ಬೆಂಗಳೂರು : ಪದ್ಮನಾಭನಗರದಲ್ಲಿ ದರೋಡೆ ಮಾಡಿದವರು ಸಿಕ್ಕಿದ್ರು
ಬೆಂಗಳೂರು, ಮೇ 08 : ಬೆಂಗಳೂರಿನ ಪದ್ಮನಾಭನಗರದಲ್ಲಿ ಮನೆಗೆ ನುಗ್ಗಿ ಮಾಲೀಕರ ಕೈ-ಕಾಲು ಕಟ್ಟಿಹಾಕಿ ಹಣ ಮತ್ತು ಚಿನ್ನಾಭರಣ ದೋಚಿದ್ದ ಐದು ಜನರ ಗುಂಪನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಮನೆಯ ಮಾಲೀಕರಿಗೆ ಪರಿಚಯವಿದ್ದ ಮಹಿಳೆಯೇ ಈ ಸಂಚು ರೂಪಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಕದಿರೇಶ್, ಚರಣ್, ಉದಯ್, ಸುರೇಶ್, ನಿಖಿತಾ ಅವರನ್ನು ಬಂಧಿಸಿರುವ ಪೊಲೀಸರು 1 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ಮತ್ತು ಚಾಕುವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. [ಬೆಂಗಳೂರಿನಲ್ಲಿ ಅಮೀರ್ ಖಾನ್ ಬಂಧನ]

ಘಟನೆ ವಿವರ : ಪದ್ಮನಾಭನಗರದ ಆರ್.ಕೆ.ಲೇಔಟ್ 8ನೇ ಮೈನ್‌ನ ನಿವಾಸಿ ಡಿ.ಬಿ.ಚಂದ್ರು (49) ಅವರ ಮನೆಗೆ ಏ.24ರ ರಾತ್ರಿ 9.30ರ ಸುಮಾರಿಗೆ ನುಗ್ಗಿದ್ದ ಗುಂಪು, ಅವರ ಕೈ ಕಾಲು ಕಟ್ಟಿಹಾಕಿ ಹಣ ಮತ್ತು ಚಿನ್ನಾಭರಣ ದೋಚಿತ್ತು. [ಬೆಂಗಳೂರಿಗೂ ಕಾಲಿಟ್ಟಿತೆ ರಕ್ತ ಚಂದನ ಕಳ್ಳ ಸಾಗಣೆ?]
ಚಂದ್ರು ಅವರ ಕುಟುಂಬದವರು ಪರ ಊರಿಗೆ ಹೋಗಿದ್ದನ್ನು ತಿಳಿದಿದ್ದ ಪರಿಚಯಸ್ಥರಾದ ನಿಖಿತಾ ಅವರು ಈ ದರೋಡೆಯ ಸಂಚು ರೂಪಿಸಿದ್ದರು. ಕದಿರೇಶ್, ಚರಣ್ ಮುಂತಾದವರಿಗೆ ಮನೆಯನ್ನು ತೋರಿಸಿ ಏ.24ರಂದು ದರೋಡೆ ಮಾಡಲು ತೀರ್ಮಾನಿಸಿದ್ದರು.

ಅಂದು ರಾತ್ರಿ 9.30ರ ಸುಮಾರಿಗೆ ಮನೆಗೆ ನುಗ್ಗಿದ ಗುಂಪು ಚಂದ್ರು ಅವರ ಕೈ-ಕಾಲು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ 2 ಉಂಗುರ, ಚೈನು, ವಾಚ್, ಮನೆಯಲ್ಲಿದ್ದ 50 ಸಾವಿರ ನಗದು, 100 ಯುಕೆ ಪೌಂಡ್ಸ್, ಹೆಚ್‌ಟಿಸಿ ಮೊಬೈಲ್ ಪೋನ್, ಸೋನಿ ಕ್ಯಾಮರಾವನ್ನು ದೋಚಿ ಪರಾರಿಯಾಗಿದ್ದರು. ಬನಶಂಕರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಎಸ್.ಲೋಕೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬನಶಂಕರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಚ್.ಎಸ್.ಜಗದೀಶ್ ಮುಂತಾದವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.












Click it and Unblock the Notifications