ಕಳ್ಳನ ಬಂಧನ: 32.50 ಲಕ್ಷ ಮೌಲ್ಯದ ಮಾಲು ವಶ
ಬೆಂಗಳೂರು, ಜು.12: ಸಿಟಿ ಮಾರ್ಕೆಟ್ ಪೊಲೀಸರು ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸಿ, 32.50 ಲಕ್ಷ ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರಿನ ಮಂಡಿಪೇಟೆ ನಿವಾಸಿ ಸೈಯದ್ ಅಹಮ್ಮದ್ ಬಿನ್ ಬಾಷಾ ಸಾಬ್(29) ಬಂಧಿತ ಆರೋಪಿ. ಬಂಧಿತನಿಂದ 32.50 ಲಕ್ಷ ಮೌಲ್ಯದ 830 ಗ್ರಾಂ ಚಿನ್ನಾಭರಣ, 750 ಗ್ರಾಂ ಬೆಳ್ಳಿ ಆಭರಣಗಳು ಮತ್ತು 2 ಕಾರು ಹಾಗೂ 2 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಈ ಹಿಂದೆ ಬೆಂಗಳೂರು ನಗರದ ಸಿಟಿ ಮಾರ್ಕೆಟ್, ಅಶೋಕನಗರ, ಮೈಕೋಲೇಔಟ್, ತ್ಯಾಗರಾಜನಗರ ಮತ್ತು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಪೊಲೀಸ್ ಠಾಣೆಗಳ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಈತ ಮತ್ತೆ ಕಳ್ಳತನ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯು ಬಿಎಂಟಿಸಿ ಪ್ರಯಾಣಿಕರಿಂದ ಮತ್ತು ಮನೆಗೆ ನುಗಿ ಕಳ್ಳತನ ಮಾಡುತ್ತಿದ್ದು ಈತನ ಬಂಧನದಿಂದಾಗಿ ಸಿಟಿ ಮಾರ್ಕೆಟ್, ಚಿಕ್ಕಪೇಟೆ ,ಚಂದ್ರಲೇಔಟ್, ಸುಬ್ರಮಣ್ಯನಗರ, ವಿಜಯನಗರ ಮತ್ತು ತುಮಕೂರಿನ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 12 ಪ್ರಕರಣಗಳು ಪತ್ತೆಯಾಗಿದೆ.
ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ವಿ. ನಾರಾಯಣಸ್ವಾಮಿ, ಪಿಎಸ್‍ಐ ಪ್ರವೀಣ್ ಸಿ. ಯಲಿಗಾರ್, ಸಿಬ್ಬಂದಿಗಳಾದ ನಾಗಪ್ಪ, ಪ್ರಕಾಶ್, ರಾಜಣ್ಣ, ಸುರೇಶ್, ಮಧು, ಮತ್ತು ಅಶೋಕ್ ತಂಡ ಆರೋಪಿಯನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.












Click it and Unblock the Notifications