ಬಿಬಿಎಂಪಿಯಿಂದ ಗುತ್ತಿಗೆದಾರ ಡಿಬಾರ್ : ನಕಲಿ ಕೆಲಸ ಅಲ್ಲ, ಮತ್ತಿನ್ನೇನು...
ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಕಾಪಿ ಮಾಡಿದ್ರೆ ಡಿಬಾರ್ ಮಾಡುವುದನ್ನು ನೀವು ಕೇಳಿರುತ್ತೀರಿ. ಇದೀಗ ಬಿಬಿಎಂಪಿಯೂ ಸಹ ಒಬ್ಬ ಗುತ್ತಿಗೆದಾರನನ್ನು ಮೂರು ವರ್ಷಗಳ ಅವಧಿಗೆ ಡಿಬಾರ್ ಮಾಡಿದೆ. ಅಲ್ಲದೇ ಈ ಗುತ್ತಿಗೆದಾರರು ಮುಂದಿನ ಮೂರು ವರ್ಷದ ಅವಧಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಟೆಂಡರ್‌ಗಳನ್ನು ನಿರ್ವಹಿಸುವಂತಿಲ್ಲ ಎಂದು ಆದೇಶ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿರುತ್ತವೆ. ಆದರೆ, ಇದೀಗ ಬಿಬಿಎಂಪಿ ಗುತ್ತಿಗೆದಾರನೊಬ್ಬ ನಕಲಿ ದಾಖಲೆ ನೀಡಿ, ಕಾರ್ಯಾದೇಶಗಳನ್ನೂ ಪಡೆದು ಕಾಮಗಾರಿ ಪ್ರಾರಂಭಿಸಿದ್ದಾನೆ. ಪೊಲೀಸರ ತನಿಖೆ ವೇಳೆ ಇದು ಬಹಿರಂಗವಾಗಿದೆ. ಭುವನೇಶ್ವರಿ ಎಂಟರ್ ಪ್ರೈಸಸ್ ಸಂಸ್ಥೆಯ ಮಾಲೀಕ ಎ.ವಿ.ಗಿರೀಶ್ ಎನ್ನುವ ಗುತ್ತಿಗೆದಾರ ಸರ್ಕಾರದ ಒಳಾಡಳಿತ ಇಲಾಖೆಗೆ ನಕಲಿ ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಸಾರ ಲೈಸೆನ್ಸ್ ಪಡೆದುಕೊಂಡಿದ್ದಾನೆ. ಪ್ರಸಾರ ಲೈಸೆನ್ಸ್ ಅನ್ನು ಉಪಯೋಗಿಸಿಕೊಂಡು ಪಾಲಿಕೆಯ ಹಲವು ಟೆಂಡರ್‌ಗಳನ್ನೂ ಮಾಡಿ. ಕಾರ್ಯಾದೇಶಗಳು ಮತ್ತು ಬಿಲ್ಲುಗಳನ್ನು (ಹಣವನ್ನೂ) ಪಡೆದುಕೊಂಡಿದ್ದಾನೆ. ಆದರೆ, ಇದೀಗ ಎಚ್ಚೆತ್ತುಕೊಂಡಿರುವ ಪಾಲಿಕೆಯು ಅವನ ಮೇಲೆ ಕ್ರಮಕ್ಕೆ ಮುಂದಾಗಿದೆ.

ಪೊಲೀಸ್ ತನಿಖೆಯಿಂದ ಬಹಿರಂಗ
ಪೊಲೀಸ್ ಇಲಾಖೆಯ ತನಿಖೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸಾರ ಲೈಸೆನ್ಸ್ ಪಡೆಯಲು ಸಲ್ಲಿಸಿರುವ ಪೊಲೀಸ್ ವೆರಿಫಿಕೇಶನ್ ಸರ್ಟಿಫಿಕೇಟ್ ನಕಲಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ಪಾಲಿಕೆಗೆ ವರದಿ ಬಂದಿದೆ. 15-06-2024ರಲ್ಲಿ ಸರ್ಕಾರದಿಂದ ಮಂಜೂರು ಮಾಡಿರುವ ಪ್ರಸಾರ ಲೈಸೆನ್ಸ್ ಅನ್ನು ರದ್ದುಗೊಳಿಸುವಂತೆ ಈಗ ಆದೇಶಿಸಲಾಗಿದೆ. ಈ ಸಂಬಂಧ ಬಿಬಿಎಂಪಿಯ ದಕ್ಷಿಣ ಮತ್ತು ಪಶ್ಚಿಮ ವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕ್ರಮ ತೆಗೆದುಕೊಂಡಿದ್ದಾರೆ. ಎ.ವಿ.ಗಿರಿಶ್, ಶ್ರೀ ಭುವನೇಶ್ವರಿ ಎಂಟರ್ ಪ್ರೈಸಸ್ ಸಂಸ್ಥೆಗೆ ಕಾಮಗಾರಿ ಮಾಡಲು ನೀಡಲಾಗಿದ್ದ ಕಾರ್ಯಾದೇಶ (ಜಾಬ್ ಆರ್ಡರ್)ಗಳನ್ನು ರದ್ದು ಮಾಡಿದ್ದಾರೆ.
ಹೀಗಾಗಿ, ಗುತ್ತಿಗೆದಾರನನ್ನು ಡಿಬಾರ್ ಮಾಡಲಾಗಿದೆ. 30-07-2024ರಿಂದ ಜಾರಿಗೆ ಬರುವಂತೆ 03 (ಮೂರು) ವರ್ಷಗಳ ಅವಧಿಗೆಎ.ವಿ.ಗಿರೀಶ್, ಶ್ರೀ ಭುವನೇಶ್ವರಿ ಎಂಟರ್ ಪ್ರೈಸಸ್ ಸಂಸ್ಥೆಯ ಗುತ್ತಿಗೆದಾರರನ್ನು ಡಿಬಾರ್ ಮಾಡಿ ಆದೇಶ ಹೊರಡಿಸಲಾಗಿದೆ.
ನೋಟಿಸ್ ಕೊಟ್ಟರೂ ಮಾಹಿತಿ ಕೊಟ್ಟಿರಲಿಲ್ಲ!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ (ಬಿಬಿಎಂಪಿ)ಕಾನೂನು ಕೋಶದ (ವಿಭಾಗ) ಅಭಿಪ್ರಾಯವನ್ನು ಪಡೆದು ಕ್ರಮ ತೆಗೆದುಕೊಂಡಿದೆ. ಡಿಬಾರ್ ಮಾಡಿರುವ ಗುತ್ತಿಗೆದಾರನನ್ನು ಮೊದಲು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ನಕಲಿ ದಾಖಲೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಸಮಜಾಯಿಷಿ ನೀಡಲು ನೇರವಾಗಿ ಕಚೇರಿಗೆ ಬನ್ನಿ ಎಂದು ಗುತ್ತಿಗೆದಾರನಿಗೆ ಆಹ್ವಾನ ನೀಡಲಾಗಿತ್ತು. ನೋಟಿಸ್‌ಗಳನ್ನು ಸಹ ಜಾರಿ ಮಾಡಲಾಗಿತ್ತು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ. ಈ ರೀತಿ ನೋಟಿಸ್ ಜಾರಿ ಮಾಡಿದ ಮೇಲೂ ಗುತ್ತಿಗೆದಾರ ಕ್ಯಾರೆ ಎಂದಿಲ್ಲ ಎನ್ನಲಾಗಿದೆ. ಇದೀಗ ಬಿಬಿಎಂಪಿ ಡಿಬಾರ್ ಮಾಡಿದೆ. ಅಲ್ಲದೇ ಈಗಾಗಲೇ ಗುತ್ತಿಗೆದಾರನಿಗೆ ನೀಡಲಾಗಿರುವ ಪರವಾನಗಿ ರದ್ದು ಮಾಡಲಾಗಿದ್ದು. ಟೆಂಡರ್ ಕೆಲಸಗಳನ್ನು ಸಹ ವಾಪಸ್ ಪಡೆಯಲಾಗಿದೆ.












Click it and Unblock the Notifications