Save Nandini: ನಂದಿನಿ ಪರ ಹೋರಾಟದಿಂದ 'ಅಮೂಲ್'ಗೆ ಅನುಮತಿವರೆಗೆ: ಡಿಕೆ ಶಿವಕುಮಾರ್ ಡಬಲ್ ಸ್ಟ್ಯಾಂಡರ್ಡ್!
ಬೆಂಗಳೂರು, ಜೂನ್ 18: ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹಾಲಿನ ಮಳಿಗೆ ನಿರ್ಮಿಸುವ ವಿಚಾರದಲ್ಲಿ ರಾಜಕೀಯ ಶುರುವಾಗಿದೆ. ಎಂಟು ಕಡೆಗಳಲ್ಲಿ ಗುಜರಾತ್ ಹಾಲಿನ ಕಂಪನಿ 'ಅಮೂಲ್' ಮಳಿಗೆ ತೆರೆಯಲಿದೆ ಎಂಬ ವಿಚಾರ ಕೇಳಿ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಎರಡು ವರ್ಷಗಳ ಹಿಂದೆ 'ಅಮೂಲ್' ವಿರುದ್ಧ ಪ್ರತಿಭಟಿಸಿ ಸ್ಥಳೀಯ 'ನಂದಿನಿ' ಬ್ರ್ಯಾಂಡ್ ಬೆಂಬಲಿಸಿದ್ದ (Save Nandini Protest) ಡಿಕೆ ಶಿವಕುಮಾರ್ ಅವರು ಇಂದು ಎರಡು ಮೆಟ್ರೋ ನಿಲ್ದಾಣಗಳಲ್ಲಿ ಮಾತ್ರ 'ಅಮೂಲ್' ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ. ಇದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ.
ಮಳಿಗೆ ಸ್ಥಾಪಿಸಲು ಜಾಗತಿಕ ಟೆಂಡರ್ ಕರೆದಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೌಸ್ ಜರ್ನಲ್‌ನಲ್ಲಿ ಎಂಟು ಕಡೆ 'ಅಮೂಲ್' ಬ್ರ್ಯಾಂಡ್ ತೆರೆಯಲಿದೆ ಎಂದು ಮಾಹಿತಿ ಪ್ರಕಟಿಸಿತ್ತು. ಈ ವಿಚಾರ ಮತ್ತೆ ಸದ್ದು ಮಾಡುತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ನಂದಿನಿ ಹಾಲಿ ಉತ್ಪನ್ನಗಳಿಗೆ ಅವಕಾಶ ನೀಡಬೇಕು. ಇಲ್ಲವಾದರೆ ನಮ್ಮ ರಾಜ್ಯದ ರೈತರಿಗೆ ಅನ್ಯಾಯವಾಗುತ್ತದೆ ಎಂದು ಆಗ್ರಹಿಸಿದರು. ಬಿಜೆಪಿ ನಾಯಕರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅಮೂಲ್ ವಿರುದ್ಧ ಪ್ರತಿಭಟಿಸಿದ್ದ ಡಿಕೆಶಿ
2023ರಲ್ಲಿ 'ಅಮುಲ್' ಬ್ರ್ಯಾಂಡ್ ಕರ್ನಾಟಕ ಪ್ರವೇಶಿಸಲಿದೆ. ಇಲ್ಲಿನ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ ಎಂಬೆಲ್ಲ ಸುದ್ದಿ ವಿರುದ್ಧ ಬಿಜೆಪಿ ನಾಯಕರು ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ಆರೋಪ ಪ್ರತ್ಯಾರೋಪ ಕೇಳಿ ಬಂದಿದ್ದವು. ಅಮಿತ್ ಶಾ ಅವರು ಸಹ ಅಮುಲ್ ಕರ್ನಾಟಕ ಪ್ರವೇಶ ಕುರಿತು ಮಾತನಾಡಿದ್ದನ್ನು ಕಾಂಗ್ರೆಸ್ ಕಟುವಾಗಿ ವಿರೋಧಿಸಿತ್ತು. ಆಗ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿರುವ ಇಂದಿನ ಡಿಸಿಎಂ ಡಿಕೆ ಶಿವಕುಮಾರ್ ಅವರು ಕರ್ನಾಟಕದ 70 ಲಕ್ಷ ರೈತರ ಪರ ಧ್ವನಿ ಎತ್ತಿದ್ದರು. 'ಅಮೂಲ್' ವಿರುದ್ಧ ಪ್ರತಿಭಟನೆ ಮಾಡಿದ್ದರು. ಹಾಸನ 'ನಂದಿನಿ' ಮಳಿಗೆಯಲ್ಲಿ ಹಾಲು ಕುಡಿದು ಇದು 'ಅಮೂಲ್' ಗಿಂತ ಉತ್ತಮವಾಗಿದೆ ಎಂದು ಬೆಂಬಲಿಸಿದ್ದರು.
ಅಮೂಲ್‌ಗೆ ಎರಡು ಕಡೆ ಅವಕಾಶ: ಡಿಕೆಶಿ
ಎರಡೇ ವರ್ಷದಲ್ಲಿ ಡಿಕೆ ಶಿವಕುಮಾರ್ ಅವರು 'ಅಮೂಲ್' ಕುರಿತ ತಮ್ಮ ನಿಲುವು ಬದಲಿಸಿಕೊಂಡಂತಿದೆ. ಇಂದಿನ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಎಂಆರ್‌ಸಿಎಲ್ ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ಸ್ಥಾಪನೆಗೆ ಜಾಗತಿಕ ಟೆಂಡರ್ ಕರೆದಿತ್ತು. ಆಗ 'ಅಮೂಲ್' ಅರ್ಜಿ ಸಲ್ಲಿಸಿತ್ತು. 'ಕೆಎಂಎಫ್' ಮಳಿಗೆ ಕುರಿತು ಅರ್ಜಿ ಸಲ್ಲಿಸಿರಲಿಲ್ಲ. ಸರ್ಕಾರವೇ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಸದ್ಯ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಎಂಟು ಕಡೆ ನಂದಿನಿಗೆ, ಎರಡು ಕಡೆ 'ಅಮೂಲ್' ಮಳಿಗೆ ತೆರೆಲು ಅವಕಾಶ ನೀಡಲಾಗಿದೆ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್‌ನ ಈ ದ್ವಂದ್ವ ನೀತಿಗೆ ರಾಜ್ಯದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಾಸನದ ನಂದಿನಿ ಮಳಿಗೆಗೆ ಇಂದು ಭೇಟಿ ನೀಡಿ ಹಾಲಿನ ಉತ್ಪನ್ನಗಳನ್ನು ಖರೀದಿಸಿದೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರಾಂಡ್ಅನ್ನು ಹೈಜಾಕ್ ಮಾಡಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ಇದು ನೆನಪಿರಲಿ ಕನ್ನಡಿಗರು ಎಂದಿಗೂ ತಮ್ಮ ಸ್ವಾಭಿಮಾನ ಮಾರಿಕೊಳ್ಳುವುದಿಲ್ಲ. pic.twitter.com/k6qs0SGlUs
— DK Shivakumar (@DKShivakumar) April 10, 2023
ಡಿಕೆಶಿ ನವರಂಗಿ ಆಟ ಬಯಲು
ಸ್ಥಳೀಯ ಬ್ರ್ಯಾಂಡ್ ಬಿಟ್ಟು ಬೇರೆ ಕಂಪನಿಗಳಿಗೆ ಮಣೆ ಹಾಕಿರುವ ಡುಪ್ಲಿಕೇಟ್ ಸಿಎಂ ಡಿಕೆ ಶಿವಕುಮಾರ್ ಅವರ ನವರಂಗಿ ಆಟ ಬಯಲಾಗಿದೆ. ಈ ಮೊದಲು ಸೇವ್ ನಂದಿನಿ ಎಂದವರು, ಈಗ ಅಮೂಲ್ ಪರವಾಗಿದ್ದಾರೆ ಎಂದು ಜೆಡಿಎಸ್ ಡಿಕೆಶಿ ವಿರುದ್ಧ ಗುಡುಗಿದೆ.
ನಮ್ಮ ನಂದಿನಿ ನಮ್ಮ ಹೆಮ್ಮೆ:
— DK Shivakumar (@DKShivakumar) June 18, 2025
ಮೆಟ್ರೋಗಳಲ್ಲಿ 8 ನಂದಿನಿ ಮಳಿಗೆ ತೆರೆಯಲು ಸೂಚನೆ
ಬಿಎಂಆರ್ ಸಿಎಲ್ ಅವರು ಟೆಂಡರ್ ಕರೆದಿದ್ದು, ಅಮೂಲ್ ಹೊರತಾಗಿ ಬೇರೆ ಯಾರೂ ಮಳಿಗೆಗಳಿಗೆ ಅರ್ಜಿ ಹಾಕಿಲ್ಲ. ಕೆಎಂಎಫ್ ಕೂಡ ಅರ್ಜಿ ಹಾಕಿರಲಿಲ್ಲ. ಈಗ ಕೆಎಂಎಫ್ ನವರಿಗೆ ನಾವು ಅರ್ಜಿ ಹಾಕುವಂತೆ ಸೂಚಿಸಿದ್ದು, ಟೆಂಡರ್ ಕರೆಯಲಾಗಿದ್ದ 10 ಕಡೆಗಳ ಪೈಕಿ ಎರಡು ಕಡೆ… pic.twitter.com/XkJqtePtgQ
ಸೇವ್ ನಂದಿನಿ ಅಭಿಯಾನ ಪುನಾರಂಭ..
ಅಂದು ಸೇವ್ ನಂದಿನಿ (Save Nandini) ಕಾಂಗ್ರೆಸ್ ಇಂದು ಸಾರ್ವಜನಿಕರು ಸೇವ್ ನಂದಿನಿ ಎಂದು ಆಗ್ರಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸೇವ್ ನಂದಿನಿ ಟ್ರೆಂಡ್ ಆಗುತ್ತಿದೆ. ಸ್ಥಳೀಯ ಕೆಎಂಫ್ ನಂದಿನಿ ಬ್ರ್ಯಾಂಡ್‌ಗಳಿಗೆ ಅದ್ಯತೆ ನೀಡಬೇಕು. ಸರ್ಕಾರದ 'ಅಮೂಲ್' ಪರವಾದ ನಿರ್ಧಾರ ಸರಿಯಲ್ಲ ಎಂದು ದೂರುತ್ತಿದ್ದಾರೆ.












Click it and Unblock the Notifications