ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಗೆ ಶೀಘ್ರದಲ್ಲಿಯೇ ಚುನಾವಣೆ ಘೋಷಣೆ?: ಬಿಜೆಪಿಯಲ್ಲಿ ಸಂಚಲನ

|
Google Oneindia Kannada News

ಬೆಂಗಳೂರು, ನ.5: ಕಳೆದ 14 ತಿಂಗಳಿಂದ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸೊರಗಿದ ಬಿಬಿಎಂಪಿಯಲ್ಲಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಈಗ ಮತ್ತೆ ಸಂಚಲನ ಪ್ರಾರಂಭವಾಗಿದೆ. ಶೀಘ್ರದಲ್ಲಿಯೇ ಚುನಾವಣೆ ಘೋಷಣೆಯಾಗಲಿದೆಯೇ ಎಂಬ ನಿರೀಕ್ಷೆ ನಗರವಾಸಿಗಳಲ್ಲಿ ಹೆಚ್ಚಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಕಳೆದಿದೆ. ಆದರೂ ಸಹ ಬೆಂಗಳೂರಿಗೆ ಉಸ್ತುವಾರಿ ಸಚಿವರ ನೇಮಕ ಆಗಿಲ್ಲ. ಒಂದು ಕಡೆ ಬೆಂಗಳೂರು ನಗರದ ಉಸ್ತುವಾರಿಗಾಗಿ ಸಚಿವರಾದ ಆರ್. ಅಶೋಕ್, ವಿ.ಸೋಮಣ್ಣ, ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ.

BBMP

ಮತ್ತೊಂದು ಕಡೆ ನಗರದ ಜನಸಾಮಾನ್ಯರ ಅಗತ್ಯ ಸೌಲಭ್ಯಗಳನ್ನು ನೋಡಿಕೊಳ್ಳಬೇಕಾದ ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಒಂದೂವರೆ ವರ್ಷ ಆಗುತ್ತಾ ಬಂದರೂ ಸರ್ಕಾರ ಚುನಾವಣೆಯ ಬಗ್ಗೆ ಗಮನ ಹರಿಸಿಲ್ಲ. ಇದರಿಂದ ಕೇವಲ ಅಧಿಕಾರಿಗಳೇ ಆಡಳಿತ ಮುನ್ನಡೆಸುತ್ತಿದ್ದಾರೆ.

ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ 1.30 ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿಯೇ ಇದೆ. ರಾಜ್ಯದಲ್ಲಿ ಸಂಗ್ರಹವಾಗುವ ಒಟ್ಟು ತೆರಿಗೆಯಲ್ಲಿ ಶೇ. 70ರಷ್ಟು ಭಾಗ ಬೆಂಗಳೂರಿನದ್ದೇ ಕೊಡುಗೆ ಇದೆ.

BL Santosh

ಕರ್ನಾಟಕದ ವಿವಿಧ ಭಾಗಗಳ ಜನರಷ್ಟೇ ಅಲ್ಲದೆ, ದೇಶ ವಿದೇಶಗಳ ವಿವಿಧ ಭಾಗಗಳ ಜನ ಬೆಂಗಳೂರಿನಲ್ಲಿ ನೆಲೆಸಿದ್ದು, ಕಾಸ್ಮೊಪಾಲಿಟನ್ ಸಿಟಿ ಎಂದು ಗುರುತಿಸಿಕೊಂಡಿದೆ. ಆದರೆ, ರಸ್ತೆ, ನೀರು, ಒಳಚರಂಡಿ, ಪಾರ್ಕಿಂಗ್, ಶೌಚಾಲಯಗಳು, ಸ್ಲಂಗಳ ನಿವಾರಣೆ ಸೇರಿ ಅಗತ್ಯ ಮೂಲಸೌಕರ್ಯದಂತಹ ವಿಷಯಗಳು ಮಾತ್ರ ತನಗೆ ಸಂಬಂಧವೇ ಇಲ್ಲದಂತೆ ಸರ್ಕಾರ ವರ್ತಿಸುತ್ತಿದೆ. ಇದಕ್ಕೆ ಕಾರಣ ಜನಪ್ರತಿನಿಧಿಗಳ ಆಡಳಿತವೇ ಬೆಂಗಳೂರಿಗೆ ಮರೀಚಿಕೆ ಆಗಿರುವುದು.

ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿಯ ಮಹಾನಗರ ಪಾಲಿಕೆಗಳಿಗೆ ಕಳೆದ ಸೆಪ್ಟರಂಬರ್‌ನಲ್ಲಿಯೇ ಮತದಾನ ನಡೆದು ಜನಪ್ರತಿನಿಧಿಗಳ ಆಡಳಿತ ಜಾರಿಯಾಗಿದೆ. ಆದರೆ, ಬೆಂಗಳೂರಿಗೆ ಆ ಭಾಗ್ಯ ಇನ್ನೂ ದೊರೆಯುತ್ತಿಲ್ಲ.

ಹಿಂದಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. 2020ರ ಸೆ.10ಕ್ಕೆ ಅಧಿಕಾರಾವಧಿ ಮುಕ್ತಾಯವಾಗಿದೆ. ಬಳಿಕ 14 ತಿಂಗಳು ಕಳೆದರೂ ಚುನಾವಣೆ ಘೋಷಣೆಯಾಗಿಲ್ಲ. ಬಿಬಿಎಂಪಿ ಆಯುಕ್ತರೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಜನಪ್ರತಿನಿಧಿಗಳು ಇಲ್ಲದೆ ಜನರು ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ತೋಚದೆ ತಲೆಚಚ್ಚಿಕೊಳ್ಳುವಂತಾಗಿದೆ.

ಬಿಜೆಪಿ ಸರ್ಕಾರ ಮಾಡಿದ ಎಡವಟ್ಟು:

ಬಿಬಿಎಂಪಿ ಚುನಾವಣೆ ಘೋಷಣೆ ಆಗದಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ಮಾಡಿದ ಎಡವಟ್ಟೇ ಕಾರಣವಾಗಿದೆ.

ಬಿಬಿಎಂಪಿಯಲ್ಲಿ ಹಿಂದಿನ ಆಡಳಿತದ ಅವಧಿ ಮುಕ್ತಾಯ ಆಗುತ್ತಿದ್ದಂತೆ ಚುನಾವಣೆ ಘೋಷಣೆ ಮಾಡಬೇಕಿತ್ತು. ಬಿಬಿಎಂಪಿ 2020 ಹೊಸ ಕಾಯ್ದೆ ರೂಪಿಸಬೇಕು ಎಂಬ ಕಾರಣ ನೀಡಿ ಸರ್ಕಾರ ಚುನಾವಣೆಯನ್ನು ಮುಂದೂಡಿತು. ಕಾಯ್ದೆ ರಚನೆ ಬಳಿಕ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚಿಸಿದಾಗ ಪ್ರಸ್ತುತ ಇದ್ದ 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸಿ ಪುನರ್‌ವಿಂಗಡಣೆ ಮಾಡಬೇಕು ಎಂಬ ಸಬೂಬು ಹೇಳಿ ಮತ್ತೊಮ್ಮೆ ಚುನಾವಣೆ ಮುಂದೂಡಿತು.

Amit Shah

ಆ ವೇಳೆಗಾಗಲೇ ಪ್ರಕರಣ ಸುಪ್ರೀಂ ಕೋರ್ಟ್‌ ತಲುಪಿಯಾಗಿತ್ತು. ಬಳಿಕ ವಾರ್ಡ್ ಪುನರ್ ವಿಂಗಡಣೆ ನೆಪವೊಡ್ಡಿ ಬಿಬಿಎಂಪಿ ಆಯುಕ್ತರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆರು ತಿಂಗಳ ಅವಧಿಯ ಸಮಿತಿಯೊಂದನ್ನು ರಚಿಸಿತ್ತು.

ಈ ಆರು ತಿಂಗಳ ಆವಧಿಯಲ್ಲಿ ಸಮಿತಿಯು ಕೇವಲ ಒಂದೇ ಒಂದು ಸಭೆ ನಡೆಸಿದ್ದು, ವಾರ್ಡ್‌ಗಳ ಪುನರ್ ವಿಂಗಡಣೆ ಕಾರ್ಯವೂ ಅಷ್ಟಕ್ಕೇ ನಿಂತಿದೆ. ಬಿಬಿಎಂಪಿ ಚುನಾವಣಾ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಸದ್ದು ಮಾಡಿದ್ದು, ನ.6ರ ಬಳಿಕ ಚುನಾವಣಾ ವಿಚಾರ ಅಂತಿಮಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್‌ ಸೂಚನೆಯ ಮೇರೆಗೆ ರಾಜ್ಯ ಸರ್ಕಾರ ವಾರ್ಡ್‌ಗಳ ಪುನರ್‌ವಿಂಗಡಣೆ ಕಾರ್ಯವನ್ನು ಕೈಬಿಟ್ಟು ಹಳೆಯ 198 ವಾರ್ಡ್‌ಗಳಿಗೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತದೋ ಅಥವಾ ವಾರ್ಡ್‌ಗಳ ಪುನರ್‌ ವಿಂಗಡಣೆಗೆ ಸಂಬಂಧಿಸಿದಂತೆ ಈಗಾಗಲೇ ರಚಿಸಿರುವ ಸಮಿತಿಯ ಅವಧಿಯನ್ನು ಮುಂದಿನ ಆರು ತಿಂಗಳಿಗೆ ವಿಸ್ತರಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಕಾಲಾವಕಾಶ ಪಡೆಯುತ್ತದೋ ಕಾದು ನೋಡಬೇಕು.

ಬಿಜೆಪಿಯಲ್ಲಿ ಸಂಚಲನ ತಂದ ಬಿಬಿಎಂಪಿ ಚುನಾವಣೆ:

ಈ ಮಧ್ಯೆ ಬಿಬಿಎಂಪಿ ಚುನಾವಣೆ ಬಿಜೆಪಿಯಲ್ಲಿ ಸಂಚಲನ ತಂದಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಗಮನವಹಿಸಿರುವುದು ನೋಡಿದರೆ ಶೀಘ್ರವೇ ಸರ್ಕಾರ ಚುನಾವಣೆ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ನಗರವಾಸಿಗಳಲ್ಲಿ ಹುಟ್ಟುಹಾಕಿದೆ. ಅಲ್ಲದೆ, ಈ ಹಿಂದಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಬಿಜೆಪಿಯೇ ಆಡಳಿತ ನಡೆಸಿದ್ದರಿಂದ ಅಧಿಕಾರವನ್ನು ಮತ್ತೊಮ್ಮೆ ಪಡೆಯುವ ಅನಿವಾರ್ಯತೆ ಅದಕ್ಕೆ ಎದುರಾಗಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ನ.9ರಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಭೆ ಕರೆದಿದ್ದಾರೆ. ಬೆಂಗಳೂರಿನ ಸಂಸದರು, ಸಚಿವರು, ಶಾಸಕರು ಮತ್ತು ನಗರ ಘಟಕದ ಎಲ್ಲ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ.

ಪ್ರಸ್ತುತ ಸರ್ಕಾರದಲ್ಲಿ ಬೆಂಗಳೂರು ನಗರದಿಂದ ಆರ್. ಅಶೋಕ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿ.ಸೋಮಣ್ಣ, ಎಸ್‌.ಟಿ. ಸೋಮಶೇಖರ್, ಬೈರತಿ ಬಸವರಾಜು, ಕೆ.ಗೋಪಾಲಯ್ಯ, ಮುನಿರತ್ನ ಸಚಿವರಿದ್ದಾರೆ.

ಬೆಂಗಳೂರು ಉತ್ತರದಿಂದ ಡಿ.ವಿ. ಸದಾನಂದಗೌಡ, ದಕ್ಷಿಣದಿಂದ ತೇಜಸ್ವಿ ಸೂರ್ಯ ಸಂಸದರಿದ್ದಾರೆ. ಜೊತೆಗೆ ನಗರ ವ್ಯಾಪ್ತಿಯಲ್ಲಿ ಎಂಟು ಮಂದಿ ಬಿಜೆಪಿ ಶಾಸಕರಿದ್ದಾರೆ. ಎಲ್ಲರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಬಿಬಿಎಂಪಿ ಚುನಾವಣೆ ನಡೆಸುವುದರ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯುತ್ತದೆ.

ದೇಶದಾದ್ಯಂತ ನಡೆದ ಉಪಚನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದರೂ ಸಹ ಉಪಚುನಾವಣೆ ನಡೆದ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ.

Recommended Video

ಅಪ್ಪು ನೆನೆದು ಕಣ್ಣೀರಿಟ್ಟ ತಮಿಳು ನಟ ಸೂರ್ಯ ಭಾವುಕರಾಗಿ ಹೇಳಿದ್ದೇನು? | Oneindia Kannada

ಇನ್ನು ನಗರದ ಸಮಸ್ಯೆಗಳು, ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಕಿತ್ತಾಟದಿಂದಾಗಿ ನಗರದ ಜನರ ಅಭಿಪ್ರಾಯ ಪಕ್ಷದ ಪರವಾಗಿ ಹೇಗಿದೆ? ಈಗ ಚುನಾವಣೆ ನಡೆದರೆ ಪಕ್ಷಕ್ಕೆ ಲಾಭವಾಗಬಹುದೇ ಅಥವಾ ಹಿನ್ನಡೆ ಕಾಣಬಹುದೇ? ಎಂಬಂತಹ ಆಂತರಿಕ ವಿಷಯಗಳ ಕುರಿತು ಚರ್ಚೆ ನಡೆಸಿ, ಅದರ ಆಧಾರದ ಮೇಲೆ ಸರ್ಕಾರ ತನ್ನ ಮುಂದಿನ ತೀರ್ಮಾನ ಪ್ರಕಟಿಸಲಿದೆ ಎನ್ನಲಾಗುತ್ತಿದೆ.

English summary
The jamming has now begun again in the BBMP, which has been devastated for over a year and a half. The prospect of an election soon is aroused in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X