ಮೇ 2ಕ್ಕೆ ಜೆಡಿಎಸ್ ಪರ ಅಸಾದುದ್ದೀನ್ ಓವೈಸಿ ಪ್ರಚಾರ
ಬೆಂಗಳೂರು, ಏಪ್ರಿಲ್ 27: ಎ.ಐ.ಎಂ.ಐ.ಎಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಮೇ 2ರಂದು ಜೆಡಿಎಸ್ ಪರವಾಗಿ ಬೆಂಗಳೂರಿನಲ್ಲಿ ಪ್ರಚಾರ ಮಾಡಲಿದ್ದಾರೆ.
ಮೊದಲಿಗೆ ಮೇ 1ರಂದು ಅಸಾದುದ್ದೀನ್ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿತ್ತು ಆದರೆ ನಂತರ ದಿನಾಂಕವನ್ನು ಬದಲಿಸಿ ಮೇ 2ಕ್ಕೆ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಸಾದುದ್ದೀನ್ ಓವೈಸಿ ಅವರು ನಗರದ ಚಿಕ್ಕಪೇಟೆ, ಪುಲಕೇಶಿ ನಗರ, ಸರ್ವಜ್ಞನಗರ ಮತ್ತು ಮುಖ್ಯವಾಗಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಚಾಮರಾಜಪೇಟೆಯಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಜೆಡಿಎಸ್‌ನಿಂದ ಪಕ್ಷಾಂತರ ಮಾಡಿರುವ ಜಮೀರ್ ಅವರ ವಿರುದ್ಧ ಅಸಾದುದ್ದೀನ್ ಓವೈಸಿಯನ್ನು ಅಸ್ತ್ರವಾಗಿ ಜೆಡಿಎಸ್ ಬಳಸಲಿದೆ.

ಅಸಾದುದ್ದೀನ್ ಓವೈಸಿ ಅವರನ್ನು ಕರೆಸಿ ಮುಸ್ಲಿಂ ಮತಗಳ ಕಣ್ಣಿಟ್ಟಿರುವ ಜೆಡಿಎಸ್ ಪಕ್ಷ ಅಸಾದುದ್ದೀನ್ ಓವೈಸಿ ಅವರನ್ನು ಪ್ರಚಾರಕ್ಕೆ ಕರೆತಂದಿದೆ. ನಿನ್ನೆ (ಏಪ್ರಿಲ್ 27) ತಾನೆ ಜೆಡಿಎಸ್ ಪಕ್ಷವು ಬಿಎಸ್‌ಪಿಯ ಮಾಯಾವತಿ ಅವರನ್ನು ಪ್ರಚಾರಕ್ಕೆ ಕರೆತಂದು ದಲಿತರ ಮನ ಗೆಲ್ಲುವ ಪ್ರಯತ್ನ ಮಾಡಿತ್ತು.
ಅಸಾದುದ್ದೀನ್ ಓವೈಸಿ ಪಕ್ಷಾತೀತವಾಗಿ ಮುಸ್ಲಿಂ ಸಮುದಾಯದ ನಾಯಕ ಎಂದು ಗುರುತಿಸಿಕೊಂಡಿದ್ದು, ಬೆಂಗಳೂರಿನಲ್ಲಿ ಸಾಕಷ್ಟು ಬೆಂಬಲಿಗರನ್ನು ಹೊಂದಿದ್ದಾರೆ ಹಾಗಾಗಿ ಜೆಡಿಎಸ್ ಮುಸ್ಲಿಂ ಮತಗಳನ್ನು ಸೆಳೆಯಲು ಅವರನ್ನು ಕರೆತರುತ್ತಿದೆ.
ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಸಾದುದ್ದೀನ್ ಓವೈಸಿ ಅವರ ಪಕ್ಷವೂ ಸ್ಪರ್ಧೆ ಮಾಡುತ್ತದೆ ಎನ್ನಲಾಗಿತ್ತು ಆದರೆ ನಂತರ ಆ ಸುದ್ದಿಯನ್ನು ಅಲ್ಲಗಳೆದ ಅಸಾದುದ್ದೀನ್ ಓವೈಸಿ ಜೆಡಿಎಸ್‌ಗೆ ಬೆಂಬಲಿಸುತ್ತೇವೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications