ನಮಗೆಲ್ಲಾ ದಸರಾ ಮುಗೀತು, ಪೌರ ಕಾರ್ಮಿಕರಿಗೆ ಹಬ್ಬ ಶುರುವಾಯಿತು
ಕಚೇರಿ, ಮನೆಬಾಗಿಲು, ಗಾಡಿಯನ್ನು ಸಿಂಗಾರಗೊಳಿಸಿದ್ದ ಸೇವಂತಿಗೆ, ಕನಕಾಂಬರ, ಬಾಳೆಕಂಬ, ದೃಷ್ಠಿ ತೆಗೆಯಲು ಬಳಸಿದ ಕುಂಬಳಕಾಯಿ, ತೆಂಗಿನಕಾಯಿ ಚೂರುಗಳು ರಸ್ತೆಪಾಲಾಗಿವೆ. ಆ ಮೂಲಕ, ಪೌರಕಾರ್ಮಿಕರಿಗೆ ದಸರಾ ಹಬ್ಬದ ಬಿಸಿ ಆರಂಭವಾಗಿದೆ.
ದಸರಾ ಪ್ರಮುಖವಾಗಿ ಆಚರಿಸುವ ಮೈಸೂರು, ಮಂಗಳೂರು, ಮಡಿಕೇರಿಗಳಲ್ಲಿ ವಿಜಯದಶಮಿ / ಜಂಬೂ ಸವಾರಿ ಮೆರವಣಿಗೆಯ ಮೂಲಕ 2017ರ ಸಾಲಿನ ದಸರಾ ಮುಕ್ತಾಯಗೊಂಡಿದೆ. ಜೊತೆಗೆ, ಕಚೇರಿ, ಮನೆಯಲ್ಲೂ ಆಯುಧಪೂಜೆ ಸಂಪನ್ನಗೊಂಡಿದೆ.
In Pics:ಮೈಸೂರು ದಸರಾದ ಅಂತಿಮ ದಿನದ ಚಿತ್ರಗಳನ್ನು ನೋಡಿ..!
ದುರ್ಗಾಷ್ಠಮಿಯ ದಿನದಿಂದ ಹಿಡಿದು, ವಿಜಯದಶಮಿಯ ದಿನದವರೆಗೆ, ಕಚೇರಿ ಮತ್ತು ಮನೆಯಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಮತ್ತು ತಾರಾಬಲಕ್ಕೆ ಅನುಗುಣವಾಗಿ ಆಯುಧಪೂಜೆ ನೆರವೇರಿಸಿದ್ದಾಗಿದೆ. ಕಚೇರಿ, ಮನೆಬಾಗಿಲು, ಗಾಡಿಯನ್ನು ಸಿಂಗಾರಗೊಳಿಸಿದ್ದ ಸೇವಂತಿಗೆ, ಕನಕಾಂಬರ, ಬಾಳೆದಿಂಡು, ದೃಷ್ಠಿ ತೆಗೆಯಲು ಬಳಸಿದ ಕುಂಬಳಕಾಯಿ, ತೆಂಗಿನಕಾಯಿ ಚೂರುಗಳು ರಸ್ತೆಪಾಲಾಗಿವೆ.
ಆ ಮೂಲಕ, ಪೌರಕಾರ್ಮಿಕರಿಗೆ ದಸರಾ ಹಬ್ಬದ ಬಿಸಿ ಆರಂಭವಾಗಿದೆ. ದಿನಾ ಬಿಡದೇ ಬೀಳುತ್ತಿರುವ ಮಳೆಯಿಂದಾಗಿ ತಾಜ್ಯವನ್ನು ವಿಲೇವಾರಿ ಮಾಡುವುದು ಬಿಬಿಎಂಪಿಗೆ ದೊಡ್ಡ ಸವಾಲಾಗಿದೆ. ಹಸಿಕಸ, ಒಣಕಸ ಬೇರೆ ಮಾಡದೇ, ಖಾಲಿ ಜಾಗ ಸಿಕ್ಕರೆ ಸಾಕು ಎಲ್ಲಿಂದರಲ್ಲಿ ಬಿಸಾಕಿ ತಮ್ಮ ಮನೆ ಕ್ಲೀನ್ ಇದ್ದರೆ ಸಾಕು ಎನ್ನುವ ಪುಣ್ಯಾತ್ಮ ಜೀವಗಳಿಗೆ ಬೆಂಗಳೂರಿನಲ್ಲೇನು ಬರವಿಲ್ಲ.
ಸಂಕ್ರಾಂತಿ, ಯುಗಾದಿ, ವರಮಹಾಲಕ್ಷೀ, ಗಣೇಶಹಬ್ಬ, ದೀಪಾವಳಿ ಮುಂತಾದ ಹಬ್ಬಗಳನ್ನು ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದಾದರೂ, ಆಯುಧಪೂಜೆಯಷ್ಟು ತಾಜ್ಯಗಳು ಬೇರೆ ಹಬ್ಬದ ದಿನದಂದು ಬೀಳುವುದಿಲ್ಲ.
ಈ ಬಾರಿಯ ದಸರಾ ತುಸು ಮಂಕು, ಬಿಟ್ಟುಬಿಟ್ಟು ಬೀಳುತ್ತಿರುವ ಮಳೆಯಿಂದಾಗಿ, ಹೋದ ವರ್ಷಕ್ಕೆ ಹೋಲಿಸಿದರೆ ಬೆಲೆಗಳು ಕಮ್ಮಿಯೇ. ಮಾರಿಗೆ 160-170 ರೂಪಾಯಿದ್ದ ಬೆಲೆ, ಈ ಬಾರಿ 120-140ಕ್ಕೆ ಇಳಿದಿತ್ತು. ಇದೇ ರೀತಿ ಕುಂಬಳಕಾಯಿ, ಇತರ ಪೂಜಾವಸ್ತುಗಳ ಬೆಲೆಕೂಡಾ ಬೆಲೆ ಹೋದವರ್ಷದ ಬೆಲೆಯನ್ನು ಮೀರಿಸಲಿಲ್ಲ.

ರಸ್ತೆಬದಿ ಕೊಳೆಯಲಾರಂಭಿಸಿದ ಕುಂಬಳಕಾಯಿ
ಆಯುಧಪೂಜೆಯ ದಿನವಾದ ಶುಕ್ರವಾರ (ಸೆ 29) ಸಂಜೆಯಾಗುತ್ತಿದ್ದಂತೇ ಬಹುತೇಕ ರಸ್ತೆಬದಿ ವ್ಯಾಪಾರಿಗಳು ಬಾಳೆದಿಂಡು, ಕುಂಬಳಕಾಯಿ, ಮಾವಿನಸೊಪ್ಪುಗಳನ್ನು ಹಾಗೇ ಬಿಟ್ಟು ರಾಜಧಾನಿಯಿಂದ ತಮ್ಮ ಊರು ಕಡೆ ಮುಖ ಮಾಡಿರುವುದರಿಂದ ಇನ್ನಷ್ಟು ವಸ್ತುಗಳು ರಸ್ತೆಬದಿ ಕೊಳೆಯಲಾರಂಭಿಸಿದೆ. ದಿನವೊಂದಕ್ಕೆ ಕನಿಷ್ಟ 4300 ಟನ್ ಕಸ ನಗರದಲ್ಲಿ ಉತ್ಪತ್ತಿಯಾಗುತ್ತಿದೆ, ಇನ್ನು ಹಬ್ಬದ ಸಮಯದಲ್ಲಿ 700-800 ಟನ್ ನಷ್ಟು ಹೆಚ್ಚುವರಿ ತಾಜ್ಯ ಉತ್ಪತ್ತಿಯಾಗುತ್ತದೆ .

ರಜೆಯ ಮಜಾ ಸವಿಯಲು ಹೋಗುವ ಡ್ರೈವರುಗಳು
ಕಸ ಎತ್ತುವ ಗಾಡಿಗಳು ಸಿಂಗಾರಗೊಂಡು, ಡ್ರೈವರ್ ಗೇರ್ ಆಫ್ ಮಾಡಿ ರಜೆಯ ಮಜಾ ಸವಿಯಲು ಹೋಗಿರುವುದರಿಂದ, ಕಾಂಟ್ರ್ಯಾಕ್ಟರ್ ಗಳಿಗೆ ಬೇರೆ ಡ್ರೈವರ್ ಹೊಂದಿಸುವ ಅನಿವಾರ್ಯತೆ. ಆಯುಧಪೂಜೆ ಬಂದರೆ ಸಾಕು, 'ಸಾಕಪ್ಪಾ ಸಾಕು' ಅನಿಸಿ ಬಿಡುತ್ತೆ ಸರ್ .. ವ್ಯಾಪಾರಿಗಳಿಗೆ ತಮ್ಮ ಕೆಲಸ ಆದರೆ ಸಾಕು, ಹಾಗೇ ಬಿಟ್ಟು ತಮ್ಮ ಊರಿಗೆ ಹೊರಟು ಹೋಗುತ್ತಾರೆ ಎನ್ನುವುದು ನರಸಿಂಹರಾಜ ಕಾಲೋನಿಯ ಕಾಂಟ್ರ್ಯಾಕ್ಟರ್ 'ಒನ್ ಇಂಡಿಯಾ' ಜೊತೆ ನೋವು ತೋಡಿಕೊಳ್ಳುತ್ತಾರೆ.

ರಾಜಕೀಯ ಪಕ್ಷಗಳ ಇಚ್ಚಾಶಕ್ತಿಯೂ ಪ್ರಮುಖ ಕಾರಣ
ಬೆಂಗಳೂರಿನಲ್ಲಿ ಕಸ ಎತ್ತುವ ಸಮಸ್ಯೆಗೆ ಶಾಸ್ವತ ಪರಿಹಾರ ಎನ್ನುವುದು ಮರೀಚಿಕೆಯಂತಾಗಿಯೇ ಉಳಿದಿದೆ, ಇದಕ್ಕೆ ಏನಾದರೂ ಒಂದು ಪರಿಹಾರ ಕಂಡುಕೊಳ್ಳೋಣ ಎನ್ನುವುದು ಮೂರೂ ಪಕ್ಷಗಳಿಗೂ ಇದ್ದಂತಿಲ್ಲ. ಸಿಲಿಕಾನ್ ಸಿಟಿ ಇದ್ದದ್ದು ಗಾರ್ಬೇಜ್ ಸಿಟಿ ಆಗಿರುವುದಕ್ಕೆ ರಾಜಕೀಯ ಪಕ್ಷಗಳ ಇಚ್ಚಾಶಕ್ತಿಯೂ ಪ್ರಮುಖ ಕಾರಣ. ಹಬ್ಬದ ಕಾರಣ ಅಲ್ಲಲ್ಲಿ ಕಸ ಇರಬಹುದು, ಆದರೆ ಹೆಚ್ಚಿನ ಕಡೆ ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿದೆ ಎಂದು ಬಿಬಿಎಂಪಿ ಮೇಯರ್ ಸಂಪತ್ ರಾಜ್ ಹೇಳಿಕೆ ನೀಡಿದರೂ, ಬಹುತೇಕ ವಸ್ತುಸ್ಥಿತಿ ಇದಕ್ಕೆ ವಿರುದ್ದವಾಗಿದೆ.

ವೈರಲ್ ಫಿವರ್, ಡೆಂಗ್ಯು ಸಮಸ್ಯೆಯಿಂದ ಬಳಲುತ್ತಿರುವ ನಾಗರೀಕ
ಮೊದಲೇ, ವೈರಲ್ ಫಿವರ್, ಡೆಂಗ್ಯು ಸಮಸ್ಯೆಯಿಂದ ಬಳಲುತ್ತಿರುವ ನಾಗರೀಕರಿಗೆ ತಾಜ್ಯ ವಿಲೇವಾರಿ ಇನ್ನಷ್ಟು ತೊಂದರೆ ತಂದೊಡ್ಡದಿದ್ದರೆ ಸಾಕು. ಅಲ್ಲಲ್ಲಿ ಬೆಟ್ಟದಂತೆ ಬಿದ್ದಿರುವ ಕಸಗಳ ಮೇಲೆ ಮಳೆಬಿದ್ದು ಅದನ್ನು ಕ್ಲಿಯರ್ ಮಾಡುವ ಪೌರ ಕಾರ್ಮಿಕರ ಬವಣೆ ಹೇಳತೀರದು. ಇತ್ತೀಚೆಗೆ ಮುಷ್ಕರ ಹೂಡಿದ್ದ ಕಸವಿಲೇವಾರು ಗುತ್ತಿಗೆದಾರರರು ಎಸ್ಮಾ ಜಾರಿಯಾದ ನಂತರ ಕೆಲಸಕ್ಕೆ ಮತ್ತೆ ಹಾಜರಾಗಿದ್ದರೂ, ಪೂರ್ಣ ಪ್ರಮಾಣದಲ್ಲಿ ಇನ್ನೂ ತೊಡಗಿಸಿಕೊಂಡಿಲ್ಲ.

ಆಯುಧಪೂಜೆ ಕಸಗಳ ವಿಲೇವಾರಿ
ಆಯುಧಪೂಜೆ ಕಸಗಳ ವಿಲೇವಾರಿಗೆ ಬಿಬಿಎಂಪಿ ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಂತೆ ಕಾಣುತ್ತಿಲ್ಲ. ನಗರದ 198ವಾರ್ಡುಗಳಲ್ಲಿ ಟನ್ ಗಟ್ಟಲೇ ಬೀಳುವ ಕಸವನ್ನು ವಿಲೇವಾರಿ ಮಾಡಲು ಪೌರ ಕಾರ್ಮಿಕರಿಗೆ ವಿಶೇಷ ಭತ್ಯೆಯನ್ನಾದರೂ ಬಿಬಿಎಂಪಿ ನೀಡುತ್ತಿದೆಯೇ? ಬಿಬಿಎಂಪಿ ನೀಡಿದರೂ ಕಾಂಟ್ರ್ಯಾಕ್ಟರ್ ಅದನ್ನು ಪೌರಕಾರ್ಮಿಕರಿಗೆ ತಲುಪಿಸುತ್ತಿದ್ದಾರೆಯೇ?

ದಸರಾ ಮುಗಿಯಿತು, ಪೌರ ಕಾರ್ಮಿಕರಿಗೆ ಹಬ್ಬ ಶುರುವಾಯಿತು
ಇಂತಹ ವಿಶೇಷ ದಿನಗಳಲ್ಲಿ ರಜೆಯಿಲ್ಲದೇ ಕೆಲಸ ಮಾಡುತ್ತಿರುವ ಬಿಬಿಎಂಪಿ ಪೌರಕಾರ್ಮಿಕರಿಗೆ ಓವರ್ ಟೈಮ್ ಕೊಟ್ಟು ನೋಡಿಕೊಳ್ಳಬೇಕಾಗಿದೆ. ದಸರಾ ಮುಗಿಯಿತು, ಇನ್ನು ಹದಿನೈದು ದಿನಗಳಲ್ಲಿ ದೀಪಾವಳಿ ಬರುತ್ತಿದೆ. ಕಸವನ್ನು ಅಲ್ಲಲ್ಲಿ ಹಾಕದೇ ನಿರ್ದಿಷ್ಠ ಪ್ರದೇಶಗಳಲ್ಲಿ ಹಾಕಿ, ಪ್ರತ್ಯೇಕಿಸಿ, ಪೌರ ಕಾರ್ಮಿಕರೂ ಮನುಷ್ಯರು ಎಂದು ನಾಗರೀಕರು ತಮ್ಮ ಜವಾಬ್ದಾರಿ ಅರಿತರೆ ಜೊತೆಗೆ ಬಿಬಿಎಂಪಿಯೂ ತಮ್ಮ ಕೆಲಸವನ್ನು ಸರಿಯಗಿ ನಿಭಾಯಿಸಲಿ ಎಂದು ಆಶಿಸುತ್ತಲೇ ಇದ್ದೇವೆ.. ಆದರೆ ಇದು ಕಾರ್ಯರೂಪಕ್ಕೆ ಬರುವುದು ಯಾವಾಗಲೋ?












Click it and Unblock the Notifications