ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಟೂಲ್ ಕಿಟ್; ಎಎಪಿಯಿಂದ ಹಗರಣದ ಆರೋಪ
ಬೆಂಗಳೂರು, ಜುಲೈ 11: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಟೂಲ್ ಕಿಟ್ ಪೂರೈಕೆ ಟೆಂಡರ್‌ನ 22 ಕೋಟಿ ಹಗರಣದಲ್ಲಿ ಸಚಿವ ಅಶ್ವತ್ಥ ನಾರಾಯಣ ನೇರ ಕೈವಾಡವಿದೆ ಎಂದು ಕರ್ನಾಟಕ ಎಎಪಿ ಮುಖಂಡ ಮೋಹನ್ ದಾಸರಿ ಆರೋಪಿಸಿದ್ದಾರೆ.
ರಾಜ್ಯದ ಎಲ್ಲ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 13 ಸಾವಿರ ವಿದ್ಯಾರ್ಥಿಗಳಿಗೆ 22 ಕೋಟಿ ವೆಚ್ಚದಲ್ಲಿ ಅಗತ್ಯ ಸಲಕರಣೆಗಳನ್ನು ಒಳಗೊಂಡ ಟೂಲ್ ಕಿಟ್‌ಗಳನ್ನು ಖರೀದಿಸಿ ವಿತರಿಸುವ ಟೆಂಡರ್ ನಲ್ಲಿ ಗೋಲ್ ಮಾಲ್ ನಡೆದಿರುವುದರ ಹಿಂದೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಅಶ್ವತ್ಥ ನಾರಾಯಣ ನೇರ ಹಸ್ತಕ್ಷೇಪ ಇದೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ.
ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿ ವಿವರ ನೀಡಿದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ರಾಜ್ಯ ಉದ್ಯೋಗ ಮತ್ತು ಕೈಗಾರಿಕಾ ತರಬೇತಿ ಇಲಾಖೆಯ ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಈ ಟೂಲ್ ಕಿಟ್ ಟೆಂಡರ್‌ನಲ್ಲಿ ಭಾಗವಹಿಸಿದ್ದ ಇಂಟಲೆಕ್ ಸಿಸ್ಟಮ್ಸ್ ಸಂಸ್ಥೆಯು ಇಲಾಖೆಗೆ ನಕಲಿ ದಾಖಲೆಗಳನ್ನು ನೀಡಿ ತಾಂತ್ರಿಕ ಅನುಮೋದನೆಯನ್ನು ಪಡೆದುಕೊಂಡಿದೆ ಎಂದರು.
ಮಂತ್ರಿಗಳ ಒತ್ತಡ ಹಾಗೂ ನೇರ ಹಸ್ತಕ್ಷೇಪ ದಿಂದಾಗಿ ಬೋಗಸ್ ಕಂಪನಿಯೊಂದು 22 ಕೋಟಿ ಮೊತ್ತದ ಸಾಮಗ್ರಿಗಳನ್ನು ಪೂರೈಸಲು ಅನುಮತಿ ನೀಡಿರುವುದು ರಾಜ್ಯ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಮೋಹನ್ ದಾಸರಿ ತಿಳಿಸಿದರು.

ಜಿಎಸ್‌ಟಿ ಬಿಲ್‌ಗಳು ಸಂಪೂರ್ಣ ನಕಲಿ
ಮೊದಲ ಬಾರಿ ನಡೆದ ಟೆಂಡರ್‌ನಲ್ಲಿ ಇದೇ ಕಂಪನಿಯು ತಾಂತ್ರಿಕ ಅರ್ಹತೆ ಇಲ್ಲದ ಕಾರಣಕ್ಕಾಗಿ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಿ ಮರು ಟೆಂಡರ್‌ನಲ್ಲಿ ಈ ಕಂಪನಿಗೆ ಅನುವು ಮಾಡಿಕೊಡಲಾಗಿದೆ. ಇದರ ಹಿಂದೆಯೂ ಇಲಾಖೆಯ ಸಾಕಷ್ಟು ಅವ್ಯವಹಾರಗಳು ನಡೆದಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.
ಕಂಪೆನಿಯು ಈ ಹಿಂದೆ ಬೇರೆಯವರಿಗೆ 22 ಕೋಟಿ, ಹಾಗೂ 11 ಕೋಟಿ ಮೊತ್ತದ ಸಾಮಗ್ರಿಗಳನ್ನು ಪೂರೈಸಿರುವ ಹಾಗೆ ಸೃಷ್ಟಿಸಿರುವ ಜಿಎಸ್‌ಟಿ ಬಿಲ್‌ಗಳು ಸಂಪೂರ್ಣ ನಕಲಿಯಾಗಿವೆ. ಜಿಎಸ್‌ಟಿ ಮಂಡಳಿಯವರು ಸಹ ಈ ಬಗ್ಗೆ ನಕಲಿ ಬಿಲ್ ಎಂದು ರುಜುವಾತು ಪಡಿಸಿದ್ದಾರೆ. ಆದರೂ ಸಹ ಇದೇ ಕಂಪನಿಗೆ ಇಲಾಖೆಯ ಕಾರ್ಯದರ್ಶಿಗಳು ಮತ್ತು ಮಂತ್ರಿಗಳು ಕೋಟ್ಯಂತರ ರೂ. ಮೊತ್ತದ ಸಾಮಗ್ರಿಗಳನ್ನು ಪೂರೈಸಲು ಅನುವು ಮಾಡಿಕೊಟ್ಟಿರುವುದು ಇಲಾಖೆಯ ಅಧಿಕಾರಿಗಳು ಮತ್ತು ಮಂತ್ರಿಗಳು ಭ್ರಷ್ಟಾಚಾರ , ಸ್ವಜನಪಕ್ಷಪಾತ ಮತ್ತು ಅಧಿಕಾರ ದುರ್ಬಳಕೆ ಮಾಡಿರುವುದು ಸಂಪೂರ್ಣವಾಗಿ ಎದ್ದು ಕಾಣುತ್ತದೆ ಎಂದರು.

ಮಂತ್ರಿಗಳ ಭ್ರಷ್ಟಾಚಾರ ಕಾರಣ 22ಕೋಟಿಗೆ ಹೆಚ್ಚಳ
ಕಳೆದ ವರ್ಷ 2021ರ ಸೆಪ್ಟಂಬರ್ ತಿಂಗಳಲ್ಲಿನ ಮಂತ್ರಿ ಮಂಡಲ ಸಭೆಯಲ್ಲಿ ಈ ಸಾಮಗ್ರಿಗಳ ಪೂರೈಕೆಗೆ ಕೇವಲ 17ಕೋಟಿಗಳು ಮೀಸಲಿಟ್ಟಿದ್ದರೂ ಸಹ ನಂತರ ನಡೆದ ಟೆಂಡರ್ ಗೋಲ್ ಮಾಲ್ ನಲ್ಲಿ ಈ ಮೊತ್ತ 22 ಕೋಟಿಗೆ ಹೆಚ್ಚಾಗಿರುವುದರ ಹಿಂದೆಯೂ ಸಹ ಮಂತ್ರಿಗಳ ಪರಮ ಭ್ರಷ್ಟಾಚಾರ ಅಡಗಿದೆ ಎಂದು ಮೋಹನ್ ದಾಸರಿ ಆರೋಪಿಸಿದರು.

ಕ್ರಿಮಿನಲ್ ಮೊಕದ್ದಮೆ ದಾಖಲಿಸಿ
""ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಈ ರೀತಿಯ ಯೋಜನೆಗಳಲ್ಲಿಯೂ ಸಹ ಬಿಜೆಪಿ ಸರ್ಕಾರವು ತನ್ನ ಭ್ರಷ್ಟಾಚಾರದ ಕಬಂಧ ಬಾಹುಗಳನ್ನು ಚಾಚುತ್ತಿರುವುದು ತೀರಾ ದುರದೃಷ್ಟಕರ ಸಂಗತಿ. ಈ ಕೂಡಲೇ ಇಂಟಲೆಕ್ ಸಿಸ್ಟಮ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರಿಗೆ ನೀಡಿರುವ ಅನುಮೋದನೆಯನ್ನು ರದ್ದುಗೊಳಿಸಬೇಕು ಹಾಗೂ ಪೂರೈಕೆ ಕಂಪನಿ, ಉದ್ಯೋಗ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಮಂತ್ರಿ ಅಶ್ವತ್ಥ ನಾರಾಯಣ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆಗೆ ಒಳಪಡಿಸಬೇಕೆಂದು'' ಕೋಲಾರದ ಮಾಜಿ ಸಂಸದ ಡಾ. ವೆಂಕಟೇಶ್ ಸರ್ಕಾರವನ್ನು ಒತ್ತಾಯಿಸಿದರು.

ವಿದ್ಯಾರ್ಥಿಗಳೊಂದಿಗೆ ಪ್ರಭತಿಭಟನೆ ಎಚ್ಚರಿಕೆ
ಸಚಿವ ಅಶ್ವತ್ಥ ನಾರಾಯಣ ಮನೆ ಮುಂದೆ ವಿದ್ಯಾರ್ಥಿಗಳ ಜೊತೆಗೆ ಆಮ್ ಆದ್ಮಿ ಪಕ್ಷವು ಬೃಹತ್ ಮಟ್ಟದ ಹೋರಾಟವನ್ನು ನಡೆಸಲಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಚನ್ನಪ್ಪಗೌಡ ನೆಲ್ಲೂರು , ಉಷಾ ಮೋಹನ್ ಸೇರಿದಂತೆ ಇನ್ನಿತರ ಮುಖಂಡರುಗಳು ಭಾಗವಹಿಸಿದ್ದರು.












Click it and Unblock the Notifications