ಯುವ ಕೃಷಿಕರೆ ಇಲ್ಲಿ ಗಮನಿಸಿ, ನವೋದ್ಯಮ ಯೋಜನೆಯಡಿ ಭರ್ಜರಿ ಅವಕಾಶ!
ಬೆಂಗಳೂರು: ಕೃಷಿ ಇಲಾಖೆ ವತಿಯಿಂದ ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಹಾಗೂ ಗ್ರಾಮಿಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಅತ್ಯುತ್ತಮ ಯೋಜನೆ ಕೈಗೊಳ್ಳಲಾಗಿದೆ. ಈ ಮೂಲಕ ಕೃಷಿಯ ನೂತನ ತಾಂತ್ರಿಕತೆ, ನವೀನ ಪರಿಕಲ್ಪನೆ ವಾಣಿಜ್ಯೀಕರಣ ಉತ್ತೇಜಿಸುವ ಸಲುವಾಗಿ ನವೋದ್ಯಮ ಯೋಜನೆ ಅಡಿ, ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆ ಕುರಿತು ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆ ಜತೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಶೇಕಡ 50 ರಷ್ಟು ಸಹಾಯಧನ (ಕನಿಷ್ಠ- ರೂ. 5 ಲಕ್ಷದಿಂದ ಗರಿಷ್ಟ ರೂ. 20 ಲಕ್ಷ ತನಕ) ಬ್ಯಾಂಕ್ ಸಾಲದ ಮುಖಾಂತರ ನೀಡಲಾಗುವುದು. ಹಾಗೂ ಕೃಷಿ ವಲಯದಲ್ಲಿ ಈಗಾಗಲೇ ಸ್ಥಾಪಿಸಲಾದ ನವೋದ್ಯಮ ವಿಸ್ತರಣೆಗಾಗಿ ಹಾಗೂ ಉನ್ನತೀಕರಣಕ್ಕಾಗಿ ಶೇಕಡ 50 ರಷ್ಟು ಸಹಾಯಧನವನ್ನು (ಕನಿಷ್ಠ ರೂ. 20 ಲಕ್ಷದಿಂದ ಗರಿಷ್ಟ ರೂ. 50 ಲಕ್ಷ ವರಗೆ) ಕೃಷಿ ವಲಯದ ನವೋದ್ಯಮಿಗಳಿಗೆ ಬ್ಯಾಂಕ್ ಸಾಲದ ಮುಖಾಂತರ ನೀಡಲಾಗುವುದು.

ವಿಶೇಷ ತರಬೇತಿಗೂ ವ್ಯವಸ್ಥೆ ಇದೆ
ಆಯ್ಕೆಯಾದ ನವೋದ್ಯಮಿಗೆ ಸಾಮರ್ಥ್ಯ ಅಭಿವೃದ್ಧಿಗೆ ಕೃಷಿ ವಿಶ್ವವಿದ್ಯಾಲಯ ICAR, CFTRI, CSIR, C-CAMP ಮತ್ತೆ ಇತರೆ ಸಂಶೋಧನಾ ಸಂಸ್ಥೆಗಳಾದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಸ್ಥಾಪಿತವಾದ ಕೃಷಿ ನಾವೀನ್ಯತೆಗಾಗಿ ಶ್ರೇಷ್ಠತೆಯ ಕೇಂದ್ರಗಳ ಮೂಲಕ ತರಬೇತಿ ನೀಡಲಾಗುವುದು.
ಅರ್ಜಿ ಪಡೆಯಲು ಹೀಗೆ ಮಾಡಬಹುದು
ಆಸಕ್ತ ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಪ್ರಗತಿಪರ ರೈತರು ಹೆಚ್ಚಿನ ಮಾಹಿತಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಆನೇಕಲ್ ಮತ್ತು ಬೆಂಗಳೂರು ಉತ್ತರ, ಉಪ ಕೃಷಿ ನಿರ್ದೇಶಕರ ಕಚೇರಿ, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಸಂಕೀರ್ಣ, ಎಸ್. ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು ಇಲ್ಲಿ ಭೇಟಿ ನೀಡಿ ಅರ್ಜಿ ಪಡೆಯಬಹುದು. ಅಥವಾ ದೂ. ಸಂಖ್ಯೆ: 080-26711594 ಗೆ ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಒಟ್ನಲ್ಲಿ ಸರ್ಕಾರದ ಈ ಯೋಜನೆ ಸದುಪಯೋಗ ಮಾಡಿಕೊಳ್ಳಲು ಈ ಮೂಲಕ ಪ್ರಕಟಣೆ ನೀಡಿ ಮಾಹಿತಿ ಕೊಡಲಾಗಿದೆ. ಹಾಗೇ ಯೋಜನೆಯ ಕುರಿತು ಯಾವುದೇ ರೀತಿಯ ಮಾಹಿತಿ ಪಡೆಯಲು ಕಚೇರಿ ಅಥವಾ ದೂರವಾಣಿ ಸಂಖ್ಯೆಗೆ ಅರ್ಹ ಅಭ್ಯರ್ಥಿಗಳು ಸಂಪರ್ಕವನ್ನೂ ಮಾಡಬಹುದು.












Click it and Unblock the Notifications