Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭ, 7 ಲಕ್ಷ ಮಂದಿ ಭೇಟಿ ನಿರೀಕ್ಷೆ, ವಿವರ
ಬೆಂಗಳೂರು, ಡಿಸೆಂಬರ್ 11: ಬೆಂಗಳೂರಿನ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಇಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಅಧಿಕೃತವಾಗಿ ಚಾಲನೆ ಪಡೆದುಕೊಳ್ಳಲಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರು ವಿದ್ಯುಕ್ತವಾಗಿ ಪರಿಷೆ ಉದ್ಘಾಟಿಸಲಿದ್ದಾರೆ. ಸುಮಾರು ಏಳು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ದೊಡ್ಡಗಣಪತಿ ಹಾಗೂ ಬಸವಣ್ಣ ದೇವರಿಗೆ ವಿಶೇಷ ಅಭಿಷೇಕ ನಡೆಸುವ ಮೂಲಕ ಪರಿಷೆ ಆರಂಭವಾಗಲಿದೆ. ಸಾವಿರಾರು ವ್ಯಾಪಾರಿಗಳು ಈಗಾಗಲೇ ಪರಿಷೆಯಲ್ಲಿ ವ್ಯಾಪಾರ ಆರಂಭಿಸಿದ್ದಾರೆ. ಇಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಆಗಮಿಸಲಿದ್ದಾರೆ.

ಪರಿಷೆ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಭಾನುವಾರ ಕಡಲೆಕಾಯಿ ಪರಿಷೆ ಪರಿಶೀಲಿಸಿದ ರಾಮಲಿಂಗಾ ರೆಡ್ಡಿಯವರು ರೈತ ವ್ಯಾಪಾರಿಗಳನ್ನು ಮಾತನಾಡಿಸಿದರು. ಪರಿಷೆ, ಮಳಿಗೆಗಳು, ಭದ್ರತೆ, ವ್ಯವಸ್ಥೆಗಳ ಕುರಿತು ಪರಿಶೀಲನೆ ಮಾಡಿದರು. ಪರಿಷೆಗೆ ಒಟ್ಟು ಸುಮಾರು 07 ಲಕ್ಷ ಜನರು ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಹಸಿ, ಒಣ ಮತ್ತು ಹುರಿದ ಕಡ್ಲೆಕಾಯಿ ಮಾರಾಟ
ಸೋಮವಾರ ಅಧಿಕೃತವಾಗಿ ಕಡಲೆಕಾಯಿ ಪರೀಷೆ ಆರಂಭವಾದರೂ ಸಹಿತ ಎರಡು ದಿನದಿಂದಲೇ ಜನರು ಬಸವನಗುಡಿಯತ್ತ ಆಗಮಿಸುತ್ತಿದ್ದಾರೆ. ಹೊರ ಜಿಲ್ಲೆಗಳು, ಹೊರ ರಾಜ್ಯಗಳಿಂದ ರೈತರು ಕಡಲೆಕಾಯಿ ತಂದಿದ್ದಾರೆ. ವಿವಿಧ ಬಗೆಯ ಹಸಿ, ಒಣ ಮತ್ತು ಹುರಿದ ಕಡಲೆಕಾಯಿಗಳು ಇಲ್ಲಿ ಲಭ್ಯವಿವೆ. ಸದ್ಯ ಬಸವನಗುಡಿಯ ರಸ್ತೆಗಳಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿದೆ.

ವಾರಾಂತ್ಯವಾದ ಹಿನ್ನೆಲೆಯಲ್ಲಿ ಭಾನುವಾರ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಜನ ಜಂಗುಳಿ ಕಂಡು ಬಂತು. ವಿವಿಧ ಬಗೆಯ ಕಡಲೆಕಾಯಿಗಳನ್ನು ಜನರು ಮುಗಿಬಿದ್ದು ಖರೀದಿಸಿದರು, ಸವಿದರು. ಒಂದು ಸೇರಿಗೆ 30-40 ರೂಪಾಯಿಗೆ ಕಡಲೆಕಾಯಿ ಮಾರಾಟವಾಗುತ್ತಿವೆ.
ಪರಿಷೆಯಲ್ಲಿ 3000 ಅಧಿಕ ಮಳಿಗೆಗಳು
ಪರಿಷೆಯಲ್ಲಿ ಸುಮಾರು 3000 ಅಧಿಕ ಮಳಿಗೆಗಳನ್ನು ಹಾಕಲಾಗಿದೆ. ಬೆಂಗಳೂರು ಹೊರ ಭಾಗದ ಜಿಲ್ಲೆಗಳು, ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ತೆಲಂಗಾಣ ಆಂಧ್ರ ಪ್ರದೇಶದಂತಹ ಹೊರ ರಾಜ್ಯಗಳಿಂದಲೂ ಇಲ್ಲಿಗೆ ಕಡಲೆಕಾಯಿ ಬರುತ್ತವೆ.
ಈ ಬಾರಿ ಬಸವನಗುಡಿಯ ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶ ಹೊಂದಿದೆ. ಹೀಗಾಗಿಯೇ ಕೈ ಚೀಲ ತನ್ನಿ ಎಂದು ಈಗಾಗಲೇ ಕರೆ ನೀಡಿದೆ. ಈ ಪ್ಲಾಸ್ಟಿಕ್ ಮುಕ್ತ ಪರಿಷೆಗಾಗಿ ವಿವಿಧ ಸಂಘ-ಸಂಸ್ಥೆಗಳು ಜಾಗೃತಿಗಾಗಿ ಕೈ ಜೋಡಿಸಿವೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರ ಅನುಕೂಲಕ್ಕಾಗಿ ನೇರವಾಗಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಈ ಬಾರಿಯ ಪರಿಷೆ ಸುಮಾರು 200 ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದೆ.
ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ಕಾರ್ಯಕ್ರಮ
ಬರೀ ಕಡಲೆಕಾಯಿ ಮಳಿಗೆಗಳು ಮಾತ್ರವಿಲ್ಲ. ಜೊತೆಗೆ ತಿಂಡಿ ತಿನಿಸುಗಳ ಮಳಿಗೆಗಳು, ತಂಪು ಪಾನೀಯ ಅಂಗಡಿಗಳು, ಮನೆ ಅಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ರಸ್ತೆಗಳು ಮತ್ತು ದೇವಸ್ಥಾನದ ಆವರಣದಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ. ಒಟ್ಟಾರೆ ಬಸವನಗುಡಿ ಮಧುವಣಗಿತ್ತಿಯಂತೆ ಪರಿಷೆಗೆ ಸಜ್ಜಾಗಿದೆ. ಇಂದು ಸಂಜೆ ಕೆಂಪಾಂಬುದಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಇಂದು ಮತ್ತು ನಾಳೆ ಮಂಗಳವಾರ ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.












Click it and Unblock the Notifications