ಮಿಡ್ ನೈಟ್ ಬಸ್ ಸಂಚಾರಕ್ಕೆ ಬಿಎಂಟಿಸಿ ಅಸ್ತು
ಬೆಂಗಳೂರು, ಮೇ 3: ಪ್ರಯಾಣಿಕರ ವೇದಿಕೆಯೊಂದು ವಿನೂತನ ರೀತಿಯಲ್ಲಿ ಸಲ್ಲಿಸಿದ ಬೇಡಿಕೆಗೆ ಮಣೆ ಹಾಕಿರುವ ಬಿಎಂಟಿಸಿ ಸಂಸ್ಥೆ ಮುಂದಿನ ವಾರದಿಂದ ಮಧ್ಯರಾತ್ರಿ ದಾಟಿದ ನಂತರವೂ ರಾಜಧಾನಿಯಲ್ಲಿ ಬಸ್ಸುಗಳನ್ನು ಓಡಿಸಲು ಒಪ್ಪಿಕೊಂಡಿದೆ.
ರಾಜಧಾನಿ ಇತ್ತೀಚಿನ ವರ್ಷಗಳಲ್ಲಿ ಮಿಡ್ ನೈಟ್ ನಂತರವೂ ನಿದ್ದೆಗೆ ಜಾರುತ್ತಿಲ್ಲ. ಇಲ್ಲಿನ ಜನ ಕೆಲಸ ಕಲಾಪದಲ್ಲಿ ತೊಡಗಿರುತ್ತಾರೆ. ಅಂತಹವರಿಗೆ ಕೆಲಸ ಮುಗಿದ ಮೇಲೆ ತಡ ರಾತ್ರಿ ಮನೆಗೆ ತೆರಳುವುದಕ್ಕೆ ಸಾರ್ವಜನಿಒಕ ಸಂಚಾರ ವ್ಯವಸ್ಥೆಯಿಲ್ಲದೆ ತೊಂದರೆಯಾಗುತ್ತಿದೆ. ಹಾಗಾಗಿ ತಕ್ಷಣ ಬಸ್ ವ್ಯವಸ್ಥೆ ಮಾಡಬೇಕು ಎಂದು change.org ಇತ್ತೀಚೆಗೆ ಮನವಿ ಸಲ್ಲಿಸಿತ್ತು.

ಏನಾಗಿತ್ತೆಂದರೆ ರಾತ್ರಿ 11.30ವರೆಗೆ ಬಸ್ ಸಂಚಾರವನ್ನು ಜಾರಿಯಲ್ಲಿಟ್ಟಿರುತ್ತೇವೆ ಎಂದು ಬಿಎಂಟಿಸಿ ಕಳೆದ ವರ್ಷ ಜುಲೈನಲ್ಲಿ ಹೇಳಿತ್ತು. ಬಿಎಂಟಿಸಿ ಹೇಳಿದಂತೆ ಸಂಚಾರವನ್ನು ಮುಂದುವರಿಸಿತ್ತಾದರೂ ಜನದಟ್ಟಣೆ ಇಲ್ಲದ ಭಾಗದಲ್ಲಿ ರಾತ್ರಿ 10 ಗಂಟೆಗೆ ಸಂಚಾರವನ್ನು ನಿಲ್ಲಿಸುತ್ತಿದೆ. ಇದರಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ದುಬಾರಿ ಬೆಲೆ ತೆತ್ತು ಆಟೋದಲ್ಲಿ ಮನೆಗೆ ಬರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಆದರೆ ಈಗ ಆನ್‌ಲೈನ್‌ನಲ್ಲಿ ಶಶಾಂಕ್ ಕುಮಾರ್ ಎಂಬುವವರು ಸಲ್ಲಿಸಿದ್ದ ಮರುಬೇಡಿಕೆಗೆ ಪೂರಕವಾಗಿ ಸ್ಪಂದಿಸಿರುವ BMTC ವ್ಯವಸ್ಥಾಪಕ ನಿರ್ದೇಶಕ ಪರ್ವೇಜ್ ಅಂಜುಂ ಅವರು ತಡ ರಾತ್ರಿ 1 ಗಂಟೆಯವರೆಗೂ ಬೆಂಗಳೂರಿನಲ್ಲಿ ಬಸ್ಸುಗಳನ್ನು ಓಡಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಶಶಾಂಕ್ ಅವರ ಪ್ರಯತ್ನಕ್ಕೆ ಆನ್‌ಲೈನ್‌ನಲ್ಲಿ ಸುಮಾರು 15,000 ಮಂದಿ ಸ್ಪಂದಿಸಿದ್ದರು. ಈ ಬೇಡಿಕೆಗೆ ಅನುಗುಣವಾಗಿ 8 ಬಸ್ಸುಗಳನ್ನು ರಾತ್ರಿ ಸಂಚಾರಕ್ಕೆ ಬಿಡಲು ನಿರ್ಧರಿಸಿರುವುದಾಗಿ ಪರ್ವೇಜ್ ಅಂಜುಮ್ ಹೇಳಿದ್ದಾರೆ. ಇದಕ್ಕಾಗಿ ಈಗ ಸಂಜೆ 5.30ರಿಂದ ರಾತ್ರಿ 1 ಗಂಟೆಯವರೆಗೂ ಹೊಸ ಪಾಳಿ ವ್ಯವಸ್ಥೆ ಜಾರಿಗೊಳಿಸುವುದಾಗಿ ಅವರು ತಿಳಿಸಿದ್ದಾರೆ. ಮೆಜಿಸ್ಟಿಕ್ ಮತ್ತು ಶಿವಾಜಿನಗರ ಬಸ್ ನಿಲ್ದಾಣಗಳಿಂದ ನಿರ್ದಿಷ್ಟ ಮಾರ್ಗಗಳಲ್ಲಿ ಈ ಬಸ್ಸುಗಳು ಸಂಚರಿಸಲಿವೆ.


Click it and Unblock the Notifications
