವಿರೋಧ ಮಾಡುತ್ತಿದ್ದಾರೆ. ನೈತಿಕತೆ ಇದ್ದರೆ ಪಕ್ಷ ವಿಭಜನೆಯನ್ನು ಒಪ್ಪಿಕೊಳ್ಳಬೇಕು' ಎಂದು ಹೇಳಿದ ಸಿದ್ದರಾಮಯ್ಯ.

ಸಮಯ 11.28 : ಪ್ರತಿಪಕ್ಷಗಳ ವಿರೋಧದ ನಡುವೆಯೂ ಸಚಿವ ಜಯಚಂದ್ರ ಅವರು ವಿಧೇಯಕವನ್ನು ಮಂಡನೆ ಮಾಡಿದ್ದಾರೆ. [ಬಿಬಿಎಂಪಿ ವಿಸರ್ಜನೆ ಮಾಡಿ ಸರ್ಕಾರದ ಅಧಿಸೂಚನೆ]

ಸಮಯ 11.25 : ಬೆಳೆಹಾನಿ ಬಗ್ಗೆ ಚರ್ಚೆಗೆ ಮಧ್ಯಾಹ್ನ ಅವಕಾಶ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ವಿಧೇಯಕ ಮಂಡಿಸಲು ಅವಕಾಶ ನೀಡಿದ್ದಾರೆ.

ಸಮಯ : 11.18 : ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ದ್ರಾಕ್ಷಿ, ಭತ್ತ, ದಾಳಿಂಬೆ ಬೆಳೆಗಳಿಗೆ ಹಾನಿಯಾಗಿದ್ದು ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪಟ್ಟು ಹಿಡಿದಿದ್ದಾರೆ.

ಸಮಯ 11.10 : ವಿಶೇಷ ವಿಧಾನಸಭೆ ಅಧಿವೇಶನ ಆರಂಭ

ಸಮಯ 11 ಗಂಟೆ : ಹೈಕೋರ್ಟ್‌ನಲ್ಲಿ ಮೇ 30ರೊಳಗೆ ಚುನಾವಣೆ ನಡೆಸುವ ಆದೇಶಕ್ಕೆ ತಡೆ ನೀಡಬೇಕೆಂದು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆರಂಭ

ಸಮಯ 10.45 : ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಆರಂಭ. ವಿಶೇಷ ಅಧಿವೇಶನದ ಕುರಿತು ಚರ್ಚೆ.

ಸಮಯ 10.18 : ಬಿಬಿಎಂಪಿ ವಿಭಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಪ್ರತಿಪಕ್ಷ ಬಿಜೆಪಿ ವಿಶೇಷ ಅಧಿವೇಶನದಲ್ಲಿ ಧರಣಿ ನಡೆಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ಸಮಯ 10 ಗಂಟೆ : ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಆನಂದ್‌ಸಿಂಗ್ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿಲ್ಲ.

ಸಮಯ 9.45 : ವಿಧಾನಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದ್ದು ವಿಧೇಯಕದ ಅಂಗೀಕಾರ ಸುಲಭ ಸಾಧ್ಯವಾಗಲಿದೆ. ಆದರೆ, ವಿಧಾನಪರಿಷತ್ತಿನಲ್ಲಿ ಪಾಲಿಕೆ ವಿಭಜನೆ ಖಂಡಿಸುತ್ತಿರುವ ಜೆಡಿಎಸ್ ಮತ್ತು ಬಿಜೆಪಿ ಒಂದಾದರೆ ವಿಧೇಯಕ ಪಾಸು ಮಾಡಿಕೊಳ್ಳುವುದು ಕಷ್ಟವಾಗಲಿದೆ.

ಹೈಕೋರ್ಟ್‌ನಲ್ಲಿ ವಿಚಾರಣೆ : ಮೇ 30ರೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ತೀರ್ಪು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ನಡೆಯಲಿದೆ. ಪಾಲಿಕೆ ವಿಸರ್ಜನೆ ಮಾಡಿರುವ ಸರ್ಕಾರ ತನ್ನ ಕ್ರಮವನ್ನು ಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳಬೇಕಾಗಿದೆ. [ಪಾಲಿಕೆ ವಿಭಜನೆಗಾಗಿ ವಿಶೇಷ ಅಧಿವೇಶನ]

ಅತ್ತ ಚುನಾವಣಾ ಆಯೋಗ ಸಂಜೆ ಪತ್ರಿಕಾಗೋಷ್ಠಿ ಕರೆದಿದ್ದು, ಸರ್ಕಾರ ನೀಡಿರುವ ಮೀಸಲಾತಿ ಪಟ್ಟಿಯ ಅನ್ವಯ ಚುನಾವಣೆ ನಡೆಸಲು ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ. ಹೈಕೋರ್ಟ್ ತೀರ್ಪಿನ ಅನ್ವಯ ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
One day , special session of the Karnataka Legislative Assembly on 20th April 2015. The assembly will discuss controversial topic - Division of BBMP. Committee headed by Retired Chief Secretary B S Patil recommended the split of City Corporation in to 3 divisions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more