ಬಿಬಿಎಂಪಿ ಚುನಾವಣೆ: ಪ್ರಕರಣ ಮತ್ತೆ ಹೈಕೋರ್ಟ್‌ಗೆ ವಾಪಸ್
ಬೆಂಗಳೂರು, ಆ.26: ತೀವ್ರ ಕುತೂಹಲ ಕೆರಳಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ಪ್ರಕರಣ ಮತ್ತೆ ಸುಪ್ರೀಂಕೋರ್ಟ್‌ನಿಂದ ಹೈಕೋರ್ಟ್‌ಗೆ ಬಂದಿದೆ.
ಶುಕ್ರವಾರ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ಅಂತಿಮ ಆದೇಶ ನೀಡುತ್ತದೆಂದು ಭಾವಿಸಲಾಗಿತ್ತು. ಅದರೆ ಸುಪ್ರೀಂಕೋರ್ಟ್, ಚುನಾವಣೆಯ ಕುರಿತು ನಿರ್ಧರಿಸುವ ಜವಾಬ್ದಾರಿ ಹೈಕೋರ್ಟ್‌ಗೆ ನೀಡಿದೆ.
ಚುನಾವಣೆ ಕುರಿತಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ಶುಕ್ರವಾರ(ಆಗಸ್ಟ್ 26) ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಮತ್ತು .ಜೆ.ಕೆ.ಮಹೇಶ್ವರಿ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು. ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ, ಮಧ್ಯಂತರ ಆದೇಶ ಅಥವಾ ನಿರ್ದೇಶನಗಳನ್ನು ನೀಡಲು ಹೈಕೋರ್ಟ್‌ಗೆ ಸ್ವಾತಂತ್ರ್ಯ ನೀಡಬೇಕೆಂದು ಕೋರಿದರು.
ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ, ಸೀಮಿತ ವಿಷಯಕ್ಕೆ ಹೈಕೋರ್ಟ್ ಮುಂದಿರುವ ಅರ್ಜಿಗಳ ವಿಚಾರಣೆಗೆ ಸ್ಪಷ್ಟನೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು, ಅವುಗಳನ್ನು ಪರಿಗಣಿಸಬೇಕು. ಹೈಕೋರ್ಟ್ ವಿಚಾರಣೆ ಮುಂದುವರಿಸಿ ಆದೇಶ ನೀಡಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಹಾಲಿ ಇರುವ ವಾರ್ಡ್ ಪುನರ್ ವಿಂಗಡಣೆಯಿಂದ ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗುತ್ತದೆ, ಇದು ಕಾನೂನು ಬಾಹಿರ, ಸಂವಿಧಾನದ ಉಲ್ಲಂಘನೆ ಎಂದರು.

ಪ್ರತಿವಾದಿಗಳ ಪರ ವಕೀಲರು, ರಾಜ್ಯ ಚುನಾವಣಾ ಆಯೋಗಕ್ಕೆ ಕನಿಷ್ಠ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ಸೂಚನೆ ನೀಡಬೇಕು ಮತ್ತು ವಾರ್ಡ್ ಪುನರ್ ವಿಂಗಡಣೆ ಅರ್ಜಿಗಳ ಬಾಕಿ ಹಿನ್ನೆಲೆಯಲ್ಲಿಚುನಾವಣೆಯನ್ನು ಮುಂದೂಡುವುದು ಸರಿಯಲ್ಲಎಂದರು.
ಕೊನೆಗೆ ನ್ಯಾಯಪೀಠ ''ಕಾನೂನು ಪ್ರಕಾರ ಹೈಕೋರ್ಟ್ ತನ್ನ ಮುಂದಿರುವ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಿ ಜೇಷ್ಠತೆ ಆಧರಿಸಿ ತೀರ್ಪು ನೀಡಬಹುದು'' ಎಂದು ಹೇಳಿತು.
ಹಾಗಾಗಿ ಹೈಕೋರ್ಟ್‌ನಲ್ಲಿ ಆ.29ರಂದು ವಾರ್ಡ್ ಪುನರ್ ವಿಂಗಡಣೆ ಪ್ರಶ್ನಿಸಿರುವ ಅರ್ಜಿಗಳು ಮತ್ತು ಸೆ.1ರಂದು ವಾರ್ಡ್‌ವಾರು ಮೀಸಲು ಪ್ರಶ್ನಿಸಿರುವ ಅರ್ಜಿಗಳು ವಿಚಾರಣೆಗೆ ಬರಲಿದ್ದು, ಅದು ಅರ್ಜಿದಾರರ, ಸರಕಾರ ಮತ್ತು ಚುನಾವಣಾ ಆಯೋಗ- ಮೂವರ ವಾದ-ಪ್ರತಿವಾದ ಆಲಿಸಿ ಜೇಷ್ಠತೆಯ ಮೇಲೆ ತೀರ್ಪು ನೀಡಬೇಕಿದೆ.
ವಾರ್ಡ್ ವಾರು ಮೀಸಲಾತಿಗೂ ತಕರಾರು: ಈ ಮಧ್ಯೆ, ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಶ್ನಿಸಿ ಸಲ್ಲಿಸಿ ಈಜಿಪುರದ ಕೆ. ಮಹದೇವ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಸರ್ಕಾರ, ಬಿಬಿಎಂಪಿ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿದಾರರ ಪರ ವಕೀಲರು, ನಿಯಮಬಾಹಿರವಾಗಿ ಮೀಸಲಾತಿ ನಿಗದಿಪಡಿಸಿದ್ದಾರೆಂದು ಆರೋಪಿಸಿ, ಮೀಸಲಾತಿ ಪಟ್ಟಿ ರದ್ದು ಮಾಡಬೇಕೆಂದು ಕೋರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ನೋಟಿಸ್ ಜಾರಿ ನಂತರ ಮುಂದಿನ ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಿತು.

ಸುಪ್ರೀಂನಿಂದಲೇ ಸ್ಪಷ್ಟನೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳ ಪುನರ್‌ವಿಂಗಡಣೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಬಹುದೇ ಹಾಗೂ ಈ ಸಂಬಂಧ ಏನಾದರೂ ಮಧ್ಯಂತರ ಆದೇಶಗಳನ್ನು ಹೊರಡಿಸಬಹುದೇ ಎಂಬ ಹೈಕೋರ್ಟ್ ಸುಪ್ರೀಂಕೋರ್ಟ್‌ನಿಂದ ಸ್ಪಷ್ಟನೆ ಬಯಸಿದೆ.
ಈ ವಿಚಾರವಾಗಿ ಸುಪ್ರೀಂಕೋರ್ಟ್‌ನಿಂದ ಸ್ಪಷ್ಟನೆ ತರುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ. ಆಗಸ್ಟ್ 26ಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಈ ಅರ್ಜಿ ವಿಚಾರಣೆಗೆ ನಿಗದಿಯಾಗಿರುವುದರಿಂದ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಆ.29ಕ್ಕೆ ಮುಂದೂಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020ರಂತೆ ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ವಕೀಲ ಎಸ್. ಇಸ್ಮಾಯಿಲ್ ಜಬಿವುಲ್ಲಾ, ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಾಜಿ ಕಾಪೋರೇಟರ್‌ಗಳಾದ ಬಿ.ಎನ್. ಮಂಜುನಾಥ್ ರೆಡ್ಡಿ, ಎನ್. ನಾಗರಾಜ್ ಹಾಗೂ ಇತರರು ಸೇರಿ ಸಲ್ಲಿಸಿರುವ ಒಟ್ಟು ಆರು ತಕರಾರು ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ವಾರ ವಿಚಾರಣೆ ನಡೆಸಿತ್ತು.
ಸ್ಪಷ್ಟನೆ ಅಗತ್ಯವಿದೆ: ಚುನಾವಣಾ ಆಯೋಗ ಹಾಗೂ ಅರ್ಜಿದಾರರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಗಳ ವಿಚಾರಣೆ ಮುಂದುವರಿಸಿ ಯಾವುದೇ ಆದೇಶ ಹೊರಡಿಸಬೇಕಿದ್ದರೆ ಸುಪ್ರೀಂಕೋರ್ಟ್‌ನ ಸ್ಪಷ್ಟನೆಯ ಅಗತ್ಯವಿದೆ. ಅದಲ್ಲದೆ ಅರ್ಜಿಗಳನ್ನು ಆಲಿಸಲು ಸುರೇಶ್ ಮಹಾಜನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೈ ಕಟ್ಟಿ ಹಾಕಿದಂತಾಗಿದೆ. ಆದ್ದರಿಂದ ಆ.26ರಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಬರಲಿಕ್ಕಿದ್ದು, ಅರ್ಜಿದಾರರು ಸ್ಪಷ್ಟನೆ ಪಡೆದುಕೊಂಡು ಬಂದರೆ ವಿಚಾರಣೆ ಮುಂದುವರಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಮುಂದೂಡಿತು.












Click it and Unblock the Notifications