ರಸ್ತೆ ಗುಂಡಿಗೆ ಮುಕ್ತಿ: ಸಚಿವ ಜಾರ್ಜ್ ಬೆಂಗಳೂರು ರೌಂಡ್ಸ್
ಬೆಂಗಳೂರು, ನವೆಂಬರ್, 29: ಜನರ ಮತ್ತು ಮಾಧ್ಯಮಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಅಂತೂ ಎಚ್ಚೆತ್ತುಕೊಂಡು ಬೆಂಗಳೂರು ರಸ್ತೆಗಳ ಮೃತ್ಯುಕೂಪವನ್ನು ಮುಚ್ಚಲು ಆರಂಭಿಸಿದೆ. ಶನಿವಾರ ರಾತ್ರಿ ಗುಂಡಿ ಮುಚ್ಚುವ ಕಾಮಗಾರಿಯನ್ನು ಖುದ್ದು ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ವೀಕ್ಷಣೆ ಮಾಡಿದರು.
ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ ನೀಡಿದರು.[ಬೆಂಗಳೂರು ರಸ್ತೆಗಳ ಗುಂಡಿ ಮುಚ್ಚಲು 11 ಕೋಟಿ ಬಿಡುಗಡೆ]

ರಸ್ತೆ ದುರಸ್ತಿಗೆ ಸಂಬಂಧಿಸಿ 418 ಕೋಟಿ ರೂ. ಮೊತ್ತದ ಯೋಜನೆ ಸಿದ್ಧಪಡಿಸಲಾಗಿದೆ. ಅದರಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯವೂ ಯೋಜನೆಯಲ್ಲಿ ಸೇರಿದೆ. ಗುಂಡಿ ಮುಚ್ಚುವ ಕಾರ್ಯ ತಾತ್ಕಾಲಿಕ ಪರಿಹಾರವಾಗಿದ್ದು, ನಗರೋತ್ಥಾನ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳು ಗುಂಡಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಿವೆ ಎಂದು ತಿಳಿಸಿದರು.
ಬಿಬಿಎಂಪಿ ಆಯುಕ್ತ ಜಿ. ಕುಮಾರನಾಯಕ್, ಬಿಎಂಆರ್‌ಸಿಎಲ್ ಎಂಡಿ ಪ್ರದೀಪ್‌ಸಿಂಗ್ ಖರೋಲಾ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಆರ್.ಎಸ್.ಸತ್ಯನಾರಾಯಣ ಮತ್ತಿತರರು ಸಚಿವರೊಂದಿಗೆ ಇದ್ದರು. ಗಾಂಧಿನಗರ, ಹೆಬ್ಬಾಳ, ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯದ ಪರಿಶೀಲನೆ ನಡೆಸಲಾಯಿತು.[ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಬಂತು ಅಪ್ಲಿಕೇಶನ್]
ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಎರಡು ವಾರಗಳೊಳಗಾಗಿ ಮುಚ್ಚಲಾಗುವುದು ಎಂದು ಬಿಬಿಎಂಪಿ ಆಯುಕ್ತ ಜಿ. ಕುಮಾರನಾಯಕ್ ತಿಳಿಸಿದ್ದಾರೆ.
ಒಂದು ತಿಂಗಳಿನಿಂದ ಸುರಿದ ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ. ಗುಂಡಿಗಳು ಹೆಚ್ಚಾಗಿ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ. ಮಳೆ ನಿಂತ ದಿನದಿಂದಲೇ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ 40ಕ್ಕೂ ಹೆಚ್ಚಿನ ರಸ್ತೆಗಳಲ್ಲಿ ಈ ದುರಸ್ತಿ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications