ಮಹಿಳೆಯರ ಸುರಕ್ಷತೆಗಾಗಿ ಒಗ್ಗೂಡಿದ ಬೆಂಗಳೂರಿಗರು
ಬೆಂಗಳೂರು, ಮೇ 3 : ಮಹಿಳೆಯರ ಪಾಲಿನ ಅಸುರಕ್ಷಿತ ನಗರವಾಗಿ ಹೊಮ್ಮುತ್ತಿರುವ ಗಾರ್ಡನ್ ಸಿಟಿ ಬೆಂಗಳೂರನ್ನು ಸುರಕ್ಷಿತ ನಗರವನ್ನಾಗಿಸುವ ದೃಷ್ಟಿಯಿಂದ, ಮಹಾರಾಣಿ ಕಾಲೇಜು ಮುಂದಿರುವ ಫ್ರೀಡಂ ಪಾರ್ಕ್ ನಲ್ಲಿ ಮೇ 3ರ ಶನಿವಾರ ಮಧ್ಯಾಹ್ನದಂದು 'ಬೆಂಗಳೂರು ಪ್ಲೇಸ್' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿಶ್ವ ಆರ್ಥಿಕ ಫೋರಂನ ಭಾಗವಾಗಿರುವ ದಿ ಗ್ಲೋಬಲ್ ಶೇಪರ್ಸ್ ಬೆಂಗಳೂರು ಹಬ್ ಸಂಸ್ಥೆ ಈ ಕಾರ್ಯಕ್ರಮವನ್ನು ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಆಯೋಜಿಸಿದೆ. ಇಡೀ ದಿನ ನಾಟಕ, ವಿಚಾರ ವಿನಿಮಯ, ಸಂವಾದ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ 3.30ರಿಂದ 4.30ರವರೆಗೆ ಮಾಧ್ಯಮ ಮಿತ್ರರೊಡನೆ ಸಂವಾದವಿರುತ್ತದೆ. [ಮಹಿಳೆಯರ ಅತ್ಯಾಚಾರಕ್ಕೆ ಕಾರಣ ಯಾರು?]

ರಾಷ್ಟ್ರೀಯ ಅಪರಾಧ ಬ್ಯೂರೋ 2012ರಲ್ಲಿ ನೀಡಿರುವ ವರದಿಯ ಪ್ರಕಾರ ಬೆಂಗಳೂರು ಮಹಿಳೆಯ ಪಾಲಿಗೆ ಎರಡನೇ ಅಸುರಕ್ಷಿತ ನಗರವಾಗಿದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಪ್ಲೈಸ್ ಎಂಬ ನಾಟಕ ಆಧಾರಿತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ತೊಡಗಿರುವ 70 ಬೆಂಗಳೂರಿಗರು ಕೈಜೋಡಿಸಿದ್ದಾರೆ.
ಮಹಿಳೆಯರ ಸುರಕ್ಷತೆಯಲ್ಲಿ ತೊಡಗಿರುವ ಸಂಸ್ಥೆಗಳು : ಬ್ರೇಕ್ ಥ್ರೂ, ಬೆಂಗಳೂರು ನೀಡ್ಸ್ ಯು, ದಿಮಾಗಿ, ದುರ್ಗಾ, ಡಾಕ್ಟರ್ಸ್ ಫಾರ್ ಸೇವಾ ಆರೋಗ್ಯ ಫೌಂಡೇಷನ್, ವಿಸ್ತಾರ್ ಅಕಾಡೆಮಿ ಆಫ್ ಜಸ್ಟಿಸ್ ಅಂಡ್ ಪೀಸ್, ರೆಡ್ ಬಸ್, ಯುವರ್ ಸ್ಟೋರಿ, ರಂಗ್ ದೇ, ಮೈಂಡ್ ಟ್ರೀ ಮುಂತಾದ ಸಂಸ್ಥೆಗಳು ಮಹಿಳೆಯರ ಸುರಕ್ಷತೆಗಾಗಿ ಕೈಜೋಡಿಸಿವೆ.
ವಿಶೇಷ ಅತಿಥಿಗಳಾಗಿ ಭಾಗವಹಿಸುತ್ತಿರುವವರು : ಕಿರಣ್ ಮಜುಂದಾರ್ ಷಾ, ವಾಣಿ ಗಣಪತಿ, ರೇವತಿ ಅಶೋಕ್ (ಬಿಪ್ಯಾಕ್), ಐಐಎಂ-ಬೆಂಗಳೂರು ಪ್ರೊ. ರಾಜೀವ್ ಗೌಡ, ಕೊಲಂಬಿಯಾ ವಿಶ್ವವಿದ್ಯಾಲಯದ ಡಾ. ಜ್ಯೋತಿ ಹೊಸಗ್ರಹಾರ್, ಜಂಟಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಕೆ.ವಿ. ಶರತ್ ಚಂದ್ರ, ಬೆಂಗಳೂರು ಪಶ್ಚಿಮ ಡಿಸಿಪಿ (ಟ್ರಾಫಿಕ್) ಗಿರೀಶ್, ಬಿಎಂಟಿಸಿಯ ಜಾಗೃತೆ ಮತ್ತು ಭದ್ರತೆ ನಿರ್ದೇಶಕ ರಮೇಶ್.
'ಯುವರ್ಸ್ ಟ್ರೂಲಿ ಥಿಯೇಟರ್' ರಂಗತಂಡ ಬೆಂಗಳೂರಿನಲ್ಲಿ ಮಹಿಳೆಯರು ಅನುಭವಿಸಿದ ಮೂರು ಘಟನೆಗಳನ್ನು ನಾಟಕರೂಪದಲ್ಲಿ ಅಭಿವ್ಯಕ್ತಪಡಿಸಲಿದೆ. ನಂತರ, ವಿಶೇಷವಾಗಿ ಆಹ್ವಾನಿತರಾದ ವಿಐಪಿಗಳಿಗೆ ವಿವಿಧ ತಂಡಗಳು, ಮಹಿಳೆಯರ ಸುರಕ್ಷತೆಗಾಗಿ ಏನೇನು ಮಾಡಬಹುದು ಎಂಬ ಕುರಿತು ವಿವರಣೆಗಳನ್ನು ನೀಡಲಿವೆ.


Click it and Unblock the Notifications
