ನೂತನ ಆಯುಕ್ತ ಮೇಘರಿಕ್ ಕಾರ್ಯ ವೈಖರಿ ಹೇಗಿರುತ್ತೆ?
ಬೆಂಗಳೂರು, ಆಗಸ್ಟ್ 1 : ಉದ್ಯಾನ ನಗರಿ ಬೆಂಗಳೂರಿಗೆ ನೂತನ ಪೊಲೀಸ್ ಆಯುಕ್ತರ ನೇಮಕವಾಗಿದೆ. ಬಿಬಿಎಂಪಿ ಚುನಾವಣೆ ಮುಂದಿಟ್ಟುಕೊಂಡು ಸರ್ಕಾರ ಎನ್.ಎಸ್.ಮೇಘರಿಕ್ ಅವರನ್ನು ಆಯುಕ್ತರನ್ನಾಗಿ ನೇಮಕ ಮಾಡಿದೆ. ಉತ್ತಮವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
1987ನೇ ಬ್ಯಾಚ್ ಐಪಿಎಸ್ ಅಧಿಕಾರಿ ಮೇಘರಿಕ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೊತ್ತು ಕಳೆಯುವುದಕ್ಕಿಂತ ತಳಮಟ್ಟಕ್ಕೆ ಇಳಿದು ಕೆಲಸ ಮಾಡುತ್ತಾರೆ. ಅಧಿಕಾರ ವಹಿಸಿಕೊಂಡ ಬಳಿಕ ಮೇಘರಿಕ್ ಅವರು ಹೇಳಿದ್ದು ಇದೆ ಮಾತು, ಪೊಲೀಸರು ಸಾಮಾಜಿಕ ಜಾಲ ತಾಣದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು. [ನನಗೆ ಬೆಂಗಳೂರು ಹೊಸದಲ್ಲ : ಮೇಘರಿಕ್]

ತಳಮಟ್ಟದ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚು ಗಮನ ನೀಡಬೇಕು ಎಂಬುದು ಮೇಘರಿಕ್ ಅವರ ಅಭಿಪ್ರಾಯ. ಸಾಮಾಜಿಕ ಜಾಲತಾಣಗಳು ಬೇಕು ಅದರ ಜೊತೆ ತಳ ಮಟ್ಟದ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬುದು ಅವರ ಕಾರ್ಯವೈಖರಿ.
ನಗರ ಪೊಲೀಸ್ ಆಯುಕ್ತರಾಗಿದ್ದ ಎಂ.ಎನ್.ರೆಡ್ಡಿ ಅವರಿಗೆ ಸರ್ಕಾರ ಶುಕ್ರವಾರ ಬಡ್ತಿ ನೀಡಿದೆ. ಅಗ್ನಿಶಾಮಕ ದಳ ವಿಭಾಗದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿಪಿ)ಯಾಗಿ ಅವರು ಬಡ್ತಿ ಪಡೆದಿದ್ದು, ಅವರ ಜಾಗಕ್ಕೆ ಮೇಘರಿಕ್ ಅವರನ್ನು ನೇಮಕ ಮಾಡಲಾಗಿದೆ.
ಉತ್ತಮ ಕೆಲಸ ಮಾಡಿದ್ದಾರೆ : ಚುನಾವಣೆಗಳ ಸಂದರ್ಭದಲ್ಲಿ ಮೇಘರಿಕ್ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಅವರು ಕೆಲಸ ಮಾಡಿದ ರೀತಿಗೆ ಚುನಾವಣಾ ಆಯೋಗವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಎಲ್ಲರೂ ನನ್ನೊಂದಿಗೆ ಇದ್ದಾರೆ : 'ನನ್ನ ಕೈಕೆಳಗೆ ಯಾವ ಅಧಿಕಾರಿಗಳೂ ಇಲ್ಲ, ಎಲ್ಲರೂ ನನ್ನ ಜೊತೆಯೇ ಇದ್ದಾರೆ ಎಂದು ಮೇಘರಿಕ್ ಕೆಲಸ ಮಾಡುತ್ತಾರೆ. ಕಡಿಮೆ ಪ್ರಚಾರ ಹೆಚ್ಚು ಕೆಲಸ ಇದು ಮೇಘರಿಕ್ ಕಾರ್ಯವೈಖರಿ.
ಎಂ.ಎನ್.ರೆಡ್ಡಿ ಅವರು ಸಾಮಾಜಿಕ ತಾಣಗಳಲ್ಲಿ ಹಿರೋ ಆಗಿದ್ದರು. ಇಂಟರ್‌ನೆಟ್ ಮೂಲಕ ಬಂದ ದೂರುಗಳಿಗೆ ಮಾತ್ರ ಸ್ಪಂದಿಸುತ್ತಿದ್ದರು ಎಂಬ ಮಾತುಗಳು ಇವೆ. ನೂತನ ಆಯುಕ್ತರೇ ಹೇಳುವಂತೆ ಅವರ ಮುಂದಿರುವ ಮೊದಲು ಸವಾಲು ಬಿಬಿಎಂಪಿ ಚುನಾವಣೆಯನ್ನು ಎದುರಿಸುವುದು.












Click it and Unblock the Notifications