Airport: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನಮಾಜ್‌ಗೆ ಅವಕಾಶ ಕೊಟ್ಟಿದ್ದ್ಯಾರು?: ಶಾಸಕ ಯತ್ನಾಳ್ ಗರಂ
ಬೆಂಗಳೂರು, ನವೆಂಬರ್ 10: ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್ ಎರಡರಲ್ಲಿ ಮುಸ್ಲಿಮರು ನಮಾಜ್ ಮಾಡಿದ ಸುದ್ದಿ ವಿಡಿಯೋ ಸಹಿತ ಪ್ರಸಾರವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅದರ ದೃಶ್ಯಗಳು ಹರಿದಾಡುತ್ತಿದ್ದಂತೆ ಬಿಜೆಪಿ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಹಿಂದೂ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹ ಈ ನಡೆಗೆ ಕೆಂಡಾಮಂಡಲವಾಗಿದ್ದಾರೆ.
ಸೋಮವಾರ ಎಕ್ಸ್ ಪೋಸ್ಟ್ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಸಾಮೂಹಿಕ ನಮಾಜ್ ಮಾಡುತ್ತಿರುವ ದೃಶ್ಯವನ್ನು ಮಾಧ್ಯಮಗಳು ಬಿತ್ತರಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಲು ಇವರಿಗೆ ಅನುಮತಿ ಕೊಟ್ಟಿದ್ದು ಯಾರು? ಮುಸಲ್ಮಾನ ಬಾಹುಳ್ಯ ದೇಶಗಳಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧಿಸಿರುವಾಗ ನಮ್ಮ ದೇಶದಲ್ಲಿ ಏಕೆ ಏನುಮತಿ ಕೊಡಬೇಕು? ಎಂದು ಅವರು ಖಾರವಗಿ ಪ್ರಶ್ನೆ ಮಾಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನಕ್ಕೆ ತಹಶೀಲ್ದಾರ್ ಇಂದ ಹಿಡಿದು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ವರೆಗೂ ಅನುಮತಿ ಪಡೆಯಬೇಕೆಂದು ಆದೇಶ ರಾಜ್ಯ ಸರ್ಕಾರ ಅನುಮತಿ ಹೊರಡಿಸಿದೆ. ಇಂಥದರಲ್ಲಿ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಬಾರದು ಎಂದು ಹೇಳುವುದಕ್ಕೆ ಧೈರ್ಯವಿಲ್ಲವೇ? ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಿದವರ ವಿರುದ್ದ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದ್ದಾರೆ.
ಪೋಸ್ಟ್‌ಗೆ ನೆಟ್ಟಿಗರಿಂದ ಪ್ರತಿಕ್ರಿಯೆ
ಯತ್ನಾಳ್ ಅವರ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಮುಸಲ್ಮಾನರ ದೇಶಗಳಲ್ಲಿ ಕೇವಲ ಸಾರ್ವಜನಿಕ ನಮಾಜ್ ಒಂದಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಹನುಮಾನ್ ಚಾಲೀಸಾ, ಗಣೇಶನನ್ನು ಕೂರಿಸುವುದು ಮತ್ತು ಇತರೆ ಎಲ್ಲ ಧಾರ್ಮಿಕ ಚಟುವಟಿಗಳನ್ನು ನಿಷೇಧಿಸಿದ್ದಾರೆ. ನಮಾಜ್ ನಿಷೇಧಿಸಿ ನಿಮ್ಮ ಹನುಮಾನ್ ಚಾಲೀಸಾ ಹಾಡಲು, ಗಣಪತಿ ಕೂರಿಸಲು ಬಿಟ್ಟಿರುವ ಉದಾಹರಣೆ ತೋರಿಸಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, ಏರ್ ಪೋರ್ಟ್ ಕೇಂದ್ರ ಸರ್ಕಾರದ ಹಾಗೂ ಅದರ ನಿಯಂತ್ರಿತ ಭದ್ರತಾ ಪಡೆಗಳ ನಿಯಂತ್ರಣದಲ್ಲಿ ಇರುತ್ತದೆ ಅನ್ಸುತ್ತೆ. ಆದರೆ ಇದರ ಅರಿವು ಇಲ್ಲದೆ ಎಲ್ಲದಕ್ಕೂ ರಾಜ್ಯ ಸರ್ಕಾರವನ್ನು ಟೀಕಿಸುವುದು, ಬರೀ ಇವರನ್ನೇ ಯಾಕೆ ಇದರ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಲ್ಲವೇ..? ಪ್ರಶ್ನಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಹೇಳಿದ್ದೇನು?
ಈ ಬಗ್ಗೆ ಶ್ರೀರಾಮ್ ಸೇನೆ ಮುಖ್ಯಸ್ಥರ ಪ್ರಮೋದ್ ಮುತಾಲಿಕ್ ಅವರು ಸಹ ಪ್ರತಿಕ್ರಿಯಿಸಿದ್ದಾರೆ. ಇವರ ಪ್ರಾರ್ಥನೆಗೆ ನಮ್ಮ ವಿರೋಧ ಇಲ್ಲ. ಎಲ್ಲಿ? ಹೇಗೆ ಮಾಡಬೇಕು? ಎಂದು ತಿಳಿದುಕೊಳ್ಳಬೇಕಾಗುತ್ತದೆ. ರೈಲು, ಬಸ್, ವಿಮಾನ ನಿಲ್ದಾಣದಲ್ಲಿ ಮಾಡುವುದೆಂದರೆ ಹೇಗೆ? ರೀತಿ ನಿಯಮ ಇಲ್ಲವಾ? ಏರ್‌ಪೋರ್ಟ್‌ನಲ್ಲಿ ಎಲ್ಲದಕ್ಕೂ ವ್ಯವಸ್ಥೆ ಇದೆ. ಅದನ್ನು ಬಿಟ್ಟು ಕಾರಿಡಾರ್‌ನಲ್ಲಿ ಹೀಗೆ ಮಾಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಲಾಗುತ್ತಿದೆ. ಇದೆಂಥ ಮಾನಸಿಕತೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಹ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಅನುಮತಿ ಕೊಟ್ಟ ಸಿಬ್ಬಂದಿ ಮೇಲೂ ಕ್ರಮವಾಗಬೇಕು ಎಂದರು.












Click it and Unblock the Notifications