ಗುಂಡು ಹೊಡೆದು ಪತ್ನಿ ಹತ್ಯೆ; ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ !
ಬೆಂಗಳೂರು, ನವೆಂಬರ್ 16: ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಪತ್ನಿಗೆ ಗುಂಡು ಹೊಡೆದು ಹತ್ಯೆ ಮಾಡಿರುವ ಪತಿ ತಾನೂ ಗುಂಡು ಹೊಡೆದುಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ.
ಕೊಡಗಿನ ಸೋಮವಾರಪೇಟೆ ಮೂಲದ ಕಾಳಪ್ಪ ಪತ್ನಿಯನ್ನು ಹತ್ಯೆ ಮಾಡಿ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಆರೋಪಿ. ಸುಮಿತ್ರಾ ಪತಿಯಿಂದ ಕೊಲೆಯಾದ ಮಹಿಳೆ. ಬಸವೇಶ್ವರನಗದಲ್ಲಿ ನೆಲೆಸಿರುವ ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ.
ದಂಪತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಹಣ ತುಂಬಿಸುವ ಎಟಿಎಂ ವಾಹನದ ಸೆಕ್ಯುರಿಟಿ ಗಾರ್ಡ್ ಆಗಿದ್ದ ಕಾಳಪ್ಪ ಸಿಂಗಲ್ ಬ್ಯಾರಲ್ ಬಂದೂಕು ಹೊಂದಿದ್ದ. ಪತ್ನಿಯ ನಡವಳಿಕೆ ಮೇಲೆ ಅನುಮಾನ ಪಡುತ್ತಿದ್ದ. ಕೆಲಸಕ್ಕೆ ಹೋಗುವಾಗ ಪತ್ನಿಯನ್ನು ಮನೆಯಲ್ಲಿಟ್ಟು ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದ. ಈ ವಿಚಾರವಾಗಿ ದಂಪತಿ ನಡುವೆ ಪದೇ ಪದೇ ಜಗಳ ಆಗುತ್ತಿತ್ತು.

Recommended Video
ಇದೇ ವಿಚಾರವಾಗಿ ದೀಪಾವಳಿ ಹಬ್ಬದ ದಿನವೂ ಇಬ್ಬರ ನಡುವೆ ಜಗಳವಾಗಿದೆ. ಬೆಂಗಳೂರಿನಲ್ಲಿಯೇ ನಲೆಸಿರುವ ಮಕ್ಕಳು ಕಾಳಪ್ಪನಿಗೆ ಬುದ್ಧಿವಾದ ಹೇಳಿದ್ದರು. ಸುಮಿತ್ರ ನಿನ್ನೆ ಮಗಳ ಮನೆಗೆ ಹೋಗಿದ್ದರು. ಇಂದು ಬೆಳಗ್ಗೆ ಮನೆಗೆ ವಾಪಸು ಬಂದಿದ್ದ ಸುಮಿತ್ರಾ ಜತೆ ಕಾಳಪ್ಪ ಜಗಳ ತೆಗೆದಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪತ್ನಿಗೆ ಬಂದೂಕಿನಿಂಧ ಗುಂಡು ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕಾಳಪ್ಪ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಾವಿತ್ರಿ ಅವರ ಮೃತ ದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಬಸವೇಶ್ವರನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications