ಕರ್ನಾಟಕ ಬರಗಾಲ: ಶಾಶ್ವತ ಟಾಸ್ಕ್ ಫೋರ್ಸ್ ರಚನೆ ಮಾಡಿ: ಬೊಮ್ಮಾಯಿ
ಬೆಂಗಳೂರು, ಜಲೈ 06: ಪ್ರತಿ ವರ್ಷ ಮಳೆ ಸುರಿಯುವುದು ಕೇವಲ ಒಂದು ವಾರ ವಿಳಂಬವಾದರೆ ಕೃಷಿಗೆ ದೊಡ್ಡ ಸಮಸ್ಯೆ ಉಂಟಾಗುತ್ತಿದೆ. ಈ ವರ್ಷವು ಹಾಗೆಯೇ ಆಗಿದೆ. ಆದ್ದರಿಂದ ಪ್ರತಿ ಜಿಲ್ಲೆಗೆ ಐವತ್ತು ಲಕ್ಷ ರೂಪಾಯಿ ಬಿಡುಗಡೆ ಮಾಡಿ, ಶಾಸ್ವತ ಟಾಸ್ಕ್ ಫೋರ್ಸ್ ರಚನೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನದ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಅಲ್ಲಮ ಪ್ರಭು ಪಾಟೀಲ್ ಕೇಳಿದ ಪ್ರಶ್ನೆಗೆ ಬೆಂಬಲಿಸಿ ಮಾತನಾಡಿದರು. ಈ ವೇಳೆ ಪ್ರತಿ ವರ್ಷ ಒಂದು ವಾರ ಮಳೆ ವಿಳಂಬವಾದರೆ ಕೃಷಿ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ರೈತರು ಬಿತ್ತನೆ ಮಾಡಿದರೂ ಮೊಳಕೆ ಒಡೆಯದಿದ್ದರೆ ಅದಕ್ಕೆ ವಿಮೆ ಕೂಡ ಬರುವುದಿಲ್ಲ. ಹವಾಮಾನ ಇಲಾಖೆಯ ಮುನ್ಸೂಚನೆ ನಂಬಿ ಕೂರಬೇಡಿ. ಅವರು ಮುಂದಿನ ಐದು ದಿನ ನಿರಂತರ ಮಳೆ ಅಂತ ಹೇಳಿದ್ದಾರೆ. ಆದರೆ, ಎಲ್ಲ ಕಡೆ ನಿರ್ಧಿಷ್ಟ ಮಳೆ ಆಗುತ್ತಿಲ್ಲ. ನೀವು ವಾಸ್ತವ ನೋಡಿ ಕೆಲಸ ಮಾಡಬೇಕು.
ನಾಡಿನ ಏಳಿಗೆ ವಿಚಾರವಾಗಿ ಪತ್ರ ಬರೆದಿದ್ದ ಬೊಮ್ಮಾಯಿ
ಆದ್ದರಿಂದ ಬರಗಾಲ, ಪ್ರವಾಹ ನಿರ್ವಹಣೆಗೆ, ರೈತರಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಸರ್ಕಾರ ಶಾಸ್ವತ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಅಲ್ಲದೇ ಪ್ರತಿ ಜಿಲ್ಲೆಗೂ ತಕ್ಷಣ ಐವತ್ತು ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡುವುದಾಗಿ ಹೇಳಿದ ತಕ್ಷಣವೇ ಮಾಜಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಅನುದಾನ ಬೇಕಾಗುತ್ತದೆ. ಹಾಗೆಂದು ಬೇರೆ ಅಭಿವೃದ್ಧಿ ಯೊಜನೆಗಳಿಗೆ ಕಡಿತ ಮಾಡಬಾರದು. ಬರಗಾಲ, ಕೃಷಿ ಅಭಿವೃದ್ಧಿಗೆ ಒತ್ತು ನೀಡಿ. ಮಳೆ ಬಾರದ ಹಿನ್ನೆಲೆ ಮೋಡ ಬಿತ್ತನೆ, ನೀರಿನ ಹಾಹಾಕಾರ ನಿವಾರಣಗೆ ಗಮನ ಕೊಡಿ ಎಂದು ಸಲಹೆ ನೀಡಿದ್ದರು.

ನಮಗೆ ಮುಜುಗರ ಇದೆ: ಬೊಮ್ಮಾಯಿ
ರುದ್ರಪ್ಪ ಲಮಾಣಿ ಉಪ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು.
ನಮಗೆ ಮುಜುಗರ ಇದೆ. ಚುನಾವಣೆಯ ಫಲಿತಾಂಶ ಬಂದ ಮೇಲೆ ಹಾವೇರಿ ಜಿಲ್ಲೆಯವರು ಇಬ್ಬರು ಮೂವರು ಹಿರಿಯ ಶಾಸಕರಿದ್ದೀರಿ, ನೀವು ಸಚಿವರಾಗಿ ಬರುತ್ತೀರಿ ಎಂದು ಭಾವಿಸಿದ್ದೇವು. ಅದು ಸಾಧ್ಯವಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಉಪಸಭಾಧ್ಯಕ್ಷ ಹುದ್ದೆಯಲ್ಲಿ ಅಧಿಕಾರ ಕಡಿಮೆ ಗೌರವ ಜಾಸ್ತಿ. ನೀವು ಸರಳ ಸಜ್ಜನರಿದ್ದೀರಿ, ನಾನು ನಿಮ್ಮ ತಾಂಡಾಕ್ಕೆ, ಮನೆಗೆ ಬಂದಿದ್ದೇನೆ. ರಾಜಕಾರಣದಲ್ಲಿ ಯಾರು ಏನು ಬೇಕಾದರೂ ಆಗಬಹುದು. ರಾಜಕಾರಣದಲ್ಲಿ ಪವರ್ ಪೊಲಿಟಿಕ್ಸ್ ಇಸ್ ವೇಟಿಂಗ್ ಗೇಮ್ ಅಂತ ಈಗ ಅದು ಅವಕಾಶ ಬಂದಾಗ ಅದನ್ನು ಪಡೆದುಕೊಳ್ಳಬೇಕು. ಶಕ್ತಿ ಇದ್ದವರು ಅಧಿಕಾರ ಪಡೆದುಕೊಳ್ಳುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ರಾಜಕಾರಣದಲ್ಲಿ ಬದಲಾವಣೆ
ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ ವೀರನೂ ಅಲ್ಲ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೊಟ್ಟ ಎಲ್ಲ ಕುದುರೆಗಳನ್ನು ಏರಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ಕುದುರೆ ಏರೂತ್ತಾರೊ ನೋಡೋಣ. ಬದಲಾವಣೆ ಜಗದ ನಿಯಮ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಸಾಧ್ಯತೆ ಇದೆ ಎಂದು ಮಾರ್ಮಿಕವಾಗಿ ನುಡಿದರು.












Click it and Unblock the Notifications