ಡಾ. ಅಯ್ಯಪ್ಪ ದೊರೆ ಹತ್ಯೆ; ಮತ್ತೆ ಮೂವರ ಬಂಧನ
ಬೆಂಗಳೂರು, ನವೆಂಬರ್ 01 : ಅಲಯನ್ಸ್ ವಿವಿ ವಿಶ್ರಾಂತ ಕುಲಪತಿ ಡಾ. ಅಯ್ಯಪ್ಪ ದೊರೆ ಹತ್ಯೆ ಪ್ರಕರಣಕ್ಕೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆ ಪ್ರಕರಣದ ಸಂಬಂಧ ಬಂಧಿತರಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನ ಆರ್. ಟಿ. ನಗರ ಪೊಲೀಸರು ಜೆ. ಸಿ. ನಗರದ ಮಂಜುನಾಥ್ (26), ಮುನಿರೆಡ್ಡಿಪಾಳ್ಯದ ಶ್ರೀನಿವಾಸ್ (18), ಆನೇಕಲ್ ಮಹೇಂದ್ರ (31) ಬಂಧಿತ ಆರೋಪಿಗಳು. ಇವರೆಲ್ಲಾ ಪ್ರಕರಣದ ಪ್ರಮುಖ ಆರೋಪಿ ಸೂರಜ್ ಸಿಂಗ್ ಸ್ನೇಹಿತರು.
ಆರ್. ಟಿ. ನಗರದ ಎಚ್. ಎಂ. ಟಿ. ಮೈದಾನದ ಬಳಿ ಅಕ್ಟೋಬರ್ 15ರಂದು ಡಾ. ಅಯ್ಯಪ್ಪ ದೊರೆ (52) ಹತ್ಯೆ ಮಾಡಲಾಗಿತ್ತು. ಹತ್ಯೆಗಾಗಿ ಅಲಯನ್ಸ್ ವಿವಿ ಕುಲಪತಿ ಸುಧೀರ್ ಅಂಗೂರ್ 1 ಕೋಟಿ ರೂ. ಸುಪಾರಿ ನೀಡಿದ್ದ. ಹತ್ಯೆ ನಡೆದ 24 ಗಂಟೆಯಲ್ಲಿಯೇ ಸುಧೀರ್ ಅಂಗೂರ್ ಮತ್ತು ಸೂರಜ್ ಸಿಂಗ್ ಬಂಧಿಸಲಾಗಿತ್ತು.

ಡಾ. ಅಯ್ಯಪ್ಪ ದೊರೆ ಹತ್ಯೆ ಪ್ರಕರಣದಲ್ಲಿ ಸುಧೀರ್ ಅಂಗೂರ್, ಸೂರಜ್ ಸಿಂಗ್ ಪ್ರಮುಖ ಆರೋಪಿಗಳು. ಫಯಾಜ್, ಗಣೇಶ್, ಮಂಜು ಸೇರಿದಂತೆ ಇದುವರೆಗೂ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಇನ್ನೂ ಮುಂದುವರೆದಿದೆ.
ಸುಧೀರ್ ಅಂಗೂರ್ ಡಾ. ಅಯ್ಯಪ್ಪ ದೊರೆಗೆ 9 ಕೋಟಿ ರೂ. ನೀಡಬೇಕಾಗಿತ್ತು. ಇದಕ್ಕಾಗಿ ಅಯ್ಯಪ್ಪ ಬೇಡಿಕೆ ಇಟ್ಟಿದ್ದರು. 2.5 ಕೋಟಿ ರೂ.ಗಳನ್ನು ಚೆಕ್ ಮೂಲಕ ಸುಧೀರ್ ನೀಡಿದ್ದರು. ಉಳಿದ ಹಣಕ್ಕಾಗಿ ಅಯ್ಯಪ್ಪ ಮತ್ತೆ ಬೇಡಿಕೆ ಇಟ್ಟಾಗ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು.
ಅಲಯನ್ಸ್ ವಿವಿಯ ನೌಕರನಾಗಿದ್ದ ಸೂರಜ್ ಸಿಂಗ್‌ಗೆ ಡಾ. ಅಯ್ಯಪ್ಪ ದೊರೆ ಮತ್ತು ಡಾ. ಮಧುಕರ್ ಅಂಗೂರ್ ಹತ್ಯೆ ಮಾಡಲು 1 ಕೋಟಿ ರೂ. ಸುಪಾರಿ ನೀಡಲಾಗಿತ್ತು. ಡಾ. ಮಧುಕರ್ ಅಂಗೂರ್‌ಗೆ ಪೊಲೀಸ್ ಭದ್ರತೆ ಇದ್ದ ಕಾರಣ ಹತ್ಯೆ ಮಾಡಲು ಸಾಧ್ಯವಾಗಿಲ್ಲ.












Click it and Unblock the Notifications