ಶುಕ್ರವಾರ ವಾಟಾಳ್ ರಿಂದ ಯಳ್ಳೂರು ಚಲೋ
ಬೆಂಗಳೂರು, ಜು. 31 : ಕರ್ನಾಟಕದಲ್ಲಿ ನಡೆಯುತ್ತಿರುವ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಕರೆಯಲಾಗಿರುವ ಬೆಂಗಳೂರು ಬಂದ್‌ನಲ್ಲಿ ಅತ್ಯಾಚಾರದ ವಿರುದ್ಧದ ದನಿ ಕ್ಷೀಣವಾಗಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಮರಾಠಿಗರು ನಡೆಸುತ್ತಿರುವ ರಂಪಾಟದ ವಿರುದ್ಧ ತಿರುಗಿದೆ.
ಬೆಂಗಳೂರು ಬಂದನ್ನು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕರೆದಿರುವುದರಿಂದ ಸಹಜವಾಗಿ ಕನ್ನಡ ಧ್ವಜಗಳು ಬೆಂಗಳೂರಿನಾದ್ಯಂತ ಕಲರವ ಎಬ್ಬಿಸಿವೆ ಮತ್ತು ಬೆಳಗಾವಿ ಜಿಲ್ಲೆಯ ಯಳ್ಳೂರು ಮಹಾರಾಷ್ಟ್ರಕ್ಕೆ ಸೇರಿದ್ದೆಂದು ಕ್ಯಾತೆ ತೆಗೆದಿರುವ ಮರಾಠಿಗರ ವಿರುದ್ಧ ಧಿಕ್ಕಾರದ ಘೋಷಣೆಗಳು ಮೆರವಣಿಗೆಯಲ್ಲಿ ಕೇಳಿಬರುತ್ತಿವೆ.
ಬೆಂಗಳೂರಿನಿಂದ ಬೆಳಗಾವಿಗೆ ವಿಮಾನದಲ್ಲಿ ಹೋಗಿ, ಬೆಳಗಾವಿಯಿಂದ 6 ಕಿ.ಮೀ. ದೂರದಲ್ಲಿರುವ ಯಳ್ಳೂರಿನವರೆಗೆ ಆಗಸ್ಟ್ 1ರಂದು ಶುಕ್ರವಾರ 'ಯಳ್ಳೂರು ಚಲೋ' ಜಾಥಾ ಮಾಡುವ ನಿರ್ಧಾರವನ್ನು ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ, ಬೆಂಗಳೂರು ಬಂದ್ ನಡುವೆಯೇ ಘೋಷಿಸಿದರು. [ಬೆಂಗಳೂರು ಬಂದ್ ಸಮಗ್ರ ನೋಟ]

ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿರುವ, ಪರಮ ಪಾಪಿಗಳಾದ ಮಹಾರಾಷ್ಟ್ರ ಏಕೀಕರಣ ಸಮಿತಿ, ಶಿವಸೇನೆಯನ್ನು ನಿಷೇಧಿಸಬೇಕು ಮತ್ತು ಭಾರತ ಭದ್ರತಾ ಕಾಯ್ದೆಯಡಿ ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿರುವ ಮರಾಠಿಗರನ್ನು ಬಂಧಿಸಬೇಕು ಎಂದು ವಾಟಾಳ್ ನಾಗರಾಜ್ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದರು. [ಬೆಂಗಳೂರು ಬಂದ್ ಚಿತ್ರಗಳು]
ಯಳ್ಳೂರು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದೆಂದು ನಾಮಫಲಕ ನಿರ್ಮಿಸಿದ್ದರಿಂದ ಉದ್ಭವವಾಗಿರುವ ಕನ್ನಡ ಮತ್ತು ಮರಾಠಿ ಭಾಷಾ ಕಲಹ ತರಾಕಕ್ಕೇರಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಖಾನಾಪುರ ಮುಂತಾದ ಕಡೆಗಳಲ್ಲಿ ನಿಷೇಧಾಜ್ಞೆ ಸಡಿಲಿಸಲಾಗಿದೆಯಾದರೂ ಯಳ್ಳೂರಿನಲ್ಲಿ ನಿಷೇಧಾಜ್ಞೆ ಇನ್ನೂ ಮುಂದುವರಿದಿದೆ.
ಈ ನಡುವೆ, ಕರ್ನಾಟಕದಲ್ಲಿ ಮರಾಠಿ ವಿರೋಧಿ ಧೋರಣೆ ಮತ್ತು ಮರಾಠಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ನಿಲ್ಲಿಸದಿದ್ದರೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮಾದರಿಯಲ್ಲಿ ಪ್ರತಿದಾಳಿ ನಡೆಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಣೆ ಘಟಕದ ನಾಯಕ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications