ಬೆಂಗಳೂರಿನ ಎಲ್ಲಾ ಬೀದಿಗೂ ಎಲ್‌ಇಡಿ ಬೆಳಕು!
ಬೆಂಗಳೂರು,ಫೆಬ್ರವರಿ 21 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಬೀದಿ ದೀಪಗಳಿಗೆ ಶೀಘ್ರ ಎಲ್‌ಇಡಿ ಬಲ್ಬ್ ಅಳವಡಿಸಲಿದ್ದು, ಇದರಿಂದ ಬಿಬಿಎಂಪಿಗೆ ಪ್ರತಿ ತಿಂಗಳು 8.4ಕೋಟಿ ರೂ ವಿದ್ಯುತ್ ವೆಚ್ಚ ಉಳಿತಾಯವಾಗಲಿದೆ ಎಂದು ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ನಗರದಲ್ಲಿ 4,85,000 ಸಾಂಪ್ರದಾಯಿಕ ಬೀದಿ ದೀಪಗಳನ್ನು ತೆಗೆದು ಅವುಗಳ ಸ್ಥಾನಕ್ಕೆ ಎಲ್‌ಇಡಿ ಬಲ್ಪ್ ಅಳವಡಿಸಲು ಕರೆದಿರುವ ಟೆಂಡರ್ ಪ್ರಶ್ನಿಸಿ ಬಿಬಿಎಂಪಿ ವಿದ್ಯುತ್ ಗುತ್ತಿಗೆದಾರರ ಸಂಘ ಸಲ್ಲಿಸಿದ್ದ ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದ ಬಿಬಿಎಂಪಿ ಈ ಮಾಹಿತಿ ನೀಡಿದೆ.
ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೂ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಬೀದಿ ದೀಪಗಳ ಸ್ಥಾನದಲ್ಲಿ ಎಲ್ಇಡಿ ಬಲ್ಬ್ ಅಳವಡಿಸಲು ಜಾಗತಿಕ ಟೆಂಡರ್ ಕರೆಯಲಾಗಿದೆ. ತಜ್ಞರ ಸಮಿತಿ ಶಿಫಾರಸು ಮೇರೆಗೆ ಈ ಕ್ರಮಕ್ಕೆ ನಿರ್ಧರಿಸಲಾಗಿದೆ. ಹಾಲಿ ಸಾಂಪ್ರದಾಯಿಕ ಬೀದಿ ದೀಪಗಳು ಬೆಳಗಲು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಸಲಾಗುತ್ತಿದೆ.

ಇಲ್ಇಡಿ ಬಲ್ಬ್ ಅಳವಡಿಸಿದರೆ ವಿದ್ಯುತ್ ಬಳಕೆ ಪ್ರಮಾಣ ಹಾಗೂ ನಿರ್ವಹಣೆಯ ವೆಚ್ಚ ಶೇ60 ರಿಂದ 70 ರಷ್ಟು ಕಡಿಮೆಯಾಗಲಿದೆ ಎಂದು ಆಕ್ಷೇಪಣಾ ಪತ್ರದಲ್ಲಿ ತಿಳಿಸಿದೆ.
ಅಲ್ಲದೆ ನೂತನ ಯೋಜನೆ ಅಡಿ 65, 90 ಹಾಗೂ 150 ವ್ಯಾಟ್ ಗಳ ಬಲ್ಬ್ ಬಳಸಲಾಗುವುದು. ಯೋಜನೆ ಒಪ್ಪಂದ 10 ವರ್ಷ ಅವಧಿಯದ್ದಾಗಿರುತ್ತದೆ. ಪ್ರಾಯಶಃ ದೇಶದಲ್ಲೇ ಇದು ಅತಿದೊಡ್ಡ ಯೋಜನೆಯಾಗಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications