BBMP New Propery Tax: ಹೊಸ ಆಸ್ತಿ ತೆರಿಗೆ ಪದ್ಧತಿ ಜಾರಿ ತಡ: ಸಂಕಷ್ಟ ಒಂದು ವರ್ಷ ದೂರ
ಬೆಂಗಳೂರು, ಮಾರ್ಚ್ 12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕರ್ನಾಟಕ ಸರ್ಕಾರ ಹೊಸ ತೆರಿಗೆ ವ್ಯವಸ್ಥೆಯನ್ನು ಇದೇ ಆರ್ಥಿಕ ವರ್ಷ ಏಪ್ರಿಲ್ ನಿಂದ ಜಾರಿಗೆ ತರಬಹುದು ಎನ್ನಲಾಗಿತ್ತು. ಆದರೆ ಈ ವ್ಯವಸ್ಥೆ ಸದ್ಯಕ್ಕೆ ಜಾರಿಯಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.
ಬೆಂಗಳೂರಲ್ಲಿ 'ಮೌಲ್ಯಾಧಾರಿತ ಆಸ್ತಿ ತೆರಿಗೆ ವ್ಯವಸ್ಥೆ' ಅನುಷ್ಠಾನಕ್ಕೆ ಸರ್ಕಾರ ತಯಾರಾಗಿತ್ತು. ಆದರೆ ನಗರದಲ್ಲಿ ಸದ್ಯ ನೀರಿನ ಬಿಕ್ಕಟ್ಟು ಎದುರಾಗಿದೆ. ಲೋಕಸಭಾ ಚುನಾವಣೆಗೆ ಇದರಿಂದ ಪಟ್ಟು ಬೀಳುವ ಸಂಭವವಿರುವ ಕಾರಣ ಸಂಭಾವ್ಯ ಸೋಲು, ಗೆಲುವಿನ ಲೆಕ್ಕಾಚಾರದ ಭಾಗವಾಗಿ ಸರ್ಕಾರ ಈ ವರ್ಷ ಹೊಸ ತರಿಗೆ ವ್ಯವಸ್ಥೆ ಜಾರಿಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಇದರಿಂದ ನೀರಿನ ಬಿಕಟ್ಟಿಗೆ ಒಳಗಾಗಿರುವ ಬೆಂಗಳೂರಿಗರು ನಿಟ್ಟುಸಿರು ಬಿಡುವಂತಾಗಿದೆ.

ಮುಂದಿನ ವರ್ಷ 2025-26ರ ಅವಧಿಯಲ್ಲಿ ಮಾತ್ರ 'ಮೌಲ್ಯಾಧಾರಿತ ಆಸ್ತಿ ತೆರಿಗೆ ವ್ಯವಸ್ಥೆ' ಜಾರಿ ಆಗಬಹುದು ಎಂದು ಸೋಮವಾರ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಅಗತ್ಯ ಸಾಫ್ಟವೇರ್ ರಚನೆ ಆಗಿಲ್ಲ
ರಾಜಧಾನಿಯಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಿದೆ. ಹೊಸ ತೆರಿಗೆ ವ್ಯವಸ್ಥೆಯಿಂದ ಮತ ಬ್ಯಾಂಕ್‌ಗೆ ಪೆಟ್ಟು ಬೀಳುವ ಸಾಧ್ಯತೆ ಇರುವ ಕಾರಣಕ್ಕೆ ಇದೇ ವರ್ಷ ಅಂದರೆ 2024-2025ರ ಏಪ್ರಿಲ್ ನಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದ್ದ ಹೊಸ ತೆರಿಗೆ ಪದ್ಧತಿಯು ಮುಂದಿನ ವರ್ಷ ಜಾರಿಗೆ ಬರಲಿದೆ.
ಮುಖ್ಯವಾಗಿ ಈ ಹೊಸ ತರಿಗೆ ವ್ಯವಸ್ಥೆಗೆ ಅಗತ್ಯವಾದ ಸಾಫ್ಟ್‌ವೇರ್ ಅನ್ನು ಸರ್ಕಾರ ಸಿದ್ಧಪಡಿಸಿಲ್ಲ. ಇದು ಸಹ ಜಾರಿಗೆ ಇನ್ನೊಂದು ಕಾರಣವಾಗಿದೆ. ಹೊಸ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಜನರು ಅರ್ಥಮಾಡಿಕೊಳ್ಳಲು ಮತ್ತು ಅದರ ಪ್ರಯೋಜನಗಳ ಬಗ್ಗೆ ಅವರಿಗೆ ಶಿಕ್ಷಣ ನೀಡಲು ಬಿಬಿಎಂಪಿ ಹೆಚ್ಚಿನ ಸಮಯ ನೀಡಬೇಕಿದೆ ಎಂದು ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹಾಲಿ ತೆರಿಗೆ ಆಸ್ತಿ ತರಿಗೆ ವ್ಯವಸ್ಥೆ ಹೇಗಿದೆ
ಬಿಬಿಎಂಪಿಯ ತಿಳಿಸಿರುವ ಪ್ರಕಾರ, ಈ ಹಿಂದೆ 2008ರಲ್ಲಿ ಜಾರಿಗೆ ತಂದಿದ್ದ ಪ್ರದೇಶ ಮೌಲ್ಯದ ಆಸ್ತಿ ತೆರಿಗೆ ವ್ಯವಸ್ಥೆಯು ಆರು ವಲಯಗಳಡಿ 18 ವರ್ಗಗಳನ್ನು ಹೊಂದಿದೆ. ಪ್ರತಿ ವಲಯದಲ್ಲೂ ಅಂದು ಚಾಲ್ತಿಯಲ್ಲಿರುವ ಬಾಡಿಗೆ ಮೌಲ್ಯದ ಆಧಾರದ ಮೇಲೆ ವಿಭಿನ್ನ ತೆರಿಗೆ ದರ ನಿಗದಿ ಆಗಿದೆ. ಅತಿಕ್ರಮಿಸುವ ಆಸ್ತಿಗಳ ಸಂಬಂಧ ಅಧಿಕಾರಿಗಳಿಗೆ ವಿವೇಚನೆ ನೀಡಲಾಯಿತು. ಇದೆಲ್ಲವು ಗೊಂದಲ ಉಂಟು ಮಾಡಿತು. ಇದೆಲ್ಲ ಕಾರಣದಿಂದ ಜನರು ತಪ್ಪಾಗಿ ಆಸ್ತಿಗಳನ್ನು ಘೋಷಿಸಿದ್ದಾರೆ ಅಂತಲೂ ಮಾಹಿತಿ ಇದೆ.
ತೆರಿಗೆ ಪದ್ಧತಿ ಮಾರ್ಗದರ್ಶನ ಮೌಲ್ಯಗಳು 2008 ಹಾಗೂ 2016 ರಲ್ಲಿ ಹಿಂದಿನ ಪರಿಷ್ಕರಣೆ ಮಧ್ಯೆ ಬದಲಾವಣೆಗೊಂಡಿದೆ. ಕಡಿಮೆ ಮಾರ್ಗದರ್ಶನದ ಮೌಲ್ಯವನ್ನು ಹೊಂದಿರುವ ನಾಗರಿಕರನ್ನು ಹೆಚ್ಚಿನ ತೆರಿಗೆ ದರ ವಲಯಗಳಲ್ಲಿ ಮತ್ತು ಪ್ರತಿಯಾಗಿ ವರ್ಗೀಕರಿಸಲಾಗಿದೆ.
ಹೊಸ ತೆರಿಗೆ ಪದ್ಧತಿಯಲ್ಲಿ 6 ವಿಭಾಗ
ಸದ್ಯ ಇದೇ ಏಪ್ರಿಲ್‌ನಿಂದ ಜಾರಿಗೆ ತರಬೇಕು ಎಂದು ಹೇಳಲಾಗಿದ್ದ ಪ್ರಸ್ತಾವಿತ ಆಸ್ತಿ ತೆರಿಗೆ ವ್ಯವಸ್ಥೆಯು ಒಟ್ಟು ಆರು ವಿಭಾಗಗಳನ್ನು ಹೊಂದಿದೆ. 'ವಸತಿ, ವಾಣಿಜ್ಯ, ಕೈಗಾರಿಕಾ, ಸ್ಟಾರ್ ಹೋಟೆಲ್‌ಗಳು, ವಿನಾಯಿತಿ ಮತ್ತು ಖಾಲಿ ಭೂಮಿ' ಎಂಬ ವಿಭಾಗಗಳನ್ನು ಹೊಂದಿದೆ ಎಂದು ಸರ್ಕಾರ ತಿಳಿಸಿದೆ.
ಆಸ್ತಿ ತೆರಿಗೆ ನಿಗದಿಯ ಮಾಹಿತಿ
ಈ ಹೊಸ ತರಿಗೆ ಪದ್ಧತಿಯಲ್ಲಿ ಆಸ್ತಿ ಇರುವ ಪ್ರದೇಶ, ಆಸ್ತಿಯ ಗಾತ್ರ, ಅದರ ಬಳಕೆಯ ಆಧಾರದ ಮೇಲೆ ಆಸ್ತಿಯ ಮಾರ್ಗದರ್ಶಿ ಮೌಲ್ಯದ ನಿರ್ದಿಷ್ಟ ಶೇಕಡಾವಾರು ಪ್ರಮಾಣ ತೆರಿಗೆ ನಿಗದಿಪಡಿಸಲಾಗುತ್ತದೆ. ಅಂದರೆ ಶೇಕಡಾ 0.075-0.15ರಷ್ಟು ಮಾರ್ಗದರ್ಶನ ಮೌಲ್ಯವನ್ನು ವಸತಿ ಆಸ್ತಿಗಳಿಗೆ ನಿಗದಿ ಮಾಡಲಾಗುತ್ತದೆ. ಇದು ಪ್ರತಿ ವರ್ಷಕ್ಕೆ ಸರಾಸರಿ ಆಸ್ತಿ ತೆರಿಗೆ ರೂ. 5,274 ಆಗಲಿದೆ.
ಇದು ಅಸ್ತಿತ್ವದಲ್ಲಿರುವ ಸರಾಸರಿ ಆಸ್ತಿ ತೆರಿಗೆ ರೂ 4,942 ಗಿಂತ ಶೇಕಡಾ 6.7ರಷ್ಟು ಹೆಚ್ಚಾಗಿದೆ. ಸರಾಸರಿ ಹೆಚ್ಚಳವು ವಾಣಿಜ್ಯ, ಕೈಗಾರಿಕಾ ಮತ್ತು ಸ್ಟಾರ್ ಹೋಟೆಲ್‌ಗಳಿಗೆ ಒಂದೇ ಶ್ರೇಣಿಯಲ್ಲಿದ್ದರೆ, ಖಾಲಿ ಜಮೀನುಗಳಲ್ಲಿ ಹೆಚ್ಚಳವು ಶೇಕಡಾ 8.2ರಷ್ಟು ಹೆಚ್ಚಾಗುತ್ತದೆ. ವಾರ್ಷಿಕ ಹೆಚ್ಚಳವು ಶೇಕಡಾ 10 ಕ್ಕೆ ಸೀಮಿತವಾಗಿದೆ.
ಕುಡಿಯುವ ನೀರಿಗಾಗಿ ಹೆಚ್ಚು ಹಣ ನೀಡುತ್ತಿರುವ ಬೆಂಗಳೂರು ನಿವಾಸಿಗಳಿಗೆ ಈ ತೆರಿಗೆ ಪದ್ಧತಿ ಜಾರಿಯಾದರೆ ಹೆಚ್ಚು ತೆರಿಗೆ ಪಾವತಿಸಬೇಕಾದ ಅನಿವಾರ್ಯತೆಯು ಸೃಷ್ಟಿಯಾಗಬಹುದು. ಆದರೆ ಈ ವರ್ಷ ಹೊಸ ತೆರಿಗೆ ಪದ್ಧತಿ ಜಾರಿ ಆಗದ ಹಿನ್ನೆಲೆಯಲ್ಲಿ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications