BBMP: ಐದೇ ವರ್ಷಗಳಲ್ಲಿ ಬಿಡಾಡಿ ದನಗಳ ಮಾಲೀಕರಿಂದ ಲಕ್ಷಾಂತರ ಹಣ ಸಂಗ್ರಹ
ಬೆಂಗಳೂರು, ಆಗಸ್ಟ್ 09: ಬಿಬಿಎಂಪಿ ವ್ಯಾಪ್ತಿಯ ಮಹಾದೇವಪುರ ಸೇರಿದಂತೆ ಇನ್ನಿತರ ಟೆಕ್ ಕಾರಿಡಾರ್ ಪ್ರದೇಶಗಳಲ್ಲಿ ದನಗಳು ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಸಾಮಾನ್ಯವಾಗಿದೆ. ಇದು ರಸ್ತೆ ಅಪಘಾತ ಇನ್ನಿತರ ಅಪಾಯ ಸನ್ನಿವೇಶಗಳಿಗೆ ಕಾರಣವಾಗಬಹುದು. ಈ ಕಾರಣಕ್ಕೆ ಜಾನುವಾರುಗಳ ಮಾಲೀಕರಿಗೆ ಲಕ್ಷಾಂತರ ರೂ. ದಂಡವನ್ನು ಪಾಲಿಕೆ ವಿಧಿಸಿದೆ.
ಸಂಚಾರಕ್ಕೆ ಸಮಸ್ಯೆ ಉಂಟು ಮಾಡುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಪಶುಸಂಗೋಪನಾ ಇಲಾಖೆಯು 2018-19 ರಿಂದ 2022-23 ರವರೆಗೆ ಐದು ವರ್ಷಗಳಲ್ಲಿ 3,760 ಜಾನುವಾರುಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ದಂಡ ವಿಧಿಸಲಾಗಿದೆ. ಜಾನುವಾರು ಮಾಲೀಕರಿಂದ ಬಿಬಿಎಂಪಿ ಸುಮಾರು 20 ಲಕ್ಷ ರೂಪಾಯಿ ಹಣವನ್ನು ದಂಡ ರೂಪದಲ್ಲಿ ಸಂಗ್ರಹಿಸಿದೆ.

ಕಸದ ರಾಶಿಯನ್ನು ತಿನ್ನಲೆಂದು ತಮ್ಮ ಜಾನುವಾರುಗಳನ್ನು ರಸ್ತೆಗಳಲ್ಲಿ ಹೇಗೆಂದರೆ ಹಾಗೇ ಅಲೆದಾಡಲು ಬಿಟ್ಟರೆ ಮಾಲೀಕರಿಗೆ ದಂಡ ವಿಧಿಸಲಾಗುವುದು. ಬಿಡಾಡಿ ದನಗಳ ಬಗ್ಗೆ ದೂರುಗಳನ್ನು ಸ್ವೀಕರಿಸಲು ಪಾಲಿಕೆ ಸಹಾಯವಾಣಿಗಳನ್ನು ಹೊಂದಿದೆ. ದೂರು ಸ್ವೀಕಾರ, ಪರಿಹಾರಕ್ಕಾಗಿ ನಾಲ್ಕು ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದು ಬಿಬಿಎಂಪಿಯ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಕೆಪಿ ರವಿಕುಮಾರ್ ಮಾಹಿತಿ ನೀಡಿದರು.
ಒಂದು ವರ್ಷದಲ್ಲಿ 1,552 ಜಾನುವಾರು ಹಿಡಿದ ಪಾಲಿಕೆ
2022-23ರಲ್ಲಿ ಒಂದು ವರ್ಷದಲ್ಲಿ 1,552 ಜಾನುವಾರುಗಳನ್ನು ಹಿಡಿದುಕೊಂಡು ದಂಡದ ರೂಪದಲ್ಲಿ ಆ ದನಗಳ ಮಾಲೀಕರಿಂದ 8,21,400 ರೂ. ಹಣ ಸಂಗ್ರಹಿಸಲಾಗಿದೆ. ಪ್ರತಿ ಜಾನುವಾರುಗಳ ಮಾಲೀಕರಿಗೆ 600 ರೂ., ಕೆಲವುಗಳಿಗೆ 300 ರೂಪಾಯಿ ದಂಡ ವಿಧಿಸಿದ್ದೇವೆ. ಮಾಲೀಕರು ತಮ್ಮ ಜಾನುವಾರುಗಳನ್ನು ತಿರುಗಾಡಲು ಬಿಡಬಾರದು. ದಂಡ ಕಟ್ಟಿ ಜಾರುವಾರು ಬಿಡಿಸಿಕೊಳ್ಳದಿದ್ದರೆ ಅಂತಹ ಜಾನುವಾರುಗಳನ್ನು ಸಮಯಾವಕಾಶ ಮೀರಿದ ಮೇಲೆ ಗೋಶಾಲೆಗಳಿಗೆ ಹೊಡೆಯಲಾಗುವುದು ಎಂದರು.
ಬಿಡಾಡಿ ದನಗಳ ಹಾವಳಿ ಹೆಚ್ಚಾದರೆ, ಅವುಗಳಿಂದ ತೊಂದರೆ ಆದರೆ ದೂರುಗಳನ್ನು ಸಲ್ಲಿಸಲು ಪಶುಸಂಗೋಪನಾ ಇಲಾಖೆ ಸಹಾಯವಾಣಿ 080-23417100 ಮತ್ತು 82771 00200 ಗೆ ಸಂಪರ್ಕಿಸಬಹುದು. 2022-23ರಲ್ಲಿ ದನಗಳಿಗೆ ಸಂಬಂಧಿಸಿದಂತೆ 5,000 ದೂರುಗಳನ್ನು ಪಾಲಿಕೆ ಸ್ವೀಕರಿಸಿದೆ. ಅದರಲ್ಲಿ ಕೆಲವು ಸುಳ್ಳು ಮಾಹಿತಿ ಸಹ ದಾಖಲಾಗಿವೆ ಎಂದು ತಿಳಿದು ಬಂದಿದೆ.

2022-23ರಲ್ಲಿ ಬಿಡಾಡಿ ದನಗಳ ಸಂಖ್ಯೆ ಏರಿಕೆ
ಬಿಬಿಎಂಪಿ ಅಧಿಕಾರಿಗಳು ಹೇಳುವಂತೆ 2022-23ರಲ್ಲಿ ಈ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಸದ್ಯ ನಗರದ ಬೀದಿ ಬೀದಿಗಳಲ್ಲಿ ಸುಂಆರು1,500 ಕ್ಕೂ ಹೆಚ್ಚು ಹೋರಿಗಳು ಸಂಚರಿಸುತ್ತಿವೆ. ಆದರೆ ಅವುಗಳು ಹೆಚ್ಚು ಕ್ರೌರ್ಯದಿಂದ ಕೂಡಿದ್ದರಿಂದ ಅವುಗಳನ್ನು ಹಿಡಿಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಇನ್ನು ಇಂತಹ ಜಾನುವಾರುಗಳ ಹಿಡಿಯಲು ಐದು ಜನರ ತಂಡವಿದೆ. ಅದರಲ್ಲಿ ಮಿನಿ ಟ್ರಕ್ ಚಾಲಕರು ಒಳಗೊಂಡಿದ್ದಾರೆ. ಆದರೆ ಇಷ್ಟು ಕಡಿಮೆ ಜನರಿಂದ ಗೂಳಿಗಳನ್ನು ಹಿಡಿಯಲು ಸಾಧ್ಯವಾಗುವುದಿಲ್ಲ ಎಂಬ ದೂರುಗಳು ಇವೆ.
ಗೂಳಿಗಳಿಗೆ ಅರವಳಿಕೆ ಚುಚ್ಚುಮದ್ದು ಮತ್ತು ಅದನ್ನು ಹಿಡಿಯಲು ಡಾರ್ಟ್ ಗನ್ ಅನ್ನು ಬಳಸುವ ನಿಬಂಧನೆ ಇದೆ. ಆದರೆ ಜನದಟ್ಟಣೆ ಇರುವ ನಗರದಲ್ಲಿ ಗೂಳಿಗಳನ್ನು ಹಿಡಿಯಲು ಬಿಬಿಎಂಪಿ ಈ ವಿಧಾನವನ್ನು ಬಳಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಾರ್ಟ್ ಗನ್ ಬಳಸಬೇಕಾದರೆ, ಅದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ನೇಮಿಸಿಕೊಳ್ಳಬೇಕು. ಆದರೆ ಜನದಟ್ಟಣೆ ಪ್ರದೇಶಗಳಲ್ಲಿ ಅದರ ಬಳಕೆ ಕಷ್ಟಸಾಧ್ಯ ಎನ್ನಲಾಗಿದೆ.












Click it and Unblock the Notifications