ಅಂಡರ್ ಗ್ರೌಂಡ್ ಪರಿಣಾಮ, ಮೆಟ್ರೋ ಮತ್ತಷ್ಟು ನಿಧಾನ
ಬೆಂಗಳೂರು ಸೆ. 23 : ಬೆಂಗಳೂರು ಮಹಾನಗರದ ಜನತೆಗೆ ಮೆಟ್ರೋ ರೈಲು ಸೇವೆ ಒದಗಿಸುವ ಜವಾಬ್ದಾರಿ ಹೊತ್ತುಕೊಂಡಿರುವ ಬಿಎಂಆರ್‌ಸಿಎಲ್ ಮೊದಲನೇ ಹಂತದ ಕಾಮಗಾರಿಗೆ ಸಂಬಂಧಿಸಿ ಮತ್ತೊಂದು ಡೆಡ್‌ಲೈನ್ ಮೀರುವ ಸಾಧ್ಯತೆಗಳು ನಿಚ್ಚಳವಾಗುತ್ತಿದೆ.
42.3 ಕಿಮೀ ವ್ಯಾಪ್ತಿಯ ಮೊದಲ ಹಂತದ ಕೆಲಸ ನಿಗದಿಯಂತೆ 2015ರ ಸೆಪ್ಟಂಬರ್‌ವೊಳಗೆ ಮುಕ್ತಾಯವಾಗಬೇಕಿತ್ತು. ಆದರೆ ಅದು 2016ರ ಆರಂಭದಲ್ಲಿ ಅಂತ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.(2015ರ ಫೆಬ್ರವರಿಗೆ ಪೀಣ್ಯ-ನಾಗಸಂದ್ರ ಮೆಟ್ರೋ ಸಂಚಾರ)

ಕಳೆದ ಎರಡು ವರ್ಷದ ಹಿಂದೆಯೇ ಮುಕ್ತಾಯವಾಗಬೇಕಿದ್ದ ಕಾಮಗಾರಿಗೆ ಕೆಲ ಕಾರಣಗಳು ಹಿನ್ನಡೆ ತಂದಿದ್ದವು. ಅಂಡರ್ ಗ್ರೌಂಡ್ ಹಳಿ ನಿರ್ಮಾಣ ಬಹಳ ಸಮಯ ತೆಗೆದುಕೊಂಡಿದ್ದು ಡೆಡ್‌ಲೈನ್ 2016ಕ್ಕೆ ಹೋಗಿದೆ. ಅಲ್ಲದೇ 11,609 ಕೋಟಿ ರೂಪಾಯಿ ಇದ್ದ ಅಂದಾಜು ವೆಚ್ಚ 13,800 ಕೋಟಿಗೆ ತಲುಪಿದೆ.
ಉತ್ತರ- ದಕ್ಷಿಣ ಕಾರಿಡಾರ್ ನಿರ್ಮಾಣದ ವೇಳೆ ಸುರಂಗ ಕೊರೆಯುವ ಯಂತ್ರ ಕೈಕೊಟ್ಟಿತು. ಹಾಗಾಗಿ ಇದನ್ನು ಪೂರೈಸಲು 2016 ವರೆಗೆ ಸಮಯ ಹಿಡಿಯಬಹುದು. ಆದರೆ ಪೂರ್ವ-ಪಶ್ಚಿಮ ಮಾರ್ಗ 2015ರ ಮಾರ್ಚ್ ಗೆ ಕೊನೆಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಇಂಜಿನಿಯರ್ ಬಿ.ಜಿ.ಮಲ್ಯ ತಿಳಿಸಿದರು.(ಮೆಟ್ರೋ ಕಾಮಗಾರಿ, ಚಿಕ್ಕಪೇಟೆಯಲ್ಲಿ ಜನರ ಸ್ಥಳಾಂತರ)
ಬೆಂಗಳೂರು ಮೆಟ್ರೋ 'ಸ್ವದೇಶಿಯ ಸರಳ ಸಂಚಾರ' ಕುರಿತು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, ಮೊದಲನೆ ಹಂತದ ಕೆಲಸ ಇನ್ನು ಬಾಕಿಯಿದ್ದರೂ ಏರಡನೇ ಹಂತದ ಪ್ರಾಥಮಿಕ ಯೋಜನೆಗಳು ಜಾರಿಯಾಗಿವೆ ಎಂದು ತಿಳಿಸಿದರು.
2007ರಲ್ಲಿ ಆರಂಭವಾದ ಮೆಟ್ರೋ ಕಾಮಗಾರಿ ಕೆಲ ಹಂತಗಳನ್ನು ಪೂರೈಸಿದೆ. ಮಹಾತ್ಮ ಗಾಂಧಿ ರಸ್ತೆ-ಬೈಯಪ್ಪನಹಳ್ಳಿ ಮತ್ತು ಸಂಪಿಗೆ ರಸ್ತೆ-ಪೀಣ್ಯ ಮಾರ್ಗಗಳು ಮಾತ್ರ ಸಂಚಾರ ನಡೆಸುತ್ತಿವೆ. ಪೀಣ್ಯದ 3ಬಿ ಮತ್ತು ತೂಮಕೂರು ರಸ್ತೆ ನಡುವೆ ಮುಂದಿನ ತಿಂಗಳು ಪ್ರಯೋಗಾತ್ಮಕ ಸಂಚಾರ ನಡೆಯಲಿದೆ. 2.5 ಕಿಮೀ ಉದ್ದದ ಟ್ರ್ಯಾಕ್ ನಿರ್ಮಾಣ ಮುಕ್ತಾಯವಾಗಿದೆ ಎಂದು ಮಲ್ಯ ತಿಳಿಸಿದರು.
ಒಟ್ಟಿನಲ್ಲಿ ಶೇ.86 ರಷ್ಟು ಕೆಲಸ ಮುಕ್ತಾಯವಾಗಿದ್ದು ಈಗಾಗಲೇ 11,870 ಕೋಟಿ ರೂ. ವೆಚ್ಚವಾಗಿದೆ. ಮೊದಲನೇ ಹಂತ ಸಂಪೂರ್ಣವಾದರೆ ವಾಣಿಜ್ಯ ಬೆಳವಣಿಗೆಗೆ ತುಂಬಾ ಅನುಕೂಲವಾಗಲಿದೆ. ಈಗ ಪ್ರತಿದಿನ 25 ಸಾವಿರ ಜನ ಪ್ರಯಾಣಿಸುತ್ತಿದ್ದು ಅದು ಒಂದು ಮಿಲಿಯನ್ ತಲುಪಲಿದೆ ಎಂದು ಹೇಳಿದರು.

ಎರಡನೇ ಹಂತದ ಹೈಲೈಟ್ಸ್
ಆರ್.ವಿ.ರಸ್ತೆಯನ ಮೆಟ್ರೋ ನಿಲ್ದಾಣ ಮತ್ತು ಬೊಮ್ಮಸಂದ್ರ, ಗೊಟ್ಟಿಗೆರೆ ಮತ್ತು ನಾಗವಾರ ನಡುವೆ ಎರಡು ಟ್ರ್ಯಾಕ್ ನಿರ್ಮಾಣ ಮಾಡಲಾಗುವುದು. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ಮಾರ್ಗ ವಿಸ್ತರಣೆ, ಕೆಂಗೇರಿಯಿಂದ ಮೈಸೂರು ರಸ್ತೆ ಟರ್ಮಿನಲ್ ವರೆಗೆ ಮಾರ್ಗ ವಿಸ್ತರಣೆ ಮಾಡಲಾಗುವುದು.
ಉತ್ತರ-ದಕ್ಷಿಣ ವಿಭಾಗಕ್ಕೆ ಸಂಬಂಧಿಸಿದ ಪುಟ್ಟೇನಹಳ್ಳಿಯಿಂದ ಅಂಜನಾಪುರ, ನಾಗಸಂದ್ರದಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದವರೆಗೆ ಮಾರ್ಗ ವಿಸ್ತರಿಸಲಾಗುವುದು ಎಂದು ಮಲ್ಯ ಮಾಹಿತಿ ನೀಡಿದರು.
ಮೂರನೇ ಹಂತದಲ್ಲಿ ಒಂದು ಮತ್ತು ಎರಡನೇ ಹಂತದ ಮಾರ್ಗ ಜೋಡಣೆ, ಮಾಗಡಿ ರಸ್ತೆ ಮತ್ತು ರಿಂಗ್ ರೋಡ್‌ಗಳಿಗೂ ಸಂಪರ್ಕ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು.












Click it and Unblock the Notifications