E - khata: ಈ ಆಸ್ತಿಗಳಿಗೆ ಖಾತಾ ಸೌಲಭ್ಯ ಸಿಗುವುದಿಲ್ಲ ಎಂದ ಬಿಬಿಎಂಪಿ, ಯಾವುದು ?
ಇ - ಖಾತಾಗೆ ಸಂಬಂಧಿಸಿದಂತೆ ಪ್ರಮುಖ ಹಾಗೂ ಹೊಸ ಆದೇಶವೊಂದನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾಡಿದ್ದಾರೆ. ಫೆಬ್ರವರಿ 10ರ ಒಳಗಾಗಿ ಇ ಖಾತಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಡುವು ನಿಗದಿ ಮಾಡಿದ್ದಾರೆ. 2024ನೇ ಸಾಲಿನ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಇಲ್ಲಿಯ ವರೆಗೆ ವಿಲೇವಾರಿಯಾಗಿಲ್ಲ ಎಂದು ಆಸ್ತಿದಾರರು ಆರೋಪಿಸಿದ್ದಾರೆ. ಇದರ ನಡುವೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳದೆ ಇರುವ ಆಸ್ತಿಗಳಿಗೆ ಯಾವುದೇ ಖಾತಾ ನೀಡದಂತೆ ಆದೇಶಿಸಿದ್ದಾರೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯನ್ನು ಉಲ್ಲೇಖ ಮಾಡಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಈ ಆದೇಶವನ್ನು ಮಾಡಿದ್ದಾರೆ. ಅಲ್ಲದೆ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳದೆ ಇರುವ ಎ ಅಥವಾ ಬಿ ಖಾತಾ ಹೊಂದಿರುವ ನಿವೇಶನಗಳಿಗೆ ವಿಭಜನೆ ಇಲ್ಲವೇ ಉಪ ವಿಭಾಗವನ್ನು ಬಿಬಿಎಂಪಿ ಮಾಡುವುದಿಲ್ಲ ಎಂದೂ ಹೇಳಲಾಗಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬದಲಾಯಿಸಿದ್ದರೆ. ಈ ರೀತಿಯ ಖಾಲಿ ಜಮೀನುಗಳಿಗೆ ಬಿಬಿಎಂಪಿಯಿಂದ ಎ ಅಥವಾ ಬಿ ವಹಿ ಖಾತಾಗಳನ್ನು ಹೊಸದಾಗಿ ದಾಖಲಿಸುವುದಿಲ್ಲ ಎಂದೂ ಹೇಳಲಾಗಿದೆ.

ಇನ್ನು ಬಿಬಿಎಂಪಿಯ ಕಚೇರಿಗಳಲ್ಲಿ ಈಗಾಗಲೇ ಖಾತಾ ಕೊಡುವುದಕ್ಕೆ ಬಾಕಿ ಉಳಿಸಿಕೊಳ್ಳಲಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡುವುದಕ್ಕೂ ಆಯುಕ್ತರು ತಡೆ ನೀಡಿದ್ದಾರೆ. ಈ ರೀತಿಯ ಎಲ್ಲಾ ಅರ್ಜಿಗಳು ಕೂಡಲೇ ರದ್ದಾಗಲಿವೆ ಎಂದು ಹೇಳಿದ್ದಾರೆ. ಅಲ್ಲದೆ ಈ ನಿಯಮಗಳಲ್ಲು ಉಲ್ಲಂಘನೆ ಮಾಡುವ ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಸಕ್ಷಮ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆದುಕೊಳ್ಳುವುದರೊಂದಿಗೆ ಸ್ವಾಧೀನಾನುಭವ ಪತ್ರ ಪಡೆದಿರುವ ಏಕ ಘಟಕ ಇಲ್ಲವೇ ಬಹು ಘಟಕಗಳ ಕಟ್ಟಡ ವ್ಯಾಪ್ತಿಯಲ್ಲಿರುವ ಪ್ರತಿ ಘಟಕವನ್ನು ಸಹ ಎ ವಹಿಯಲ್ಲಿ ದಾಖಲು ಮಾಡಿಕೊಂಡು, ಎ- ಖಾತಾ ಕೊಡಲಾಗುತ್ತದೆ. ಒಂದೊಮ್ಮೆ ಸ ಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳದೆ ಎ ಅಥವಾ ಬಿ ಖಾತಾ ಹೊಂದಿರುವ ಸ್ವತ್ತುಗಳಲ್ಲಿ ನಿರ್ಮಿಸಿರುವ ಏಕ ಅಥವಾ ಬ ಘಟಕಗಳು. 2024ರ ಸೆಪ್ಟೆಂಬರ್ 30ರ ಒಳಗೆ ಬೆಸ್ಕಾಂ ಅಥವಾ ಜಲಮಂಡಳಿಯಿಂದ ಸಂಪರ್ಕ ಪಡೆದುಕೊಳ್ಳದೆ ಇದ್ದರೆ ಇಂತಹ ಆಸ್ತಿಗಳಿಗೂ ಬಿ ಖಾತಾ ನೀಡುವುದಾಗಿ ಹೇಳಲಾಗಿದೆ.
ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ 1961ರ ಪ್ರಕರಣ 17ಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ಹೊಸ ತಿದ್ದುಪಡಿಯ ಪ್ರಕಾರ ಏಕ ನಿವೇಶನವೂ ಸೇರಿದಂತೆ ಎಲ್ಲಾ ಸ್ವತ್ತುಗಳಿಗೆ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಈ ರೀತಿ ಅನುಮೋದನೆ ಪಡೆಯದ ಸ್ವತ್ತುಗಳಿಗೆ ಬಿಬಿಎಂಪಿಯಿಂದ ಯಾವುದೇ ಎ - ಖಾತಾ ದಾಖಲಿಸಲು ಹಾಗೂ ನೋಂದಾಯಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ನಿಯಮಾನುಸಾರ ಕ್ರಮ; ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್
ಸರ್ಕಾರದ ನಿಯಮಾನುಸಾರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ. ಈ ಹಿಂದೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಪ್ರಕರಣದ 95ರಡಿ ವ್ಯವಸಾಯ ಭೂಮಿಯನ್ನು ವ್ಯವಸಾಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಏಕ ನಿವೇಶನಕ್ಕೆ ಅನುಮೋದನೆ ನೀಡುವ ಮೂಲಕ ಖಾತಾ ನೀಡಲಾಗುತ್ತಿತ್ತು. ಈಗ ಕೆಟಿಸಿಪಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಬಿಡಿಎ ಇಲ್ಲವೇ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಆಗದೆ ಇರುವ ಆಸ್ತಿಗಳಿಗೆ ಬಿಬಿಎಂಪಿಯಿಂದ ಖಾತೆ ನೀಡುವುದಿಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಇ ಖಾತಾದಲ್ಲಿ ಮುಗಿಯದ ಗೊಂದಲ: ಇ ಖಾತಾ ನೀಡುವುದಕ್ಕೆ ಅಗತ್ಯ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳುತ್ತಿದ್ದರೂ, ಜನರಲ್ಲಿ ಈ ಬಗ್ಗೆ ಗೊಂದಲ ಮುಂದುವರಿದಿದೆ.












Click it and Unblock the Notifications