ದೀಪಾವಳಿ ಕಸ ವಿಲೇವಾರಿಗೆ ಬಿಬಿಎಂಪಿ ಸಿದ್ಧ
ಬೆಂಗಳೂರು, ನ.3 : ಬೆಂಗಳೂರಿನ ಜನರು ಸಂಭ್ರಮದಿಂದ ದೀಪಾವಳಿ ಆಚರಣೆ ಮಾಡುತ್ತಿದ್ದರೆ, ಬಿಬಿಎಂಪಿ ಅಧಿಕಾರಿಗಳು ಕಸ ವಿಲೇವಾರಿಗೆ ಬೇಕಾದ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಹಬ್ಬದಿಂದ ಉಂಟಾಗುವ ಹೆಚ್ಚಿನ ಕಸವನ್ನು ವಿಲೇವಾರಿ ಮಾಡಲು ಬಿಬಿಎಂಪಿ ಸಜ್ಜಾಗಿ ನಿಂತಿದೆ.
ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಹೆಚ್ಚುವರಿಯಾಗಿ ಶೇ 25ರಷ್ಟು ಕಸ ಸಂಗ್ರಹಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಪಟಾಕಿ, ಹೂ, ಕುಂಬಳಕಾಯಿ, ಬಾಳೆಕಂದುಗಳಿಂದ ನಗರದ ಕಸದ ಪ್ರಮಾಣ ಹೆಚ್ಚಳವಾಗಲಿದೆ.

ಹಬ್ಬದ ಸಂದರ್ಭದಲ್ಲಿ ಉತ್ಪತ್ತಿಯಾಗುವ ಹೆಚ್ಚಿನ ಕಸವನ್ನು ಸಂಗ್ರಹಿಸಲು ವಿವಿಧ ವಾರ್ಡ್ ಗಳಲ್ಲಿ ಟಿಪ್ಪರ್, ಆಟೋಗಳ ವ್ಯವಸ್ಥೆ ಮಾಡಲಾಗಿದೆ. ವಾರ್ಡ್ ಮಟ್ಟದಲ್ಲಿ ಇವು ಕಸ ಸಂಗ್ರಹಣೆ ಮಾಡಿ, ಕಸದ ರಾಶಿ ಬೀಳದಂತೆ ಎಚ್ಚರವಹಿಸುತ್ತವೆ. ಪಟಾಕಿ ಅಂಗಡಿ ಮಾಲೀಕರು ಮತ್ತು ಜನರಿಗೆ ಪೌರ ಕಾರ್ಮಿಕರಿಗೆ ಪಟಾಕಿ ಕಸಗಳನ್ನು ನೀಡಿ ಎಂದು ಆಯುಕ್ತರು ಮನವಿ ಮಾಡಿದ್ದಾರೆ.
ಕಡಿಮೆ ಪಟಾಕಿಗಳನ್ನು ಸಿಡಿಸಿ ಹಬ್ಬವನ್ನು ಆಚರಣೆ ಮಾಡಿ ಎಂದು ಆಯುಕ್ತರು ಜನರಿಗೆ ಕರೆ ನೀಡಿದ್ದಾರೆ. ಪಟಾಕಿ ಕಸಗಳನ್ನು ಚರಂಡಿಗಳಿಗೆ ಎಸೆಯಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಹಬ್ಬದ ನಂತರ ಚರಂಡಿಗಳನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಆಯುಕ್ತರು ತಿಳಿಸಿದ್ದಾರೆ.
ವಾರ್ಡ್ ಮಟ್ಟದಲ್ಲಿ ಕಸ ವಿಲೇವಾರಿಯ ಕುರಿತು ಕಾರ್ಯಕಾರಿ ಇಂಜಿನಿಯರ್ ಗಳು ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಪಟಾಕಿಗಳಿಂದ ಅನಾಹುತಗಳು ಸಂಭವಿಸಿದರೆ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಿಗೆ ಸೂಚಿಸಿಲಾಗಿದೆ ಎಂದು ಮಾಹಿತಿ ನೀಡಿದರು. ಕಸ, ಮುಂತಾದ ಸಮಸ್ಯೆಗಳಿದ್ದರೆ ಸಾವರ್ಜನಿಕರು ಬಿಬಿಎಂಪಿಯ ಕಂಟ್ರೋಲ್ ರೂಂಗೆ 22660000/ 22221188 ಕರೆ ಮಾಡಬಹುದಾಗಿದೆ.












Click it and Unblock the Notifications