Khata: ಬೆಂಗಳೂರಿನಲ್ಲಿ ಖಾತಾ ಇಲ್ಲದ ಆಸ್ತಿದಾರರಿಗೆ ಗುಡ್‌ನ್ಯೂಸ್ ಕೊಟ್ಟ ಬಿಬಿಎಂಪಿ!
ಬೆಂಗಳೂರಿನಲ್ಲಿ ಇಲ್ಲಿಯ ವರೆಗೂ ಖಾತಾ ಮಾಡಿಸಿಕೊಳ್ಳದ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಖಾತಾ ಇಲ್ಲದೆ ಇರುವಂತಹ ಸುಮಾರು 5 ಲಕ್ಷಕ್ಕೂ ಹೆಚ್ಚು ಆಸ್ತಿಗಳು (ಸ್ವತ್ತುಗಳು) ಇದೆ ಎಂದು ನಿರೀಕ್ಷಿಸಲಾಗಿದೆ. ಈ ನಿರ್ದಿಷ್ಟ ಸ್ವತ್ತುಗಳು ಇಲ್ಲಿಯವರೆಗೆ ಯಾವುದೇ ಖಾತಾ ಮಾಡಿಸಿಲ್ಲ. ಈ ರೀತಿ ಖಾತಾ ಮಾಡಿಸದೆಯೇ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ವಹಿವಾಟು ನಡೆಸುತ್ತಿದೆ. ಅವುಗಳಲ್ಲಿ ಹಲವು ಸ್ವತ್ತುಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ ಎಂದು ಬಿಬಿಎಂಪಿ ಹೇಳಿದೆ. ಇದೀಗ ಈ ರೀತಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳಿಗೆ ಬಿಬಿಎಂಪಿಯು ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸಿಗಳಿಗೆ ಖಾತಾ ಇಲ್ಲವೇ. ಇದಕ್ಕೆ ಕೈಬರಹ ಖಾತಾ ಸಹ ಇಲ್ಲವೇ. ಹೊಸ ಬಿಬಿಎಂಪಿ ಆಸ್ತಿ ಖಾತಾವನ್ನು ಹೇಗೆ ಪಡೆಯುವುದು ಎಂಬುದು ಇಲ್ಲಿದೆ. ಆನ್‌ಲೈನ್ ಮೂಲಕ ಸ್ವಯಂಚಾಲತವಾಗಿ ಯಾವುದೇ ತೊಂದರೆಯಿಲ್ಲದೆ ನೀವು ಹೊಸ ಖಾತಾ ಪಡೆದುಕೊಳ್ಳಬಹುದಾಗಿದೆ.

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ಅವರು ಈ 5 ಲಕ್ಷಕ್ಕೂ ಹೆಚ್ಚು ಸ್ವತ್ತುಗಳನ್ನು ಪಾಲಿಕೆಯ ತೆರಿಗೆ ವ್ಯಾಪ್ತಿಗೆ ತರುವ ಬಗ್ಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಅರ್ಹತೆ ಇರುವಂತಹ ಎಲ್ಲಾ ಆಸ್ತಿಗಳಿಗೂ ಬಿಬಿಎಂಪಿಯಿಂದ ಹೊಸ ಖಾತಾ ನೀಡುವ ದೂರದೃಷ್ಟಿ ರೂಪಿಸಿದ್ದಾರೆ ಅಂತ ಬಿಬಿಎಂಪಿ ಹೇಳಿದೆ.
ಖಾತಾ ಇಲ್ಲದವರಿಗೆ ಹೊಸ ವೆಬ್‌ಸೈಟ್ ವ್ಯವಸ್ಥೆ: ಬೆಂಗಳೂರಿನ ಆಸ್ತಿದಾರರು ಖಾತಾ ಇಲ್ಲದಿದ್ದರೆ ಅವರು ಆನ್‌ಲೈನ್‌ನ ಮೂಲಕ ಖಾತಾ ಪಡೆದುಕೊಳ್ಳುವುದಕ್ಕೆ ಹೊಸ ವೆಬ್‌ಸೈಟ್ ಬಿಡುಗಡೆ ಮಾಡಲಾಗಿದೆ. ನೀವು ಬಿಬಿಎಂಪಿಯ ಖಾತೆಯನ್ನು ಪಡೆದುಕೊಳ್ಳದೆ ಇದ್ದರೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ @ https://bbmp.karnataka.gov.in/newkhata ಎನ್ನುವಲ್ಲಿ ಸಲ್ಲಿಸಬಹುದಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಹೊಸ ಖಾತಾ ಪಡೆಯುವುದಕ್ಕೆ ಬೇಕಿರುವ ಪ್ರಮುಖ ದಾಖಲೆಗಳು
* ಆಸ್ತಿದಾರರ ಆಧಾರ್ ಸಂಖ್ಯೆ
* ನಿಮ್ಮ ಮಾರಾಟ/ನೋಂದಣಿ ಪತ್ರದ ಸಂಖ್ಯೆ
* ಆಸ್ತಿ ಫೋಟೋ
* ಮಾರಾಟ / ನೋಂದಣಿ ಪತ್ರಕ್ಕೆ ಕನಿಷ್ಠ ಒಂದು ದಿನ ಮೊದಲು ಆಸ್ತಿಯ ಋಣಭಾರ ಪ್ರಮಾಣಪತ್ರವನ್ನು ದಿನಾಂಕ: 31-10-2024 ರವರೆಗೆ ಅಥವಾ ನಂತರದವರೆಗೆ ಇರುವುದು. ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಹೊಸ ಖಾತಾಗೆ ಅರ್ಜಿ ಸಲ್ಲಿಸುವ ಮುನ್ನ ಈ ವಿಷಯ ಗಮನಿಸಿ
ಖಾತಾ ಇಲ್ಲದೆ ಇರುವವರು ಪಾಲಿಕೆಯ ಆನ್‌ಲೈನ್ ವ್ಯವಸ್ಥೆಯ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಒಂದೊಮ್ಮೆ ನೀವು ಈಗಾಗಲೇ ನಿಮ್ಮ ಸ್ವತ್ತಿಗಾಗಿ ಬಿಬಿಎಂಪಿಯಿಂದ ಪಡೆದಿರುವ ಕೈಬರಹ ಖಾತೆಗಾಗಿ ಇ-ಖಾತಾ ಪಡೆಯಲು ಬಯಸುತ್ತಿದ್ದರೆ. ಅಂತಹ ಸಂದರ್ಭದಲ್ಲಿ ಹೊಸ ಖಾತಾ ಪಡಿಯಲು ಅರ್ಜಿಯನ್ನು ಸಲ್ಲಿಸಬಾರದು. ತಪ್ಪಿದಲ್ಲಿ ಅಂತಹವವರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದೂ ಬಿಬಿಎಂಪಿ ಎಚ್ಚರಿಕೆ ನೀಡಿದೆ.
5 ಲಕ್ಷ ಖಾತಾಗಳಿಗೆ ಅನುಕೂಲ: ಇನ್ನು ಬಿಬಿಎಂಪಿಯ ಈ ಹೊಸ ಕ್ರಮದಿಂದಾಗಿ ಬೆಂಗಳೂರಿನಲ್ಲಿ ಯಾವುದೇ ಖಾತಾ ಇಲ್ಲದೆ ಇರುವ ಅಂದಾಜು 5 ಲಕ್ಷಕ್ಕೂ ಹೆಚ್ಚು ಆಸ್ತಿದಾರರಿಗೆ ಅನುಕೂಲವಾಗಲಿದೆ. ಆಸ್ತಿಗಳಿಗೆ ಖಾತಾ ಇಲ್ಲದೆ ಇರುವವರು ಇ -ಖಾತಾ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಈಗಾಗಲೇ ಬಿಬಿಎಂಪಿಯು ಸ್ಪಷ್ಟಪಡಿಸಿದೆ. ಈಗಾಗಲೇ ಇ ಖಾತಾಗೆ ಬಿಬಿಎಂಪಿ ಆನ್‌ಲೈನ್‌ನಲ್ಲಿ ವ್ಯವಸ್ಥೆ ಕಲ್ಪಿಸಿತ್ತಾದರೂ. ಯಾವುದೇ ಖಾತಾ ಇಲ್ಲದೆ ಇರುವವರು ಏನು ಮಾಡಬೇಕು ಎನ್ನುವ ಗೊಂದಲ ಸೃಷ್ಟಿಯಾಗಿತ್ತು.
ಇದೀಗ ಯಾವುದೇ ಖಾತಾ ಇಲ್ಲದೆ ಇರುವ ಆಸ್ತಿದಾರರಿಗೂ ಗುಡ್‌ನ್ಯೂಸ್ ಕೊಟ್ಟಿದೆ. ಅಲ್ಲದೆ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎನ್ನುವುದನ್ನೂ ತಿಳಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಖಾತಾ ಇಲ್ಲದ ಆಸ್ತಿದಾರರು ಸುಲಭವಾಗಿ ಖಾತಾ ಮಾಡಿಸಿಕೊಳ್ಳಲು ಅನುಕೂಲವಾಗಲಿದೆ.
ಬೆಂಗಳೂರಿನಲ್ಲಿ ಖಾತಾ ವಿಚಾರದಲ್ಲಿ ಬಿಬಿಎಂಪಿಯು ಹೊಸ ನಿಯಮಗಳನ್ನು ಅಳವಡಿಸಿಕೊಂಡು ಆಸ್ತಿದಾರರಿಗೆ ಗೊಂದಲವನ್ನು ತಪ್ಪಿಸುತ್ತಿದೆ. ಇದರ ಹಿಂದೆ ಬೆಂಗಳೂರಿನಲ್ಲಿ ಎಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರವುದು ಸಹ ಸೇರಿದೆ.












Click it and Unblock the Notifications