ಬೆಂಗಳೂರು ಮಳೆ ಹಾನಿ ದೂರುಗಳಿಗೆ ತ್ವರಿತ ಸ್ಪಂದನೆಗೆ ಬಿಬಿಎಂಪಿ ಸೂಚನೆ
ಬೆಂಗಳೂರು, ಮೇ 22: ಬೆಂಗಳೂರು ನಗರದಲ್ಲಿ ಸುರಿದ ಮಳೆ ಭಾರಿ ಆವಾಂತರ ಸೃಷ್ಟಿಸಿದೆ. ಎರಡು ಸಾವುಗಳ ಸಹ ಸಂಭವಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಕೆಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಮೂರು ನಾಲ್ಕು ದಿನ ಬೆಂಗಳೂರು ನಗರ ಮಳೆ ಬರಲಿದೆ. ಇನ್ನೊಂದು ವಾರದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪಾಲಿಕೆ ಕೇಂದ್ರ ಕಚೇರಿಯ ಅನೆಕ್ಸ್-3 ಕಟ್ಟಡದ 6ನೇ ಮಹಡಿಯಲ್ಲಿರುವ ಕೊಮ್ಯಾಂಡ್ ಕಂಟ್ರೋಲ್ ಸೆಂಟರ್ (BBMP Control Room) ಸೋಮವಾರ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ನಿರ್ವಹಣೆ ಕುರಿತು ಸಿಬ್ಬಂದಿ ಬಳಿ ಮಾಹಿತಿ ಪಡೆದರು.

ಅಷ್ಟೇ ಅಲ್ಲದೇ ಮಳೆ ಹಾನಿ ಕುರಿತು ಯಾವುದೇ ದೂರುಗಳ ಮಾಹಿತಿ ಬಂದರೂ ಕೂಡಲೇ ಪರಿಶೀಲಿಸಿ ತ್ವರಿತಗತಿಯಲ್ಲಿ ಪರಿಹರಿಸಲು ಅವರು ಅಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ತಾವೇ ಖುದ್ದು ಸಹಾಯ ತಂತ್ರಾಂಶದ ಮುಖಾಂತರ ಬಂದಿರುವ ವಲಯವಾರು ಮಳೆಹಾನಿ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಿದರು. ಈ ಪೈಕಿ ಸಹಾಯ ತಂತ್ರಾಂಶದಲ್ಲಿ ಸುಮಾರು 70 ದೂರುಗಳು ಬಂದಿದ್ದು, ಮೂರು ದಿನಗಳೊಳಗಾಗಿ ದೂರುಗಳಿಗೆ ಪರಿಹಾರ ಕಲ್ಪಿಸುವಂತೆ ಹೇಳಿದರು.
ಬಿಬಿಎಂಪಿ ಸೂಚನೆ ಉಲ್ಲಂಘಿಸಿದ್ದೇ ಆದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಶಿಸ್ತು ಕ್ರಮ ವಹಿಸುವುದಾಗಿ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದರು.
ಮಳೆಗಾಲ ಹತ್ತಿರವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು, ವಿಪತ್ತು ನಿರ್ವಹಣೆಗಾಗಿ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ಪೊಲೀಸ್ ಇಲಾಖೆಯಿಂದ ನೋಡಲ್ ಅಧಿಕಾರಿಯನ್ನು ತಕ್ಷಣವೇ ನೇಮಿಸಲು ಸೂಚಿಸಿದರು. ಮಳೆ ಹಾನಿ ಸಂಬಂಧ ದೂರಿನ ಮಾಹಿತಿ ಹಾಗೂ ತೆಗೆದುಕೊಂಡಿರುವ ಮಾಹಿತಿಯನ್ನು ಅಧಿಕಾರಗಳು ನಮ್ಮ ಗಮನಕ್ಕೆ ತರಬೇಕು ಎಂದರು.

ಅಂಡರ್‌ಪಾಸ್‌ಗಳ ಸರ್ವೇ ಆರಂಭ
ಭಾನುವಾರ ಸುರಿದ ಮಳೆಗೆ ಕೆ.ಆರ್.ವೃತ್ತದಲ್ಲಿ ಕಾರು ಮುಳುಗಿ ಯುವತಿ ಮೃತಪಟ್ಟರೆ, ಬ್ಯಾಟರಾಯಪುರದಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಈ ಸಾವಿನ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ನಗರದಲ್ಲಿನ 18 ಅಂಡರ್‌ಪಾಸ್‌ಗಳ ಸರ್ವೇ ಕಾರ್ಯ ಆರಂಭಿಸಿದೆ. ಯಾವುದು ಸಂಚಾರಕ್ಕೆ ಸೂಕ್ತ, ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂದು ಚರ್ಚಿಸಿತ್ತುದೆ.
ನಿಯಂತ್ರಣಾ ಕೊಠಿಡಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಭೇಟಿ ನೀಡಿದ ವೇಳೆ ಮಾನ್ಯ ವಿಶೇಷ ಆಯುಕ್ತರು (ಮಾಹಿತಿ ತಂತ್ರಜ್ಞಾನ) ಉಜ್ವಲ್ ಕುಮಾರ್ ಗೋಷ್ ಹಾಗೂ ಬಿಬಿಎಂಪಿ ಉಪ ಆಯುಕ್ತರು ( ಅಡಳಿತ) ಮಂಜುನಾಥ ಸ್ವಾಮಿ.ಬಿ.ಎಸ್ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications