ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಚಿವ ಬಾಬುರಾವ್‌ರಿಂದ ರಕ್ಷಣೆ ಕೋರಿದ್ದ ಮಹಿಳೆ ಸಾವು

By ಒನ್ಇಂಡಿಯಾ ಕ್ರೈಂ ಡೆಸ್ಕ್
|
Google Oneindia Kannada News

ಬೆಂಗಳೂರು, ನವೆಂಬರ್ 02: ಮಾಜಿ ಸಚಿವ, ಹಾಲಿ ಗುರುಮಿಟ್ಕಲ್ ಶಾಸಕ, ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ್ ಕಡೆಯಿಂದ ಬೆದರಿಕೆ ಇದೆ ಎಂದು ಪೊಲೀಸರ ರಕ್ಷಣೆ ಮೊರೆಹೋಗಿದ್ದ ಮಹಿಳೆ ಬೆಂಗಳೂರಿನಲ್ಲಿ ಅಸಹಜವಾಗಿ ಸಾವಿಗೀಡಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ 15ನೇ ಎಸಿಎಂಎಂ ಕೋರ್ಟಿನಿಂದ ಜಾಮೀನು ಪಡೆದುಕೊಂಡಿರುವ ಬಾಬುರಾವ್ ಅವರ ವಿರುದ್ಧ ವಂಚನೆ ಹಾಗೂ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದ ಅಂಜನಾ ವಿ ಶಾಂತವೀರ ಎಂಬ ಮಹಿಳೆ ಸಾವಿಗೀಡಾದವರು. ನಾಗರಭಾವಿಯ ತಮ್ಮ ಸ್ವಗೃಹದಲ್ಲಿ ಅವರು ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಚಂದ್ರಾಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಜವಳಿ ಮತ್ತು ಅಂತರಿಕ ಸಾರಿಗೆ, ಬಂದರು ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ಅವರ ಮೇಲೆ ಕೋಟ್ಯಂತರ ರುಪಾಯಿ ವಂಚನೆ ಆರೋಪ ಹೊರೆಸಿದ್ದ ಅಂಜನಾ, ಕ್ರಮ ಜರುಗಿಸಲು ಅನುಮತಿ ನೀಡುವಂತೆ ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ದೂರು ನೀಡಿದ್ದರು. ಅಷ್ಟೆ ಅಲ್ಲ, ಸಚಿವ ಬಾಬುರಾವ್ ಚಿಂಚನಸೂರ್ ಕಡೆಯಿಂದ ಪ್ರಾಣ ಬೆದರಿಕೆ ಇದೆ ಎಂದು ಅಂದಿನ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರಿಗೆ ದೂರು ನೀಡಿದ್ದರು.

ಅಂಜನಾ ವಿ. ಶಾಂತವೀರ್ ಅವರು ಸುಮಾರು 11 ಕೋಟಿ 88 ಲಕ್ಷ ರೂಪಾಯಿಗಳನ್ನು ಸಚಿವ ಬಾಬುರಾವ್ ಚಿಂಚನಸೂರ್ ಅವರು ಸಾಲ ರೂಪದಲ್ಲಿ ಪಡೆದುಕೊಂಡಿದ್ದರು. ಅದರೆ, ಹಲವಾರು ವರ್ಷಗಳು ಕಳೆದರೂ ಸಾಲ ವಾಪಸ್ ಮಾಡಿಲ್ಲ ಹಾಗೂ ಅವರು ನೀಡಿದ ಚೆಕ್ ಗಳು ಬೌನ್ಸ್ ಆಗಿದೆ. ಅವರು ಸಚಿವರಾಗಿದ್ದ ಕಾಲದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಅನುಮತಿ ನೀಡಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಲ್ಲಿ ಅಂಜನಾ ಅವರು ಬೇಡಿಕೊಂಡಿದ್ದರು. ಆದರೆ ನಂತರ ಈ ಪ್ರಕರಣಕ್ಕೆ ಕುರಿತಂತೆ ರಾಜ್ಯಪಾಲರ ಮೊರೆ ಹೋಗಲು ಕಾಗೋಡು ತಿಮ್ಮಪ್ಪ ಅವರು ಸೂಚಿಸಿದ್ದರು.

"ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಆಕೆಯ ಆರೋಪದ ವಿರುದ್ಧವೇ ನಾನು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ" ಎಂದು ಬಾಬುರಾವ್ ಅಂದು ಪ್ರತಿಕ್ರಿಯಿಸಿದ್ದರು.

 ಬಾಬುರಾವ್ ವಿರುದ್ಧ ನಿರಂತರ ಹೋರಾಟ

ಬಾಬುರಾವ್ ವಿರುದ್ಧ ನಿರಂತರ ಹೋರಾಟ

12% ವಾರ್ಷಿಕ ಬಡ್ಡಿದರದಲ್ಲಿ 11.88 ಲಕ್ಷ ರು ನಗದನ್ನು ಉದ್ಯಮಿಯಾಗಿರುವ ಅಂಜನಾ ಅವರಿಂದ ಚಿಂಚನಸೂರ್ ಪಡೆದುಕೊಂಡಿದ್ದರು. ಸಾಲ ಹಿಂತಿರುಗಿಸಲು ನೀಡಿದ ಅವಧಿ ಮುಗಿದಿತ್ತು. ಚಿಂಚನಸೂರ್ ಪಡೆದ ಸಾಲಕ್ಕೆ ಬದಲಾಗಿ ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿದ್ದವು. ಕ್ರಿಮಿನಲ್ ಪ್ರಕರಣ ದಾಖಲಿಸಿದ್ದ ಅಂಜನಾ ಕಾನೂನು ಹೋರಾಟ ನಡೆಸಿದ್ದರು. ನಾಗರಭಾವಿಯಲ್ಲಿ ನೆಲೆಸಿದ್ದ ಅಂಜನಾ ಹೆಚ್ಚು ಕಾಲ ಏಕಾಂಗಿಯಾಗಿ ತನಗಾದ ಅನ್ಯಾಯದ ವಿರುದ್ಧ ನೊಂದುಕೊಂಡಿದ್ದರು. ಆದರೆ ಬೆದರಿಕೆ, ಪೊಲೀಸ್ ತನಿಖೆ ವಿಳಂಬ ಯಾವುದಕ್ಕೂ ಜಗ್ಗದೆ ಕೋರ್ಟ್ ಕಚೇರಿ ಅಲೆದಾಟ ಮುಂದುವರೆಸಿದ್ದರು ಎಂದು ಪುತ್ರ ಸುಮಂತ್ ಕಣ್ಣೀರಿಟ್ಟಿದ್ದರು. ಅಕ್ಟೋಬರ್ 30ರಂದು ಅಂಜನಾ ಆತ್ಮಹತ್ಯೆ ಶರಣಾಗಿದ್ದು, ಪೊಲೀಸರಿಗೆ ಅಕ್ಟೋಬರ್ 31ರಂದು ವಿಷಯ ಮುಟ್ಟಿದೆ.

 ಅಂಜನಾ ಸಾವಿನ ಪ್ರಕರಣ ಗೊಂದಲ

ಅಂಜನಾ ಸಾವಿನ ಪ್ರಕರಣ ಗೊಂದಲ

ಮಾಜಿ ಸಚಿವ ಬಾಬುರಾವ್ ಅವರ ಕಡೆಯವರಿಂದ ಬೆದರಿಕೆ ಇದೆ ಎಂದು ದೂರಿದ್ದರೂ ಅಂಜನಾಗೆ ಹೆಚ್ಚಿನ ರಕ್ಷಣೆ ಸಿಕ್ಕಿರಲಿಲ್ಲ. ಗಟ್ಟಿಗಿತ್ತಿ ಅಂಜನಾ ಆತ್ಮಹತ್ಯೆಗೆ ಬೆದರಿಕೆಯೇ ಕಾರಣವಾಯಿತೇ? ಪೊಲೀಸರು ಏನು ಹೇಳುತ್ತಿಲ್ಲ. ಎಫ್ಐಆರ್ ಕಾಪಿ ಕೂಡಾ ಇನ್ನೂ ಪೊಲೀಸ್ ವೆಬ್ ತಾಣದಲ್ಲಿ ಕಾಣಿಸಿಕೊಂಡಿಲ್ಲ. ಅಸಹಜ ಸಾವು ಪ್ರಕರಣ ಎಂದಷ್ಟೇ ಸದ್ಯಕ್ಕೆ ಲಭ್ಯ ಮಾಹಿತಿ. ಸಾಲದ ಮೊತ್ತ ಕೈ ಸೇರುತ್ತಿಲ್ಲ, ವ್ಯಾಪಾರ ವಹಿವಾಟಿನಲ್ಲಿ ಭಾರಿ ನಷ್ಟ ಅನುಭೈವಿಸಿದ್ದ ಆಕೆಯ ಪತಿ, ಮಾನಸಿಕ ಖಿನ್ನತೆ ಎಲ್ಲವೂ ಅಂಜನಾ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಪೊಲೀಸರು ತಮ್ಮ ರಿಪೋರ್ಟ್ ನಲ್ಲಿ ದಾಖಲಿಸಿದ್ದಾರೆ.

 ಬಾಬುರಾವ್ ಮೇಲೆ ಹಣ ಪಡೆದು ವಂಚನೆ

ಬಾಬುರಾವ್ ಮೇಲೆ ಹಣ ಪಡೆದು ವಂಚನೆ

ಚಿಂಚನಸೂರ್ ಅವರು ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಬಾಬೂರಾವ್ ಚಿಂಚನಸೂರ್ ಅವರು ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. ಆಂಧ್ರಪ್ರದೇಶದಲ್ಲಿ ಎಂ.ಎಲ್.ಸಿ ಮಾಡುವುದಾಗಿ ಹೇಳಿ ಲಕ್ಷಗಟ್ಟಲೆ ಹಣ ಪಡೆದು, ವಂಚಿಸಿದ್ದಾರೆ ಎಂದು ಹೈದರಾಬಾದ್ ಮೂಲದ ಡಿ.ವಿಜಯಪಾಲರೆಡ್ಡಿ ಎಂಬುವವರು ಹಿಂದೆ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

"ಬಾಬುರಾವ್ ಅವರು 2.5 ಕೋಟಿ ರು. ಕೇಳಿದ್ದರು. 1.5 ಕೋಟಿ ರು. ಕೊಡುವುದಾಗಿ ಕೊನೆಗೆ ಒಪ್ಪಂದವಾಗಿತ್ತು. ಅದರಲ್ಲಿ 85 ಲಕ್ಷ ರು. ಹಣವನ್ನು ಮುಂಗಡವಾಗಿ ನೀಡಲಾಗಿದೆ. ಆದರೆ, ತಮ್ಮನ್ನು ಎಲ್‌ಸಿಯನ್ನಾಗಿಯೂ ಮಾಡಿಲ್ಲ, ಹಣವನ್ನೂ ಹಿಂದಿರುಗಿಸಿಲ್ಲ, ಶಾಸಕ ಬಾಬುರಾವ್ ಚಿಂಚನಸೂರ್ ಅವರಿಗೆ ಹಣ ನೀಡುವ ಸಂದರ್ಭದಲ್ಲಿ ಡಾ.ಅಜೇಯ್ ಜಾಧವ್ ಹಾಗೂ ಅಣ್ಣಾರಾವ್ ಮುತ್ತುಟ್ಟಿ ಜೊತೆ ಇದ್ದರು. ಹಣ ಪಡೆದಿರುವ ಚಿಂಚನಸೂರ್ ವಾಪಸ್ಸು ನೀಡುವುದಾಗಿ ಕಳೆದ ಎರಡು ವರ್ಷದಿಂದ ಸುಳ್ಳು ಹೇಳುತ್ತಾ ತಮ್ಮನ್ನು ಸಂಕಷ್ಟದಲ್ಲಿ ದೂಡಿದ್ದಾರೆ" ಎಂದು ನಮ್ಮ ಪ್ರತಿನಿಧಿ ಹೈದರಾಬಾದ್ ಮೂಲದ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಡಿ.ವಿಜಯಪಾಲರೆಡ್ಡಿ ಈ ಹಿಂದೆ ನೋವು ತೋಡಿಕೊಂಡಿದ್ದರು.

 ಕಾಂಗ್ರೆಸ್ ನಾಲ್ಕು ಹೋಳಾಗಲಿದೆ: ಚಿಂಚನಸೂರ್

ಕಾಂಗ್ರೆಸ್ ನಾಲ್ಕು ಹೋಳಾಗಲಿದೆ: ಚಿಂಚನಸೂರ್

ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಲೋಕಾಯುಕ್ತರ ಬಲೆಗೆ ಬಿದ್ದು ಆರೋಪ ಮುಕ್ತರಾಗಿರುವ ಶಾಸಕ ಬಾಬುರಾವ್ ಚಿಂಚನಸೂರ್ ಅವರು ಲೋಕಸಭೆ ಚುನಾವಣೆ 2019 ಬಳಿಕ ಕಾಂಗ್ರೆಸ್ ನಾಲ್ಕು ಹೋಳಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ದಿನೇಶ್ ಗುಂಡುರಾವ್, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್ ಅವರ ನೇತೃತ್ವದಲ್ಲಿ ನಾಲ್ಕು ಹೋಳಾಗಲಿದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದರು. ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್ ಪರ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಾಗ ಚಿಂಚನಸೂರ್ ಅವರಿಗೂ ಬೆದರಿಕೆ ಕರೆಗಳು ಬಂದಿದ್ದವು. ಸೂರ್ಯ ಚಂದ್ರರಷ್ಟೇ ಸತ್ಯವಾಗಿ ಯಡಿಯೂರಪ್ಪನವರು ಸಿಎಂ ಆಗುವುದು ಸತ್ಯ ಎಂದಿದ್ದರು.

 ಕಲಬುರಗಿ ಮೂಲದ ಚಿಂಚನಸೂರ್

ಕಲಬುರಗಿ ಮೂಲದ ಚಿಂಚನಸೂರ್

ಕಲಬುರಗಿ ಮೂಲದ ಬಾಬುರಾವ್ ಅವರು ಬಸವಣ್ಣಪ್ಪ ಚಿಂಚನಸೂರ್ ಅವರ ಪುತ್ರರಾಗಿದ್ದು, ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎ ಗಳಿಸಿದ್ದಾರೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದಲ್ಲಿ ಜವಳಿ ಬಂದರು ಹಾಹ್ಗೂ ಒಳನಾಡು ಸಂಚಾರ ಸಚಿವರಾಗಿದ್ದವರು. ಐದು ಬಾರಿ ಶಾಸಕರಾಗಿದ್ದ ಚಿಂಚನಸೂರ್ ಅವರು ಕೋಲಿ ಸಮುದಾಯ ನಾಯಕರಾಗಿದ್ದು, ಗುರುಮಿಠಕಲ್ ನಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅಪ್ತರಾಗಿ ಗುರುತಿಸಿಕೊಂಡಿದ್ದ ಚಿಂಚನಸೂರ್ ಅವರು ಸಾಧ್ವಿ ನಿರಂಜನ್ ಜ್ಯೋತಿ, ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಕಳೆದ ವರ್ಷ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಖರ್ಗೆ ಸೋಲಿಸುವ ಪಣ ತೊಟ್ಟು ಗೆದ್ದರು. ಬಳುವಳಿಯಾಗಿ ಕೋಲಿ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದರು.

ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿದು ಗೆದ್ದು ಮೊದಲ ಬಾರಿ ಲೋಕಸಭೆಗೆ ಪ್ರವೇಶಿಸಿದರು. ಘಟನೆ ಕುರಿತು ಪ್ರತಿಕ್ರಿಯೆಗಾಗಿ ಬಾಬುರಾವ್ ಚಿಂಚನಸೂರ್ ಅವರನ್ನು ಸಂಪರ್ಕಿಸಲಾಯಿತಾರೂ ಯಾವುದೇ ಮಾಹಿತಿ ಅವರ ಕಡೆಯಿಂದ ಲಭ್ಯವಾಗಲಿಲ್ಲ.

English summary
Anjana V Shantaveer death: woman who sought protection from former minister Babu rao Chinchansur has died unnaturally in Nagarabhavi Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X