ಮತ್ತೆ ಬಂತು ಕಡೆಲೆಕಾಯಿ ಪರಿಷೆ, ಬನ್ನಿ ಬಸವನಗುಡಿಗೆ
ಬೆಂಗಳೂರು, ನವೆಂಬರ್ 10 : ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 13 ರಂದು ಕಡಲೆಕಾಯಿ ಪರಿಷೆಗೆ ಚಾಲನೆ ಸಿಗಲಿದೆ. ಸೋಮವಾರದಿಂದ ಎರಡು ದಿನಗಳಕಾಲ ಪರಿಷೆ ನಡೆಯಲಿದೆ.
ದೊಡ್ಡ ಬಸವಣ್ಣ ದೇವಸ್ಥಾನದ ನಂದಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೋಮವಾರ ಪರಿಷೆ ಆರಂಭವಾಗುತ್ತದೆ. ಆದರೆ, ಈಗಾಗಲೇ ಕಡೆಲೆಕಾಯಿ ಮಾರುವ ರೈತರು ಅಂಗಡಿಗಳನ್ನು ತೆರೆದಿದ್ದು, ಜನರು ಆಗಮಿಸುತ್ತಿದ್ದಾರೆ.

ರಾಮಕೃಷ್ಣ ಆಶ್ರಮದಿಂದ ಬಿಎಂಎಸ್ ಕಾಲೇಜು ವೃತ್ತದವರೆಗೂ, ಕಡಲೆಕಾಯಿ, ತಿಂಡಿ-ತಿನಿಸು, ಆಟಿಕೆ ಅಂಗಡಿಗಳು ಇರುತ್ತವೆ. ಕಡಲೆಕಾಯಿ ಪ್ರಿಯರಿಗಾಗಿ ಬೇಯಿಸಿದ ಕಡಲೆ, ಹುರಿಗಡಲೆ, ಸಕ್ಕರೆ ಮಿಶ್ರಿತ ಕಡಲೆ ಹೀಗೆ ವಿವಿಧ ಬಗೆಯ ಕಡಲೆಗಳು ಲಭ್ಯವಿರಲಿದೆ.
ಈಗಾಗಲೇ ಮಾರಾಟ ಆರಂಭ : ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ನಾನಾ ಭಾಗಗಳಿಂದ ಅಷ್ಟೇ ಅಲ್ಲದೆ ಆಂಧ್ರಪ್ರದೇಶ, ತಮಿಳುನಾಡಿನ ರೈತರು ಹಾಗೂ ವ್ಯಾಪರಿಗಳು ಕೂಡ ಪರಿಷೆಯಲ್ಲಿ ಭಾಗವಹಿಸುತ್ತಾರೆ.
ಪರಿಷೆಗಾಗಿ ಕಡಲೆಕಾಯಿಗಳನ್ನು ತಂದ ರೈತರು ಈಗಾಗಲೇ ಮಾರಾಟವನ್ನು ಆರಂಭಿಸಿದ್ದಾರೆ. ಲೀಟರ್ ಮಾನದಂಡದಲ್ಲಿ ಕಡಲೆಕಾಯಿ ಗುಣಮಟ್ಟಕ್ಕೆ ತಕ್ಕಂತೆ 25ರೂ.ನಿಂದ 60ರೂ.ವರೆಗೂ ದರ ನಿಗದಿಮಾಡಲಾಗಿದೆ.
ಪರಿಷೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಜಾಗೃತಿ : ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ಈ ಬಾರಿಯೂ ಪ್ಲಾಸ್ಟಿಕ್ ಮುಕ್ತ ಪರಿಷೆಯನ್ನಾಗಿಸಲು ರಾಜ್ಯ ಮುಜರಾಯಿ ಇಲಾಖೆ ಮುಂದಾಗಿದೆ. ಬಸವನಗುಡಿಯ ಬಿಎಂಎಸ್ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವತಿಯಿಂದ ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ.
4 ಲಕ್ಷ ಭಕ್ತರು ಸೇರುವ ನಿರೀಕ್ಷೆ : ಈ ಬಾರಿಯ ಕಡಲೆಕಾಯಿ ಪರಿಷೆಗೆ 4 ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದೆ. ಇದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸೋಮವಾರ ಬೆಳಗ್ಗೆ 6ಗಂಟೆಯಿಂದಲೇ ನಂದಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 5 ಮೂಟೆ ಕಡಲೆಕಾಯಿ ಅಭಿಷೇಕ ಕ್ಷೀರಾಭಿಷೇಕ, ಮಾಡಲಾಗುತ್ತದೆ.












Click it and Unblock the Notifications