Silk Board Flyover: ಸಿಲ್ಕ್ ಬೋರ್ಡ ಮೇಲ್ಸೇತುವೆ ತೆರೆಯಲು ಹೆಚ್ಚಾಯ್ತು ಆಗ್ರಹ
ಬೆಂಗಳೂರು, ಜುಲೈ 08: ಹೆಚ್ಚು ಸಂಚಾರ ದಟ್ಟಣೆ ಇರುವ, ವಾಹನ ಸವಾರರಿಗೆ ಕಿರಿ ಕಿರಿ ನೀಡುವ ಸಿಲ್ಕ ಬೋರ್ಡ್ ಜಂಕ್ಷನ್ ದಟ್ಟಣೆ ನಿವಾರಣೆ ನಿಟ್ಟಿನಲ್ಲಿ ಹಾಗೂ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ನಿರ್ಮಿಸಿರುವ ಮೇಲ್ಸೇತುವೆ ಇನ್ನೂ ಸಾರ್ವಜನಿಕರಿಗೆ ಮುಕ್ತವಾಗಿಲ್ಲ.
ಈ ಸಿಲ್ಕ್ ಬೋರ್ಡ್ ಮೇಲ್ಸೇತುವೆ ವಾರದಲ್ಲಿ ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಸಾರ್ವಜನಿಕರ ಜೊತೆ ಸೇರಿ ನಾವೇ ಸಂಚಾರ ಮುಕ್ತಗೊಳಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷವು (ಎಎಪಿ) ಎಚ್ಚರಿಕೆ ನೀಡಿದೆ.

ನಗರದ ಸಿಲ್ಕ್ ಬೋರ್ಡ್ ಬಳಿ ನಿರ್ಮಿಸಿರುವ ಮೇಲ್ಸೇತುವೆ ಬಳಿ ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಎಎಪಿ ಮುಖಂಡರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ, ಪಕ್ಷದ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ್, 2018ರಲ್ಲಿ ಆರಂಭಗೊಂಡ ಮೇಲ್ಸೇತುವೆ ಕಾಮಗಾರಿ, 2019ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದರು.
ಸಿಲ್ಕ್ ಬೋರ್ಡ್ ಮೇಲ್ಸೇತುವೆಯನ್ನು (ಫ್ಲೈ ಓವರ್) ಸಂಚಾರಕ್ಕೆ ಮುಕ್ತಗೊಳಿಸಲು ಕಾಂಗ್ರೆಸ್ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಇದರಿಂದ ವಾಹನ ಸವಾರರು ನಿತ್ಯವೂ ಕಿಲೊಮೀಟರ್ ಗಟ್ಟಲೆ ಸಂಚಾರ ದಟ್ಟಣೆ ಯಲ್ಲಿ ಸಿಲುಕುವಂತಾಗಿದೆ ಎಂದು ಅವರು ವಿವರಿಸಿದರು.

ಕಾಮಗಾರಿ ಪೂರ್ಣಗೊಂಡರೂ ಇಲ್ಲಿ ದಟ್ಟಣೆ
ಕಳೆದ ಹದಿನೈದು ದಿನಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿದೆ. ಬೆಂಗಳೂರು ದಕ್ಷಿಣದಿಂದ ಪಶ್ಚಿಮ ಭಾಗಕ್ಕೆ, ಎಲೆಕ್ಟ್ರಾನಿಕ್ ಸಿಟಿ, ಮಡಿವಾಳ ಕಡೆ ಹೊರಡುವ ವಾಹನ ಸಂಚಾರರು ನಿತ್ಯವೂ ಸಂಚಾರ ದಟ್ಟಣೆಯಿಂದ ಪರದಾಡುವಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ವಾರದೊಳಗೆ ಕ್ರಮವಹಿಸದಿದ್ದರೆ ಜನರೊಂದಿಗೆ ಸೇರಿ ನಾವೇ ಮೇಲ್ಸೇತುವೆಯನ್ನು ಸಂಚಾರ ಮುಕ್ತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅರ್ಧ ಗಂಟೆ ಸಂಚಾರ ದಟ್ಟಣೆಯಲ್ಲಿ ಪರದಾಟ
ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಮಾತನಾಡಿ, ಪ್ರತಿ ಸಿಗ್ನಲ್ ನಲ್ಲೂ ವಾಹನ ಸವಾರರು ಅರ್ಧಗಂಟೆ ನಿಲ್ಲಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ಐ.ಟಿ ಉದ್ಯೋಗಿಗಳು ಸಂಚಾರ ದಟ್ಟಣೆಯಿಂದ ತೀರ ತೊಂದರೆಗೊಳಗಾಗಿದ್ದಾರೆ ಎಂದರು.
ಮೇಲ್ಸೇತುವೆ ಜನರ ಅನುಕೂಲಕ್ಕಾಗಿ ನಿರ್ಮಿಸಿದ್ದರೂ ಸಕಾಲಕ್ಕೆ ಸಂಚಾರ ಮುಕ್ತ ಮಾಡದೆ ಜನರ ಹಣ ವ್ಯರ್ಥ ಮಾಡಲಾಗುತ್ತಿದೆ. ಬ್ರ್ಯಾಂಡ್ ಬೆಂಗಳೂರು ಜನರಿಗೆ ಅನುಕೂಲ ಮಾಡಬೇಕೆ ವಿನಃ ನಷ್ಟವನ್ನಲ್ಲ. ಸಂಚಾರ ದಟ್ಟಣೆಯಿಂದ ಆಂಬುಲೆನ್ಸ್ ಸಹ ಕನಿಷ್ಠ ಇಪ್ಪತ್ತು ನಿಮಿಷ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ. ಜನರ ಸಮಯ ಮತ್ತು ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ಮೇಲ್ಸೇತುವೆ ಸಂಚಾರ ಮುಕ್ತಗೊಳಿಸಿ, ಆದಷ್ಟು ಬೇಗ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಪಕ್ಷದ ಇನ್ನಿತರ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications