ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಉತ್ತರ: 'ಹಗುರವಾದ' ಕಾಂಗ್ರೆಸ್ ಅಭ್ಯರ್ಥಿಗಳು

By Srinath
|
Google Oneindia Kannada News

bangalore-north-ls-cong-ticket-4-candidates-to-fight-in-internal-polls
ಬೆಂಗಳೂರು, ಮಾರ್ಚ್ 8: ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ಕಾಂಗ್ರೆಸ್ ನಿರುತ್ತರವಾದಂತಿದೆ. ಪಕ್ಷದಲ್ಲಿ ಘಟಾನುಘಟಿಗಳೇ ಕಣಕ್ಕಿಳಿಯಲು ಬಯಸಿದ್ದಾರೆ. ಹಾಗಾಗಿ, ಅಮೆರಿಕದ ಮಾದರಿಯಲ್ಲಿ ಪಕ್ಷದೊಳಗೇ ಆಂತರಿಕ ಚುನಾವಣೆ ನಡೆಸಿ, ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರಕ್ಕೆ ಅಂಟಿಕೊಂಡ ಕಾಂಗ್ರೆಸ್ ವಿಚಿತ್ರವಾದ ಪರಿಸ್ಥಿತಿಗೆ ಬಂದುನಿಂತಿದೆ ಎನ್ನಲಾಗಿತ್ತು.

ಹಾಗೆಂದೇ, ಆಂತರಿಕ ಚುನಾವಣೆಗೆ ಮುನ್ನ ಬಿಎಲ್ ಶಂಕರ್, ಕೃಷ್ಣ ಬೈರೇಗೌಡರಂತಹ ಘಟಾನುಘಟಿಗಳ ಹೆಸರನ್ನು ತೇಲಿಬಿಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರೆಲ್ಲಾ ಆಂತರಿಕ ಚುನಾವಣಾ ಕಣದಿಂದ ದೂರ ಸರಿಯುವಂತಾಗಿದೆ. ಇದು ಪಕ್ಷದ ತಂತ್ರವೋ ಅಥವಾ ಬೇರೆಯದೆ ತಂತ್ರ ಅಡಗಿದೆಯಾ? ತಕ್ಷಣಕ್ಕೆ ತಿಳಿದುಬಂದಿಲ್ಲ.

ಈ ಮಧ್ಯೆ, ಮುಂದಿನ ಗುರುವಾರದಂದು (ಮಾರ್ಚ್ 13) ನಡೆಯಲಿರುವ ಆಂತರಿಕ ಚುನಾವಣೆಗೆ (primaries -internal election) ನಿನ್ನೆ ನಾಮಪತ್ರಗಳ ಸಲ್ಲಿಕೆಯಾಗಿದ್ದು, ನಾಲ್ಕು ಮಂದಿಯಷ್ಟೇ ಕಣದಲ್ಲಿ ಉಳಿದಿದ್ದಾರೆ. ಅಭ್ಯರ್ಥಿಗಳನ್ನು ನೋಡಿದರೆ, ಬಿಜೆಪಿಯ ಸದಾನಂದ ಗೌಡರನ್ನು ಎದುರಿಸಲು ಗೌಡರ ಪ್ರಾಬಲ್ಯವಿರುವ ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ ಲಘುವಾಗಿ ಪರಿಗಣಿಸಿದೆಯಾ? ಎಂಬ ಅನುಮಾನ ಮೂಡಿದೆ.

ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ, ಅಮೆರಿಕದಲ್ಲಿ ಭಾರತೀಯ ದೂತವಾಸದ ಅಧಿಕಾರಿಯಾಗಿದ್ದ ಆರತಿ ಕೃಷ್ಣ ಅವರ ನಾಮಪತ್ರವನ್ನು ಕಾಯ್ದಿರಿಸಿ, ಮಾಜಿ ಸಂಸದ ಸಿ ನಾರಾಯಣಸ್ವಾಮಿ, ಡಾ. ಜಿ ಪರಮೇಶ್ವರ ಅವರ ರಾಜಕೀಯ ಕಾರ್ಯದರ್ಶಿ ಜಿಸಿ ಚಂದ್ರಶೇಖರ್, ಮಾಜಿ ಶಾಸಕ ನೆಲ ನರೇಂದ್ರಬಾಬು ಮತ್ತು ಬೆಂಗಳೂರು IIM ಪ್ರೊ. ಎಂವಿ ರಾಜೀವ್ ಗೌಡ ಮಾತ್ರ ಕಣದಲ್ಲಿದ್ದಾರೆ. ಶಿಕ್ಷಣ ತಜ್ಞ ರಾಜೀವ್ ಗೌಡ ಅವರು ಮಾಜಿ ಸ್ಪೀಕರ್ ಎಂವಿ ವೆಂಕಟಪ್ಪ ಅವರ ಪುತ್ರ. ಈ ನಾಲ್ವರ ಪೈಕಿ ಅಂತಿಮವಾಗಿ ಪಕ್ಷದ ಪರ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಮಾರ್ಚ್ 13ಕ್ಕೆ ಇತ್ಯರ್ಥವಾಗಲಿದೆ.

'ಸ್ಥಳೀಯರಾದ' ಬಿಎಲ್ ಶಂಕರ್ ಅಸಲಿಗೆ ಆಂತರಿಕ ಚುನಾವಣೆ ಬಗ್ಗೆಯೇ ಅಪಸ್ವರವೆತ್ತಿದ್ದರು. ಈ ಮೊದಲು ಕೆಪಿಸಿಸಿ ಚುನಾವಣಾ ಸಮಿತಿಯು ಹೈಕಮಾಂಡಿಗೆ ಸಲ್ಲಿಸಿದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಬಿಎಲ್ ಶಂಕರ್ ಅವರ ಹೆಸರೊಂದೇ. ಅದಾದನಂತರ ಆಂತರಿಕ ಚುನಾವಣೆ ಪ್ರಸ್ತಾಪವಾದಾಗ ಅಸಮಾಧಾನಗೊಂಡ ಶಂಕರ್, primariesನಿಂದ ದೂರ ಸರಿದರು.

ಇನ್ನು, ಮತ್ತೊಬ್ಬ 'ಸ್ಥಳೀಯ' ಕೃಷ್ಣ ಬೈರೇಗೌಡರನ್ನು ಕಣಕ್ಕಿಳಿಯುವಂತೆ ಖುದ್ದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜ್ಯ ನಾಯಕರು ದುಂಬಾಲು ಬಿದ್ದಿದ್ದರು. ಆದರೆ ರಾಹುಲ್ ಗಾಂಧಿ ಅವರ blue-eyed boy ಕೃಷ್ಣ, ನಯವಾಗಿ ರಾಜ್ಯ ನಾಯಕರ ಬೇಡಿಕೆಯನ್ನು ತಿರಸ್ಕರಿಸಿದರು. ಹಾಗಾಗಿ ಈಗ ಕಣದಲ್ಲಿ ಉಳಿದವರೇ ಕ್ಷೇತ್ರವನ್ನು ಪ್ರತಿನಿಧಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಗಮನಾರ್ಹವೆಂದರೆ ಮೂರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಂತಯ್ಯ ಅವರ ಮೊಮ್ಮಗ ಕೆಂಗಲ್ ಶ್ರೀಪಾದ ರೇಣು, ಮಾಜಿ ಐಪಿಎಸ್ ಕೆಸಿ ರಾಮಮೂರ್ತಿ, ನೇಹಾ ಪಾಟೀಲ್ ಅವರ ಉಮೇದುವಾರಿಕೆಯನ್ನು ಪಕ್ಷವು ತಾಂತ್ರಿಕ ಕಾರಣಗಳ ನೆಪವೊಡ್ಡಿ ತಿರಸ್ಕರಿಸಿದೆ. ಅಂತಿಮವಾಗಿ ಜಿಸಿ ಚಂದ್ರಶೇಖರ್, ನೆಲ ನರೇಂದ್ರಬಾಬು ಮತ್ತು ಸಿ ನಾರಾಯಣಸ್ವಾಮಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ಜಿಸಿ ಚಂದ್ರಶೇಖರ್: ಸ್ಥಳೀಯ ನಿವಾಸಿ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಅವರು ಕಾರ್ಯಕರ್ತರು ಮತ್ತು ಮುಖಂಡರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜತೆಗೆ, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿಯಾಗಿ ಡಾ. ಜಿ ಪರಮೇಶ್ವರ ಅವರ ಒಲವನ್ನು ಸಹ ಸಂಪಾದಿಸಿದ್ದಾರೆ. ಹಾಗಾಗಿ, ಜಿಸಿ ಚಂದ್ರಶೇಖರ್ ಅವರು ಮೇಲುಗೈ ಸಾಧಿಸುವ ಲಕ್ಷಣಗಳಿವೆ.

ಇನ್ನು ಮಾಜಿ ಸಂಸದ ಸಿ ನಾರಾಯಣಸ್ವಾಮಿಗೆ ಸಿಎಂ ಸಿದ್ದು ಕೈಪಾಶೀರ್ವಾದ ಇದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣ ಬೈರೇಗೌಡರ ವಿರುದ್ಧ ಹೀನಾಯವಾಗಿ ಸೋತು ಮೂರನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದವರು. ಅದಾದನಂತರ ಕಾಂಗ್ರೆಸ್ ಕೈಹಿಡಿದರಾದರೂ ಮೂಲ ಕಾಂಗ್ರೆಸ್ಸಿಗರು ಇನ್ನೂ ನಾರಾಯಣಸ್ವಾಮಿಯತ್ತ ಹಸ್ತ ಚಾಚಿಲ್ಲ. ಇದು ನಾರಾಯಣಸ್ವಾಮಿಗೆ ಮುಳುವಾಗುವ ಸಂಭವ ಹೆಚ್ಚು.

ಇನ್ನು ನೆಲ ಬಾಬು ಸಹ ಕಳೆದ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಸ್ಥಳೀಯ ಜನಪ್ರಿಯ ನಾಯಕ. ಅವರು primariesನಲ್ಲಿ ಜಿಸಿ ಚಂದ್ರಶೇಖರ್ ಅವರಿಗೆ ಖಡಕ್ ಸ್ಪರ್ಧೆಯೊಡ್ಡುತ್ತಾರಾ? ಕಾದುನೋಡಬೇಕು.

English summary
Lok Sabha Polls 2014- Bangalore North Lok Sabha Congress ticket- 4 candidates to fight in internal election on March 13. Former MP C Narayanaswamy, former MLA N L Narendra Babu, IIM-B professor M V Rajeev Gowda and G C Chandrashekar, political secretary to KPCC chief, are the four candidates in the fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X