ಕಸ ನಿರ್ವಹಣೆ ಇನ್ನು ಜಂಟಿ ಆಯುಕ್ತರ ಹೆಗಲಿಗೆ: ಬಿಬಿಎಂಪಿ ನಿರ್ಧಾರ
ಬೆಂಗಳೂರು, ಅಕ್ಟೋಬರ್ 16: ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸ ನಿರ್ವಹಣೆಯನ್ನು ಜಂಟಿ ಆಯುಕ್ತರ ಹೆಗಲಿಗೇರಿಸಲು ಬಿಬಿಎಂಪಿ ನಿರ್ಧರಿಸಿದೆ.
ಪಾಲಿಕೆಯ ತ್ಯಾಜ್ಯವನ್ನು ಆಯಾ ವಲಯಗಳ ಜಂಟಿ ಆಯುಕ್ತರೇ ನೋಡಿಕೊಳ್ಳಬೇಕು, ಅಸಮರ್ಪಕ ಕಸ ವಿಲೇವಾರಿಯಿಂದ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಅಸಂಬದ್ಧವಾಗಿದ್ದು, ಇನ್ನು ಮುಂದೆ ಯಾವುದೇ ಸಮಸ್ಯೆ ಉಂಟಾಗದಂತೆ ಪಾಲಿಕೆ ಎಂಟು ವಲಯಗಳ ಜಂಟಿ ಆಯುಕ್ತರು ವಾರಕ್ಕೆರಡು ಬಾರಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆ.
ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಪ್ರಥಮ ಸ್ಥಾನ ಗಳಿಸಬೇಕು ಎಂದು ಪಾಲಿಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರೂ ಉತ್ತಮ ಶ್ರೇಯಾಂಕ ಪಡೆಯಲು ಸಾಧ್ಯವಾಗದೆ ಕುಸಿತ ಕಾಣುತ್ತಿರುವುದಕ್ಕೆ ಪ್ರಮುಖ ಕಾರಣ ಕಸ ವಿಲೇವಾರಿ. ಹೀಗಾಗಿ ನಗರವನ್ನು ಕಾಡುತ್ತಿರುವ ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂಬ ತೀರ್ಮಾನಕ್ಕೆ ಬಿಬಿಎಂಪಿ ಬಂದಿದೆ.

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ವಿಪರೀತವಾಗಿದೆ. ಹೀಗಾಗಿಯೇ ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ 210ನೇ ಸ್ಥಾನದಲ್ಲಿದ್ದ ಬೆಂಗಳೂರು 216ನೇ ಸ್ಥಾನಕ್ಕೆ ಬಂದಿದೆ. 2015ರಲ್ಲಿ 11ನೇ ಸ್ಥಾನ, 2016ರಲ್ಲಿ 38ನೇಸ್ಥಾನ, 2017ರಲ್ಲಿ 210ನೇ ಸ್ಥಾನದಲ್ಲಿದ್ದ ನಗರ 2018ನೇ ಸಾಲಿನಲ್ಲಿ 216ಕ್ಕೆ ಏರುವ ಮೂಲಕ ಕೆಟ್ಟ ಹೆಸರು ಪಡೆಯುವಂತಾಗಿದೆ.
ಪರಿಶೀಲನೆ ಸಂದರ್ಭದಲ್ಲಿ ಕಸ ವಿಲೇವಾರಿಯಲ್ಲಿ ಕಂಡುಬರುವ ನ್ಯೂನ್ಯತೆಗಳು ಹಾಗೂ ಪೌರ ಕಾರ್ಮಿಕರ ಸಮಸ್ಯೆಗಳನ್ನು ಗುರುತಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಘನತ್ಯಾಜ್ಯ ನಿರ್ವಹಣಾ ವಿಭಾಗದ ಜಂಟಿ ಆಯುಕ್ತರ ಗಮನಕ್ಕೆ ತರುವಂತೆ ಸೂಚನೆ ನೀಡಲಾಗುತ್ತಿದೆ.












Click it and Unblock the Notifications