Bengaluru Tunnel Road: ಮೊದಲ ಹಂತದಲ್ಲಿ 18 ಕಿಮೀ ಸುರಂಗ ನಿರ್ಮಾಣ, ಅಪ್ಡೇಟ್
ಬೆಂಗಳೂರು, ಜೂನ್ 01: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ 'ಸುರಂಗ ರಸ್ತೆಯ ಯೋಜನೆ'ಯ ಅಪ್ಡೇಟ್ ಮಾಹಿತಿ ಸಿಕ್ಕಿದೆ. ಯೋಜನೆಗೆ ಸಮಗ್ರ ಯೋಜನಾ ವರದಿ (DPR) ತಯಾರಿಸಲು ಬಿಬಿಎಂಪಿ ಸಿದ್ಧತೆ ಆರಂಭಿಸಿದೆ.
ಸುರಂಗ ರಸ್ತೆಗಳ ಮೂಲಕ ಬೆಂಗಳೂರಿನ ಟ್ರಾಫಿಕ್ ನಿವಾರಣೆ ಮಾಡುವ ಡಿಸಿಎಂ ಡಿಕೆ ಶಿವಕುಮಾರ್ ಅವರ ದೂರದೃಷ್ಟಿಯು ವೇಗ ಪಡೆದುಕೊಂಡಿದೆ. ಮೊದಲ ಹಂತದಲ್ಲಿ ಅಂದಾಜು 18 ಕಿಲೋಮೀಟರ್ ಸುರಂಗ ಕಾರ್ಯ ಆರಂಭಿಸಲು ಬಿಬಿಎಂಪಿ ಸಲಹೆಗಾರರನ್ನು ಹುಡುಕುತ್ತಿದೆ. ಅಗತ್ಯ ಸಲಹೆ ಸೂಚನೆ ಮೇರೆಗೆ ಡಿಪಿಆರ್ ಸಿದ್ಧಪಡಿಸಿದೆ, ಅನುಮೋದನೆ ಪಡೆದು ಕಾರ್ಯ ಆರಂಭಿಸಲಿದೆ.

ಮೊದಲ ಹಂತದಲ್ಲಿ 18 ಕಿಲೋಮೀಟರ್ ಸುರಂಗ ಮಾರ್ಗವು ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಮಧ್ಯೆ ನಿರ್ಮಾಣವಾಗಲಿದೆ. ಇದಕ್ಕೆ ಐದು ಕಡೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳಿವೆ. ಈ ಸುರಂಗ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್, ಲಾಲ್‌ಬಾಗ್, ಬೆಂಗಳೂರು ಗಾಲ್ಫ್ ಕ್ಲಬ್, ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಕ್ವಾರ್ಟರ್ಸ್ ಮತ್ತು ಹೆಬ್ಬಾಳ ಮೇಲ್ಸೇತುವೆ ಬಳಿ ಸರ್ಕಾರಿ ಭೂಮಿಯಲ್ಲಿ ಸುರಂಗ ಕಾಮಗಾರಿ ಹಾದು ಹೋಗಲಿದೆ.
ಮೆಟ್ರೋ ಮಾರ್ಗಕ್ಕೆ ಸಮಾನವಾಗಿ ನಿರ್ಮಾಣ
ಸರ್ಜಾಪುರ ರಸ್ತೆ ಮತ್ತು ಹೆಬ್ಬಾಳದ ನಡುವೆ ಸುರಂಗ ಮಾರ್ಗ ಪ್ರಸ್ತಾಪಿಸಲಾಗಿದೆ. ನಮ್ಮ ಮೆಟ್ರೋದ ಮುಂಬರುವ ಮೆಟ್ರೋ ಮಾರ್ಗಕ್ಕೆ ಸಮಾನವಾಗಿ ಸಾಗವಾಗಲಿದೆ. ಇಂತಹ ಸುರಂಗ ಯೋಜನೆಗೆ ಕೆಲಸ ಮಾಡಿದ ಅನುಭವ ಇರುವವರನ್ನು ಬಿಬಿಎಂಪಿ ಸಲಹೆಗಾರರನ್ನಾಗಿ ಮಾಡಿಕೊಳ್ಳಲಿದೆ. ಈ ಸಂಬಂಧ ಟೆಂಡರ್ ಆಹ್ವಾನಿಸಿದ್ದು, ಜೂನ್ 14 ರವರೆಗೆ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಇದೆ.
ಸರ್ಕಾರಿ ಜಾಗದಲ್ಲಿ ಸುರಂಗ ನಿರ್ಮಿಸಲು ಪ್ಲಾನ್
ಈ ಕುರಿತು ಪ್ರತಿಕ್ರಿಯಿಸಿರುವ, ಬಿಬಿಎಂಪಿ ಇಂಜಿನಿಯರ್ ಮುಖ್ಯಸ್ಥ ಬಿ.ಎಸ್ ಪ್ರಹ್ಲಾದ್ ಅವರು, ಸರ್ಕಾರಿ ಸ್ವಾಮ್ಯದ ಭೂಮಿ, ನಿರ್ಗಮನ ಸ್ಥಳಗಳಲ್ಲಿ ನಿರ್ಮಿಸುವ ಪ್ರಸ್ತಾವನೆ ಮಾಡಿದೆ. ಇದಕ್ಕೆ ಒಪ್ಪಿಗೆ ದೊರೆತರೆ ಭೂಸ್ವಾಧೀನ ವೆಚ್ಚವೇ ಇಲ್ಲದೇ ಕಾಮಗಾರಿ ಶುರುವಾಗಲಿದೆ. ಬಹುತೇಕ ಶೂನ್ಯವಾಗಿರುತ್ತದೆ. ಯೋಜನೆಗೆ ಸರ್ಕಾರದಿಂದ ಹಣ ನೀಡಬೇಕೇ ಅಥವಾ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಬೇಕೆ ಎಂಬ ಚರ್ಚೆಗಳಾಗುತ್ತಿವೆ ಎಂದು ಮಾಹಿತಿ ನೀಡಿದರು.

18 ಕಿಮೀ. ಸುರಂಗದ ಅಂದಾಜು ವೆಚ್ಚ?
ಈ ಮೊದಲ ಹಂತದ ಸುರಂಗಕ್ಕೆ ಅಂದಾಜು 8,000 ಕೋಟಿ ರೂ. ವೆಚ್ಚ ತಗುಲಲಿದೆ. ಪ್ರತಿ ಕಿಲೋಮೀಟರ್‌ಗೆ ಸುಮಾರು 444 ಕೋಟಿ ರೂ. ವ್ಯಯವಾಗಲಿದ್ದು, ಆರು ಲೈನ್ ರಸ್ತೆ ನಿರ್ಮಾಣವಾಗಲಿದೆ. ಈ ಬಗ್ಗೆ ಡಿಪಿಆರ್ ಸಿದ್ಧವಾದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.
ಬಿಬಿಎಂಪಿ ಒಂದೇ ಬಾರಿಗೆ ಪೂರ್ತಿ ಸುರಂಗ ರಸ್ತೆ ನಿರ್ಮಿಸುವ ಸಾಹಸಕ್ಕೆ ಕೈ ಹಾಕುತ್ತಿಲ್ಲ. ಹಂತ ಹಂತವಾಗಿ ಯೋಜನೆ ಜಾರಿಗೆ ತರಲು ಚಿಂತಿಸಿದೆ. ಹೆಬ್ಬಾಳ ಮತ್ತು ಅರಮನೆ ಮೈದಾನದ ನಡುವಿನ ವಿಸ್ತರಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಈ ಯೋಜನೆ ಕುರಿತು ಮಾತನಾಡಿದಾಗ, ಇದು ಅಸಾಧ್ಯವಾದ್ದದ್ದು, ಭವಿಷ್ಯದ ದೃಷ್ಟಿಯಿಂದ ಇಷ್ಟು ಬೃಹತ್ ಸುರಂಗ ನಿರ್ಮಿಸುವುದು ಸರಿಯಲ್ಲ. ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಇದೀಗ ಡಿಕೆ ಶಿವಕುಮಾರ್ ಅವರ ದೂರದೃಷ್ಟಿಯಗೆ ಮತ್ತೆ ವೇಗ ಸಿಕ್ಕಿದ್ದು, ಯೋಜನೆಗೆ ಮತ್ತೆ ಮುನ್ನೆಲೆಗೆ ಬಂದಿದೆ.
ಮುಂದಿನ ಕೆಲವೇ ದಿನಗಳಲ್ಲಿ ಬೆಂಗಳೂರು ಟನಲ್ ರಸ್ತೆ ಯೋಜನೆಗೆ ಸಲಹೆಗಾರರು, ಡಿಪಿಆರ್ ಸಿದ್ಧವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications