ವಾರ್ಡ್ ಪುನರ್ ವಿಂಗಡಣೆಗೆ ಅವಕಾಶ; ಈ ವರ್ಷ ಬಿಬಿಎಂಪಿ ಚುನಾವಣೆ ಇಲ್ಲ
ಬೆಂಗಳೂರು, ಜೂನ್ 20: ಈ ವರ್ಷ ಅಂದರೆ 2023ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಯೋದು ಬಹುತೇಕ ಅನುಮಾನ. ಏಕೆಂದರೆ ವಾರ್ಡ್ ಪುನರ್ ವಿಂಗಡಣೆ ಮಾಡಲು ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ 12 ವಾರಗಳ ಕಾಲಾವಕಾಶ ನೀಡಿದೆ.
ಹಾಗಾಗಿ ಬಹುತೇಕ 2024ಕ್ಕೆ ಪಾಲಿಕೆ ಚುನಾವಣೆ ನಡೆಯೋದೂ ಖಾತ್ರಿಯಾಗಿದ್ದು, ಹೆಚ್ಚು ಕಡಿಮೆ ಲೋಕಸಭಾ ಚುನಾವಣೆ ಸಮಯದಲ್ಲಿ ಅಥವ ಅದು ಮುಗಿದ ಬಳಿಕ ಬಿಬಿಎಂಪಿ ಚುನಾವಣೆ ನಡೆಸುವ ಸಾಧ್ಯತೆ ಇದೆ. 2020ರ ಸೆಪ್ಟೆಂಬರ್‌ನಿಂದ ಚುನಾವಣೆ ನಡೆಯದೇ ಬಿಬಿಎಂಪಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ವಿಧಾನಸಭೆ ಕ್ಷೇತ್ರಗಳ ವಾರ್ಡ್ ಮರು ವಿಂಗಡಣೆಯಲ್ಲಿ ಲೋಪವಾಗಿದ್ದು, ಅದನ್ನು ಸರಿಪಡಿಸಿದ ನಂತರವೇ ಚುನಾವಣೆ ವಿಚಾರದಲ್ಲಿ ಮುಂದುವರಿಯಲಾಗುವುದು ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಸ್ಪಷ್ಟಪಡಿಸಿದೆ.
ಬಿಬಿಎಂಪಿ ವಾರ್ಡ್ ಮರುವಿಂಗಣೆ ಮಾಡಿ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು 2022ರ ಜು.14ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಎತ್ತಿಹಿಡಿದ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮಾಜಿ ಮೇಯರ್ ಬಿ. ಎನ್. ಮಂಜುನಾಥ ರೆಡ್ಡಿ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯು ಸೋಮವಾರ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಅರ್ಜಿದಾರರ ಪರ ಹಿರಿಯ ವಕೀಲರು ಹಾಜರಾಗಿ, ವಾರ್ಡ್ ಮರು ವಿಂಗಡಣೆಯಲ್ಲಿ ಕೆಲವೊಂದು ಲೋಪದೋಷಗಳಾಗಿವೆ. ಈ ಅಂಶಗಳನ್ನು ಏಕಸದಸ್ಯಪೀಠವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಆದರೂ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಲೋಪಗಳು ಕಂಡುಬಂದಾಗ ಅದನ್ನು ಸರಿಪಡಿಸುವುದು ಅನಿವಾರ್ಯ ಎಂದು ವಿಭಾಗೀಯ ಪೀಠದ ಗಮನಕ್ಕೆ ತಂದರು.

ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯಲ್ಲಿ ಕೆಲವೊಂದು ಲೋಪದೋಷಗಳಾಗಿವೆ. ಅವು ಸರ್ಕಾರದ ಗಮನಕ್ಕೆ ಬಂದಿವೆ. ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ. ಆದರೆ, ಲೋಪಗಳನ್ನು ಸರಿಪಡಿಸಿಕೊಂಡು ಹೊಸದಾಗಿ ವಾರ್ಡ್ ಮರು ವಿಂಗಡಣೆ ಮಾಡುವುದು ಅನಿವಾರ್ಯವಾಗಿದೆ. ಆ ನಂತರವೇ ಚುನಾವಣೆ ವಿಚಾರಣೆಯಲ್ಲಿ ಸರ್ಕಾರ ಮುಂದುವರಿಯುತ್ತದೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಹೇಳಿಕೆ ದಾಖಲಿಸಿಕೊಂಡ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ 12 ವಾರ ಕಾಲಾವಕಾಶ ನೀಡಿ ಮೇಲ್ಮನವಿ ವಿಚಾರಣೆ ಮುಂದೂಡಿದೆ.
ಏನಿದು ಪ್ರಕರಣ?; ಬಿಬಿಎಂಪಿ ವಾರ್ಡ್‌ಗಳನ್ನು ಪುನರ್ ರಚಿಸಿ 2022ರ ಜು.14ರಂದು ಹಿಂದಿನ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಮಾಜಿ ಶಾಸಕಿ ಸೌಮ್ಯಾರೆಡ್ಡಿ ಹಾಗೂ ಹಾಲಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಮಾಜಿ ಮೇಯರ್ ಬಿ. ಎನ್. ಮಂಜುನಾಥ ರೆಡ್ಡಿ, ಶಾಸಕ ಎಂ. ಸತೀಶ್ ರೆಡ್ಡಿ ಸೇರಿದಂತೆ ಹಲವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ್ದ ನ್ಯಾ.ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ, ಸರ್ಕಾರದ ಅಧಿಸೂಚನೆಯಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ತಿಳಿಸಿ 2022ರ ಸೆ.16ರಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ವಿಭಾಗೀಯಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ.
ವಾರ್ಡ್ ಮರು ವಿಂಗಡಣೆ ಸಂಕೀರ್ಣ ಕೆಲಸ. ಎಲ್ಲ ವಾರ್ಡ್‌ಗಳನ್ನೂ ಸಮಾನ ಜನಸಂಖ್ಯೆಗೆ ಅನುಗುಣವಾಗಿ ವಿಂಗಡಿಸುವುದು ಸುಲಭವಲ್ಲ. ಹಲವು ಅಂಶಗಳ ಆಧಾರದಲ್ಲಿ ವಿಸ್ತಾರವಾದ ಪ್ರದೇಶಗಳನ್ನು ವಿಂಗಡಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉದ್ಭವಿಸುವುದು ಸಹಜ. ಆದ್ದರಿಂದ, ಸಣ್ಣಪಟ್ಟ ಲೋಪವಿದ್ದರೆ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ. ಗಂಭೀರ ಲೋಪ ಕಂಡುಬಂದರೆ ಮಾತ್ರ ಮಧ್ಯ ಪ್ರವೇಶಿಸಲಾಗುವುದು ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು.
ಮೇಲ್ಮನವಿದಾರರ ವಾದ: ಬಿಬಿಎಂಪಿ ವ್ಯಾಪ್ತಿಯ 84 ಲಕ್ಷ ಜನಸಂಖ್ಯೆಯನ್ನು ಒಟ್ಟು 243 ವಾರ್ಡ್‌ಗಳಿಂದ ಭಾಗಿಸಿದರೆ ಪ್ರತಿ ವಾರ್ಡ್‌ಗೆ ಅಂದಾಜು 34,500 ಜನಸಂಖ್ಯೆಯಾಗುತ್ತದೆ. ವಾರ್ಡ್ ವಿಂಗಡಣೆಯಲ್ಲಿ ಜನಸಂಖ್ಯೆಯ ಪರಿಗಣಿಸುವಲ್ಲಿ ಶೇ.10ರಷ್ಟು ಏರಿಳಿತದ ಅನುಪಾತ ಅನುಸರಿಸಲಾಗಿದೆ ಎಂಬುದಾಗಿ ಸರ್ಕಾರ ಹೇಳಿದೆ.
ಸರ್ಕಾರ ಹೇಳಿದಂತೆ ಶೇ.10ರಷ್ಟು ಏರಿಳಿತ ಅನುಪಾತ ಪರಿಗಣಿಸಿದರೂ ವಾರ್ಡ್ ಜನಸಂಖ್ಯೆ 31 ಸಾವಿರದಿಂದ 37 ಸಾವಿರದ ಆಸುಪಾಸಿಗೆ ಬರುತ್ತದೆ. ಆದರೆ, ಕೆಲ ವಾರ್ಡ್‌ಗಳಲ್ಲಿ 30 ಸಾವಿರ ಜನ ಸಂಖ್ಯೆಯಿದೆ. ಮತ್ತೆ ಕೆಲ ವಾರ್ಡ್‌ಗಳಲ್ಲಿ 37 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ.
ಇನ್ನೂ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಲ್ಲಿ ಸಂಖ್ಯೆ ಕಡಿತಗೊಳಿಸಲಾಗಿದೆ. ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳ ವಾರ್ಡ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ರಾಜಕೀಯ ಲಾಭಕ್ಕಾಗಿ ಹೀಗೆ ಮಾಡಲಾಗಿದೆ ಎಂದು ತಕರಾರು ಅರ್ಜಿಯಲ್ಲಿ ಆಕ್ಷೇಪಿಸಿದ್ದರು.












Click it and Unblock the Notifications