ನೃಪತುಂಗ ವಿವಿಗೆ ಅಮಿತ್ ಶಾರಿಂದ ಉದ್ಘಾಟನೆ, ಸಚಿವ ಅಶ್ವಥ್‌ರಿಂದ ಸಿದ್ಧತೆ ಪರಿಶೀಲನೆ
ಬೆಂಗಳೂರು, ಮೇ 1 : ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ'ದಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ನೃಪತುಂಗ ವಿಶ್ವವಿದ್ಯಾಲಯಕ್ಕೆ ಮೇ 3ರ ಮಂಗಳವಾರದಂದು ಅಧಿಕೃತವಾಗಿ ಚಾಲನೆ ಸಿಗಲಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಅಮಿತ್ ಶಾ ಕೂಡ ಆಗಮಿಸಲಿದ್ದು, ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುಚ್ಚಯಕ್ಕೆ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ. ಈ ಹಿನ್ನಲೆ ಕಾರ್ಯಕ್ರಮಕ್ಕೆ ನಡೆದಿರುವ ಸಿದ್ದತೆಗಳ ಕುರಿತಾಗಿ ಇಂದು ಖುದ್ದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಯಣ ಕಾರ್ಯಕ್ರಮದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಕಾರ್ಯಕ್ರಮದ ಸಿದ್ದತೆಯ ಕುರಿತಾಗಿ ಮಾತನಾಡಿದ ಸಚಿವರು, ನೃಪತುಂಗ ವಿವಿ ಉದ್ಘಾಟನೆ ಕಾರ್ಯಕ್ರಮವನ್ನು ಚಾರಿತ್ರಿಕ ಸಮಾರಂಭವನ್ನಾಗಿ ಮಾಡಿ, ಸ್ಮರಣೀಯಗೊಳಿಸಲಾಗುವುದು. ಇನ್ನು ಸರಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ 5 ಸಾವಿರ ಜನ ಭಾಗವಹಿಸಲಿದ್ದಾರೆ' ಎಂದರು. ಅಲ್ಲದೆ ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 100 ವರ್ಷಗಳ ಹಿಂದೆ (1921ರಲ್ಲಿ) ಸ್ಥಾಪಿಸಿದ ಈ ಸಂಸ್ಥೆಯು ಹಂತಹಂತವಾಗಿ ಬೆಳೆದು ಬಂದಿದೆ. ಈಗ ಪೂರ್ಣ ವಿಶ್ವವಿದ್ಯಾಲಯದ ರೂಪವನ್ನು ಪಡೆಯುತ್ತಿದೆ. ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಗಳು ಶೈಕ್ಷಣಿಕ ಕ್ರಾಂತಿ ಮಾಡಲು ಸಂಕಲ್ಪ ಮಾಡಿರುವುದರ ಫಲವಿದು'ಎಂದು ಹೇಳಿದರು.
ನೃಪತುಂಗ ವಿಶ್ವ ವಿದ್ಯಾಲಯದಲ್ಲಿ ಬಿ.ಎಸ್ಸಿ ಮತ್ತು ಬಿಸಿಎ ಪದವಿಗಳಡಿ 24 ಕೋರ್ಸುಗಳು, 7 ಸ್ನಾತಕೋತ್ತರ ಶಿಸ್ತುಗಳು ಮತ್ತು 3 ಸಂಶೋಧನಾ ಕೇಂದ್ರಗಳು ಇರಲಿವೆ. ಈ ವಿಶ್ವವಿದ್ಯಾಲಯಕ್ಕೆ ಕೇಂದ್ರ ಸರ್ಕಾರವು 55 ಕೋಟಿ ರೂ.ಗಳಷ್ಟು ಅನುದಾನವನ್ನು ಮಂಜೂರು ಮಾಡಿದೆ. ಈ ಮೂಲಕ ನೃಪತುಂಗ ವಿ.ವಿ.ವನ್ನು ಜಾಗತಿಕ ಗುಣಮಟ್ಟದ ಸಂಸ್ಥೆಯಾಗಿ ರೂಪಿಸಲಾಗುವುದು ಎಂದು ಸಚಿವರು ವಿವರಿಸಿದರು.

ಭಾರತವನ್ನು ಜ್ಞಾನದ ರಾಜಧಾನಿಯನ್ನಾಗಿ ಮಾಡಬೇಕೆಂಬ ಮಹತ್ತ್ವಾಕಾಂಕ್ಷೆಯಿಂದ ಪ್ರಧಾನಿ ಮೋದಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಪಠ್ಯದ ಕಲಿಕೆಯ ಜೊತೆಗೆ ಕೌಶಲ್ಯಾಭಿವೃದ್ಧಿಗೂ ಆದ್ಯ ಗಮನ ಕೊಡಲಾಗಿದೆ. ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ನೃಪತುಂಗ ವಿ.ವಿ. ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು, ಮುಂದಡಿ ಇಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ನೃಪತುಂಗ ವಿವಿ ಕುಲಪತಿ ಶ್ರೀನಿವಾಸ ಬಳ್ಳಿ, ಕುಲಸಚಿವ ರಾಮಕೃಷ್ಣ ರೆಡ್ಡಿ ಸೇರಿದಂತೆ ಸಿಬ್ಬಂದಿ ಇದ್ದರು.












Click it and Unblock the Notifications