ಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ: ಎಲ್ಲಿಂದ ಎಲ್ಲಿಯವರೆಗೆ ಹಾಗೂ ವೆಚ್ಚ ಎಷ್ಟು?-ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್, 22: ಬೆಂಗಳೂರಿನಲ್ಲಿ ಇಂದು (ಆಗಸ್ಟ್ 22) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಈ ವೇಳೆ ನಗರದಲ್ಲಿ 12,690 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 18 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಹಾಗಾದರೆ ಎಲ್ಲಿಂದ ಎಲ್ಲಿಯವರೆಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಗರದ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಸುಮಾರು 18 ಕಿಲೋ ಮೀಟರ್ ಉದ್ದದ 12,690 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಅಲ್ಲದೆ ನಗರದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೂ ಒಪ್ಪಿಗೆ ನೀಡಿದೆ. ಗುರುವಾರ (ಆಗಸ್ಟ್ 22) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಇನ್ನು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್‌ಕೆ ಪಾಟೀಲ್ ಮಾಹಿತಿ ನೀಡಿ, 12,690 ಕೋಟಿ ರೂಪಾಯಿ ಮೊತ್ತದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಈ ಸಂಬಂಧ ವಿಸ್ತೃತ ಯೋಜನಾ ವರದಿ ಆಗಿಲ್ಲ ಎಂದರು ಹೇಳಿದರು.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸುವ ದೃಷ್ಟಿಯಿಂದ ಟನಲ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಜನವರಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು.
ಇದೀಗ ಕೊಟ್ಟ ಮಾತಿನಂತೆಯೇ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಹೆಬ್ಬಾಳದಿಂದ ಮೇಖ್ರಿ ಸರ್ಕಲ್‌ವರೆಗೆ 3 ಕಿಲೋ ಮೀಟರ್ ಉದ್ದದ ಚತುಷ್ಪಥ ಸುರಂಗ ನಿರ್ಮಿಸಲು ಬಿಬಿಎಂಪಿ ತೀರ್ಮಾನ ಮಾಡಿದೆ.
ಸಚಿವ ಸಂಪುಟ ಸಭೆಯ ಪ್ರಮುಖ ಅಂಶಗಳು
* 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಹೊಂಬೆಳಕು ಯೋಜನೆಯಡಿ ರಾಜ್ಯದ ಆಯ್ದ 50 ಗ್ರಾಮ ಪಂಚಾಯತಿಗಳ 200 ಗ್ರಾಮಗಳಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸೋಲಾರ್ ಬೀದಿ ದೀಪ ಅಳವಡಿಕೆಗೆ ಒಪ್ಪಿಗೆ ಸೂಚಿಸಲಾಗಿದೆ.
* ರಾಜ್ಯದಲ್ಲಿ ಹೊಸದಾಗಿ 592 ಅಂಗನವಾಡಿ ಕಟ್ಟಡಗಳನ್ನು 85 ಕೋಟಿ ರೂಪಾಯಿಗಳ ಸಂದಾಜು ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನ ಮಾಡಲಾಗಿದೆ.
* ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಚಿಕ್ಕಲಪರ್ವಿ ಗ್ರಾಮದ ಬಳಿಯ ತುಂಗಭದ್ರಾ ನದೊಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಅನ್ನು 397 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
* ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟಿ ಪಟ್ಟಣಕ್ಕೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಸೇತುವೆ ನಿರ್ಮಾಣ ಕಾಮಗಾರಿಯನ್ನು 28 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳಸಲು ತೀರ್ಮಾಣ ಮಾಡಲಾಗಿದೆ.
* ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯದಿಂದ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಅನುಮೋದನೆಗೊಂಡ ಒಟ್ಟು 1,385 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಲ್ಲಿ ಮೊದಲ ಹಂತದಲ್ಲಿ 700 ರೂಪಾಯಿ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಅನಿಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
* ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿದುವ ಕೇಂದ್ರ ಸರ್ಕಾರದ (ಆರ್‌ಎಎಂಪಿ) ಕಾರ್ಯಕ್ರಮವನ್ನು 147 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನ ಮಾಡಲಾಗಿದೆ.
* ಬಳ್ಳಾರಿ ಜಿಲ್ಲೆಉ ಸಂಡೂರು ತಾಲ್ಲೂಕಿನ ತೋರಣಗಲ್ಲು, ಕರೇಕುಪ್ಪ, ಮೂಸೆನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 3,667 ಎಕರೆ ಜಮೀನನ್ನು ಎ.ಎಸ್.ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಸಂಸ್ಥೆಯ ಪರವಾಗಿ ಕ್ರಯಪತ್ರ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
* ರಾಜ್ಯದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ ಹಾಗೂ ಆರೋಗ್ಯ ಇಲಾಖೆಯ ಇತರೆ ಎಲ್ಲಾ ಆರೋಗ್ಯ ಸಂಬಂಧಿತ ಡಿಜಿಟಲ್ ಉಪಕ್ರಮಗಳ ಅನುಷ್ಠಾನದ ಉದ್ದೇಶಕ್ಕಾಗಿ ಕರ್ನಾಟಕ ಡಿಜಿಟಲ್ ಹೆಲ್ತ್ ಸೊಸೈಟಿಯನ್ನು ಸ್ಥಾಪನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
* ಬೆಂಗಳೂರು ನಗರದಲ್ಲಿ 250 ಅಡಿ ಎತ್ತರದ ಆಕಾಶ ಗೋಪುರವನ್ನು ನಿರ್ಮಾಣ ಮಾಡಲು ತಾತ್ವಿಕ ಅನುಮೋದನೆ ನೀಡಲಾಗಿದೆ.
* ಬೆಂಗಳೂರು ನಗರದ ಹೆಬ್ಬಾಳ ಮೇಲ್ಸೇತುವೆ (ಎಸ್ಟೀಮ್ ಮಾಲ್)ನಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಮೇಲ್ಸೇತುವೆವರೆಗೆ ಸುರಂಗ ಮಾರ್ಗವನ್ನು 12,690 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ.
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ 52 ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.












Click it and Unblock the Notifications