ಬೆಂಗಳೂರು ವಿದ್ಯಾರ್ಥಿಗಳಿಂದ ರಾಜಕೀಯ ಪ್ರಣಾಳಿಕೆ
ಬೆಂಗಳೂರು, ಏ. 9: ಲೋಕಸಭಾ ಚುನಾವಣೆಯತ್ತ ದಾಪುಗಾಲು ಹಾಕಿರುವ ಬಹುತೇಕ ರಾಜಕೀಯ ಪಕ್ಷಗಳು ತನ್ನ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಆದರೆ ರಾಜಧಾನಿ ಬೆಂಗಳೂರಿನಲ್ಲಿರುವ ಸುಮಾರು 50 ಕಾಲೇಜುಗಳು ವಿದ್ಯಾರ್ಥಿಗಳು ಕಣದಲ್ಲಿರುವ ರಾಜಕೀಯ ಪಕ್ಷಗಳ ನೇತಾರರಿಗೆ ತಮ್ಮ ವತಿಯಿಂದ ಪ್ರಣಾಳಿಕೆಯೊಂದನ್ನು ಸಲ್ಲಿಸಿದೆ.
ತಮ್ಮ ಬೇಕು ಬೇಡಗಳ ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿರುವ ಈ ಕಾಲೇಜು ವಿದ್ಯಾರ್ಥಿಗಳ ಸಮೂಹವು ಸಾಮೂಹಿಕ ಪ್ರಣಾಳಿಕೆಯನ್ನು ಎಲ್ಲ ಅಭ್ಯರ್ಥಿ/ಪಕ್ಷಗಳಿಗೂ ಸಲ್ಲಿಸಿವೆ.
ಮುಖ್ಯವಾಗಿ ಮಹಿಳೆಯರ ವಿರುದ್ಧ ಹಿಂಸಾಚಾರಗಳು ಹೆಚ್ಚುತ್ತಿದ್ದು, ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಎಲ್ಲ ರಾಜಕೀಯ ಪಕ್ಷಗಳನ್ನೂ ಕೋರಿದ್ದಾರೆ. ರಾತ್ರಿ ವೇಳೆಯೂ ಕಾರ್ಯನಿರ್ವಹಿಸುವಂತಹ ಸಿಸಿಟಿವಿ ಕ್ಯಾಮರಾಗಳನ್ನು ನಗರದ ನಾನಾ ಭಾಗಗಳಲ್ಲಿ ಅಳವಡಿಸುವಂತೆ ಪ್ರಣಾಳಿಕೆಯಲ್ಲಿ ಆಗ್ರಹಿಸಿದ್ದಾರೆ.
(ನಾನಾ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಹೀಗಿವೆ)

ಶಿಕ್ಷಣ ಸಂಸ್ಥೆಗಳು ಡೊನೇಶನ್ ಪಡೆಯದಂತೆ ನಿರ್ಬಂಧ ಹೇರಬೇಕು. ಅಗತ್ಯ ವಿದ್ಯಾರ್ಥಿಗಳಿಗೆ ಮಾತ್ರ ಸರಕಾರ ಮೀಸಲಾತಿ ಕಲ್ಪಿಸುವಂತಾಗಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಚುನಾವಣೆ ಮುಗಿದು ಸಂಸದರಾಗಿ ಆಯ್ಕೆಯಾದ ನಂತರ ಈ ಮೇಲಿನ ಅಂಶಗಳತ್ತ ಆದ್ಯವಾಗಿ ಗಮನ ಹರಿಸಬೇಕು ಎಂದೂ ಕೋರಿದ್ದಾರೆ. ಈ ಭರವಸೆಗಳು ಈಡೇರದಿದ್ದರೆ ಮರು ಚುನಾವಣೆಯ ಮೊರೆಹೋಗಬೇಕು ಎಂದು ವಿದ್ಯಾರ್ಥಿಗಳು ಸೂಚಿಸಿದ್ದಾರೆ.
ಮುಖ್ಯವಾಗಿ, ಚುನಾವಣಾ ನಿಧಿಯ ಬಗ್ಗೆಯೂ ಗಮನಹರಿಸಿರುವ ವಿದ್ಯಾರ್ಥಿಗಳು, ಚುನಾವಣಾ ಫಂಡ್ ಲೆಕ್ಕವನ್ನು ಮಾಹಿತಿ ಹಕ್ಕು ಕಾಯಿದೆಯಡಿ ತರಬೇಕು. ಚುನಾವಣಾ ನಿಧಿಯ ಬಗ್ಗೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಬೇಕು ಎಂದೂ ವಿದ್ಯಾರ್ಥಿಗಳು ಪ್ರಣಾಳಿಕೆಯ ಮೂಲಕ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.


Click it and Unblock the Notifications
