ಬಿಬಿಎಂಪಿ ಕಾರ್ಪೋರೇಟರ್ ಕೈಗೆ ಐಪ್ಯಾಡ್!

ಬಿಬಿಎಂಪಿಯ ಎಲ್ಲಾ 198 ವಾರ್ಡ್ ಸದಸ್ಯರು ಹಾಗೂ ನಾಮಕರಣ ಸದಸ್ಯರು ಸೇರಿದಂತೆ ಒಟ್ಟು 218 ಮಂದಿಗೆ ಆಪಲ್ ಐಪ್ಯಾಡ್ 4 ನೀಡಲು ನಿರ್ಧರಿಸಿರುವ ಪಾಲಿಕೆ, ಐಪ್ಯಾಡ್ ಪೂರೈಕೆ ಮಾಡಲು ಸೆ.20ರಂದು ಟೆಂಡರ್ ಕರೆದಿದೆ.
ಸದ್ಯ ಗುತ್ತಿಗೆದಾರರಿಗೆ ಹಣ ನೀಡಲು, ಕಸದ ಸಮಸ್ಯೆ ನಿವಾರಿಸಲು, ನೌಕರರಿಗೆ ಸಂಬಳ ನೀಡಲು ಹಣದ ಕೊರತೆ ಇದೆ ಎಂದು ಹೇಳುವ ಬಿಬಿಎಂಪಿ ಕಾರ್ಪೋರೇಟರ್ ಗಳ ಕೈಗೆ ಐಪ್ಯಾಡ್ ನೀಡಲು ಹೊರಟಿರುವ ಕ್ರಮ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹಿಂದೆಯೂ ಇತ್ತು : ಬಿಬಿಎಂಪಿಗೆ ಎಸ್.ಕೆ.ನಟರಾಜ್ ಅವರು ಮೇಯರ್ ಆಗಿದ್ದ ಅವಧಿಯಲ್ಲೇ ಪಾಲಿಕೆ ಸದಸ್ಯರಿಗೆ ಲ್ಯಾಪ್‌ಟಾಪ್ ನೀಡುವ ಪ್ರಸ್ತಾವವಿತ್ತು. ಬಳಿಕ ಐಪ್ಯಾಡ್ ನೀಡಲು ನಿರ್ಧರಿಸಲಾಯಿತು. ಆಗ ಇದಕ್ಕೆ ಸಂಬಂಧಿಸಿದಂತೆ ಟೆಂಡರ್ ಸಹ ಕರೆಯಲಾಗಿತ್ತು. ಆದರೆ, ಯೋಜನೆ ಕೈಬಿಡಲಾಗಿತ್ತು.
ಸದ್ಯ ಪಾಲಿಕೆ ಸದಸ್ಯರು ಐಪ್ಯಾಡ್ ನೀಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮತ್ತೆ ಈ ಕಾರ್ಯಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ಟೆಂಡರ್ ಜತೆಗೆ ಬೇಸಿಕ್ಸ್ ಹಾಗೂ ಆಫೀಸ್ ಅಪ್ಲಿಕೇಷನ್ ಪೂರೈಕೆ ಮಾಡುವಂತೆಯೂ ಟೆಂಡರ್ ನಲ್ಲಿ ಸೂಚಿಸಲಾಗಿದೆ.
1.20 ಕೋಟಿ ರೂ. ವೆಚ್ಚ : ಬಿಬಿಎಂಪಿ ಚುನಾಯಿತ ಸದಸ್ಯರು ಹಾಗೂ ನಾಮಕರಣ ಸದಸ್ಯರಿಗೆ ಐಪ್ಯಾಡ್ ವಿತರಣೆಗೆ ಸುಮಾರು 1.20 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ. ಒಂದು ಐಪ್ಯಾಡ್ ಗೆ 50,000 ರೂ. ತಗಲುವ ಸಾಧ್ಯತೆ ಇದ್ದು, ಐಪ್ಯಾಡ್ ಗೆ ಅನುದಾನ ಯಾವ ಯೋಜನೆಯಲ್ಲಿ ನೀಡಲಾಗುತ್ತದೆ ಎಂದು ತಿಳಿದು ಬಂದಿಲ್ಲ.
ಸದ್ಯ ಕರ್ನಾಟಕ ಸರ್ಕಾರ ಎಲ್ಲಾ ಶಾಸಕರ ಕೈಗೆ ಐಪ್ಯಾಡ್ ನೀಡಲು ಯೋಜನೆ ಸಿದ್ದಗೊಳಿಸಿದೆ. ಇದರಿಂದ ಪ್ರೇರಿತವಾದ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿರಬಹುದು. ಇದನ್ನು ಕಾರ್ಪೋರೇಟರ್ ಗಳು ಎಷ್ಟು ಪರಿಣಾಮಕಾರಿಯಾಗಿ ಉಪಯೋಗಿಸುತ್ತಾರೆ ಕಾದು ನೋಡಬೇಕು. (ಶಾಸಕರ ಕೈಗೆ ಐಪ್ಯಾಡ್ ಕೊಡುತ್ತೆ ಸಿದ್ದು ಸರ್ಕಾರ!)












Click it and Unblock the Notifications