BBMP: ಬಿಬಿಎಂಪಿ ಕಸದ ಲಾರಿ ಚಾಲಕನ ಅಜಾಗರೂಕ ಚಾಲನೆಗೆ ಮತ್ತೊಂದು ಬಲಿ
ಬೆಂಗಳೂರು, ಏಪ್ರಿಲ್ 1: ಕೆಲ ದಿನಗಳ ಹಿಂದೆ ಬೆಂಗಳೂರಿನ ಹೆಬ್ಬಾಳದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಸದ ಲಾರಿ ಹರಿದು ವಿದ್ಯಾರ್ಥಿನಿ ಅಕ್ಷಯಾ ಸಾವನ್ನಪ್ಪಿದ ಹತ್ತೇ ದಿನದ ಅಂತರದಲ್ಲಿ ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಜೀವ ಬಲಿಯಾಗಿದೆ. ಬೆಂಗಳೂರಿನ ಯಲಹಂಕ ಸಮೀಪದ ರಾಮಯ್ಯ(76) ಎಂಬ ಹಿರಿಯ ಜೀವ ಬಿಬಿಎಂಪಿ ಕಸದ ಲಾರಿ ಚಾಲಕನ ಬೇಜವಾಬ್ದಾರಿ ಚಾಲನೆಗೆ ಸಾವನ್ನಪ್ಪಿದ್ದಾರೆ.
ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ TVS ಜುಪಿಟರ್ ಕೆಎ-04-ಜೆ.ವಿ-5998 ವಾಹನದಲ್ಲಿ ಸಾತನೂರಿಗೆ ಹೋಗಿ ಸಂಬಂಧಿಕರೊಬ್ಬರಿಗೆ ಗಂಡು ನೋಡಿ ವಾಪಸ್ಸಾಗುತ್ತಿದ್ದರು. ಈ ವೇಳೆ ರೇವಾ ಇಂಜಿನಿಯರ್ ಕಾಲೇಜು ಸಮೀಪದ ಎರಡನೇ ಗೇಟ್ ಹಿಂದಿನಿಂದ ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಕೆಎ-41-ಬಿ-6186 ನಂಬರ್‌ನ ಕಸದ ಲಾರಿ ಚಾಲಕ ಬೈಕ್‌ನ್ನು ಗುದ್ದಿದ್ದಾನೆ. ಈ ವೇಳೆ ವೃದ್ಧ ರಾಮಯ್ಯನ ಮೇಲೆ ಲಾರಿ ಹರಿದು ತೀವ್ರ ರಕ್ತಸ್ರಾವವಾಗಿದೆ.
ಅಪಘಾತಕ್ಕೆ ಕಾರಣವಾದ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ನಂತರ ಸಾರ್ವಜನಿಕರು ಆಂಬ್ಯುಲೆನ್ಸ್‌ನಲ್ಲಿ ಚಿಕಿತ್ಸೆಗಾಗಿ ಯಲಹಂಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ಅಲ್ಲಿನ ಕರ್ತವ್ಯ ನಿರತ ವೈದ್ಯರು, ರಾಮಯ್ಯನು ಮಾರ್ಗ ಮಧ್ಯದಲ್ಲಿಯೇ ಮೃತರಾಗಿರುವುದಾಗಿ ತಿಳಿಸಿದ್ದಾರೆ.

ಈ ದುರಂತ ಘಟನೆ ಸಂಬಂಧ ರಾಮಯ್ಯ ಮಗ ರಾಜಶೇಖರ್ ಲಾರಿ ಚಾಲಕನ ವಿರುದ್ಧ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ 279, 304(ಎ) ಐಪಿಸಿ ಮತ್ತು 134 (ಎ & ಬಿ) ಸಹಿತ 187 ಎಂ.ವಿ. ಆ್ಯಕ್ಟ್ ರೀತ್ಯಾ ಪ್ರಕರಣ ದಾಖಲಾಗಿದೆ. ದೂರು ಹಿನ್ನಲೆ ಪರಾರಿಯಾಗಿರುವ ಚಾಲಕನ ಬಂಧನಕ್ಕೆ ಚಿಕ್ಕಜಾಲ ಪೊಲೀಸರು ಬಲೆ ಬೀಸಿದ್ದಾರೆ.
ಹತ್ತು ದಿನಗಳ ಹಿಂದೆಯೆಷ್ಟೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಲಾ ಬಾಲಕಿಯನ್ನು BBMP ಕಸದ ಬಲಿ ಪಡೆದಿತ್ತು. ವಾರ ಕಳೆಯುವ ಮುನ್ನವೇ ಮತ್ತೊಂದು ಹಿರಿಜೀವ ಮತ್ತದೇ ಬೇಜವಾಬ್ದಾರಿ ಕಸದ ಲಾರಿಗೆ ಬಲಿಯಾಗಿರುವುದು ದುರಂತ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿ ತಪ್ಪಿತಸ್ಥ ಕಸದ ಲಾರಿ ಚಾಲಕನ ಮೇಲೆ, ಕಸದ ಲಾರಿ ಮಾಲೀಕರ ಮೇಲೆ ಕ್ರಮ ಜರುಗಿಸಿದರೆ ಮಾತ್ರ, ಶಾಲಾ ಬಾಲಕಿ ಮತ್ತು ರಾಮಯ್ಯ ರೀತಿಯ ಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯ.












Click it and Unblock the Notifications